ಯಮುನಾ ತೀರದ ಪರಿಸರ ಹಾನಿಗೆ ಶ್ರೀಶ್ರೀ ರವಿಶಂಕರ ಗುರೂಜಿ ಆರ್ಟ್ ಆಫ್ ಲಿವಿಂಗ್ ಹೊಣೆ –ಎನ್‌ಜಿಟಿ

ನವದೆಹಲಿ: ವಿಶ್ವ ಸಾಂಸ್ಕೃತಿಕ ಉತ್ಸವ ಆಯೋಜಿಸಿ ಯಮುನಾ ನದಿ ದಂಡೆಯ ಪರಿಸರಕ್ಕೆ ಹಾನಿಯಾಗಿರುವುದಕ್ಕೆ ಶ್ರೀಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹೊಣೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ) ಗುರುವಾರ ಹೇಳಿದೆ.
ದೆಹಲಿಯ ಹೊರವಲಯದಲ್ಲಿರುವ ಯಮುನಾ ನದಿ ದಂಡೆಯ ಮೇಲೆ ಆರ್ಟ್ ಆಫ್ ಲಿವಿಂಗ್ 2016ರ ಮಾರ್ಚ್‌ನಲ್ಲಿ ಸಾಂಸ್ಕೃತಿಕ ಉತ್ಸವ ಆಯೋಜಿಸಿತ್ತು.
ಎನ್‌ಜಿಟಿಯ ಅಧ್ಯಕ್ಷ ಸ್ವತಂತ್ರ ಕುಮಾರ್ ಅವರ ನೇತೃತ್ವದ ಪೀಠ, ಯಮುನಾ ತೀರದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಆಯೋಜನೆಯಿಂದ ಅಲ್ಲಿನ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆ ದಂಡ ಪಾವತಿ ಮಾಡಿದ ಬಳಿಕ, ಆ ಹಣವನ್ನು ನದಿ ತಿರದ ಪರಿಸರ ಪುನರುಜ್ಜೀವನ ಯೋಜನೆಗಳಿಗೆ ಬಳಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ(ಡಿಡಿಎ) ಸೂಚಿಸಿದೆ.
ಪರಿಸರ ಹಾನಿ ಮಧ್ಯಂತರ ಪರಿಹಾರವಾಗಿ ಆರ್ಟ್ ಆಫ್ ಲಿವಿಂಗ್‌ಗೆ ಈಗ ಯಾವುದೆ ಹೆಚ್ಚುವರಿ ದಂಡ ವಿಧಿಸುವುದಿಲ್ಲ. ಎನ್‌ಜಿಟಿ ಈ ಹಿಂದೆ ವಿಧಿಸಿದ್ದ ₹ 5 ಕೋಟಿ ಪರಿಸರ ಹಾನಿ ಪರಿಹಾರವನ್ನು ನದಿ ತೀರದ ಪರಿಸರ ಪುನರುಜ್ಜೀವನಗೊಳಿಸಲು ಬಳಸಿ ಎಂದು ಪೀಠ ಹೇಳಿದೆ.
‘ತಜ್ಞ ಸಮಿತಿಯಿಂದ ಸಲ್ಲಿಸಿದ ವರದಿಯ ಪ್ರಕಾರ, ಯಮುನಾ ತೀರಕ್ಕೆ ಹಾನಿಯಾಗುವ ಕುರಿತು ನಾವು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಜವಾಬ್ದಾರರನ್ನಾಸುತ್ತೇವೆ’ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿ ಜಾವದ್ ರಹೀಮ್ ಮತ್ತು ತಜ್ಞ ಸದಸ್ಯರಾದ ಬಿ.ಎಸ್. ಸಜ್ವಾನ್ ಅವರನ್ನೊಳಗೊಂಡ ಪೀಠ, ನದಿ ತೀರದಲ್ಲಿ ಉಂಟಾದ ಹಾನಿಯನ್ನು ನಿರ್ಣಯಿಸಲು ಮತ್ತು ತಜ್ಞರ ಸಮಿತಿಯ ಶಿಫಾರಸಿನ ಅನುಸಾರವಾಗಿ ಪುನಃ ವೆಚ್ಚವನ್ನು ಲೆಕ್ಕಹಾಕಲು ಡಿಡಿಎಗೆ ನಿರ್ದೇಶನ ನೀಡಿದೆ.
ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿ ತೀರ ಹಾನಿಗೊಳಗಾಗಿದೆ ಎಂದು ಎನ್‌ಜಿಟಿ ರಚಿಸಿದ್ದ ತಜ್ಞರ ಸಮಿತಿ ವರದಿ ಸಲ್ಲಿಸಿದ್ದರಿಂದ ನದಿ ತೀರದ ಪುನರುಜ್ಜೀವನಕ್ಕಾಗಿ ಪರಿಸರ ಪರಿಹಾರದ ರೂಪದಲ್ಲಿ ₹ 42 ಕೋಟಿ ದಂಡ ಪಾವತಿಸಬೇಕು ಎಂದು ಎನ್‌ಜಿಟಿ ಈ ಹಿಂದೆ ಆದೇಶಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.