ಗುರುವಾರ , ಫೆಬ್ರವರಿ 25, 2021
27 °C
ಯುನೆಸ್ಕೊ: ವಿಶ್ವಸಂಸ್ಥೆಯ ಅಂತರಸರ್ಕಾರೀಯ ಸಮಿತಿ ನಿರ್ಣಯ

ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ

ಪಿಟಿಐ Updated:

ಅಕ್ಷರ ಗಾತ್ರ : | |

ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಕುಂಭಮೇಳ

ನವದೆಹಲಿ: ಭಾರತದಲ್ಲಿ ಪ್ರತಿವರ್ಷ ನಡೆಯುವ ಕುಂಭಮೇಳವನ್ನು ‘ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ’ ಎಂದು ಯುನೆಸ್ಕೊ ಗೌರವಿಸಿದೆ. ಈ ಕುರಿತು ಯುನೆಸ್ಕೊ ಟ್ವೀಟ್ ಮಾಡಿದೆ.

ದಕ್ಷಿಣ ಆಫ್ರಿಕಾದ ಜೆಜುವಿನಲ್ಲಿ ಸಭೆ ಸೇರಿದ, ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ರಚಿಸಲಾದ ವಿಶ್ವಸಂಸ್ಥೆಯ ಅಂತರಸರ್ಕಾರೀಯ ಸಮಿತಿಯು ಕುಂಭಮೇಳವನ್ನು ‘ಮನುಕುಲದ ಅತ್ಯಂತ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಪ್ರತಿನಿಧಿ ಪಟ್ಟಿ’ಯಲ್ಲಿ ಗುರುತಿಸಿದೆ.

‘ಇದು ನಮಗೆ ಹೆಮ್ಮೆಯ ಸಂಗತಿ. ಜಾತಿ, ಮತ, ಲಿಂಗಭೇದವನ್ನು ಮರೆತು ಲಕ್ಷಾಂತರ ಯಾತ್ರಿಗಳು ಈ ಮೇಳದಲ್ಲಿ ಭಾಗವಹಿಸುತ್ತಾರೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ಧಾರ್ಮಿಕ ಪ್ರವಾಸಿಗರು ಪಾಲ್ಗೊಳ್ಳುವ ವಿಶ್ವದ ಬೃಹತ್ ಆಚರಣೆ ಎಂದು ಕುಂಭಮೇಳವನ್ನು ಪರಿಗಣಿಸಲಾಗಿದೆ. ಅಲಹಾಬಾದ್, ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್‌ಗಳಲ್ಲಿ ಭಕ್ತರು ಪವಿತ್ರ ನದಿಗಳಲ್ಲಿ ಕುಂಭಮೇಳ ಸ್ನಾನ ಮಾಡುತ್ತಾರೆ.

‘ಸಂತರು, ಸಾಧುಗಳು ತಮ್ಮ ಶಿಷ್ಯರಿಗೆ ಪಾರಂಪರಿಕ ಆಚರಣೆ ಮತ್ತು ಪಠಣಗಳ ಬಗ್ಗೆ ತಿಳಿಸುತ್ತಿದ್ದರು. ಈ ಗುರು–ಶಿಷ್ಯ ಪರಂಪರೆಯ ಮೂಲಕವೇ ಕುಂಭಮೇಳಕ್ಕೆ ಸಂಬಂಧಿಸಿದ ಜ್ಞಾನ ಮತ್ತು ಕೌಶಲವು ಪ್ರವಹಿಸುತ್ತಾ ಬಂದಿದೆ’ ಎಂದು ಸಮಿತಿಯು ಹೇಳಿದೆ.

ಕೊಲಂಬಿಯಾ, ಬೊಟ್ಸ್‌ವಾನಾ, ವೆನಿಜುವೆಲ, ಮಂಗೋಲಿಯ, ಮೊರಾಕ್ಕೊ, ಟರ್ಕಿ ಹಾಗೂ ಅರಬ್ ಸಂಯುಕ್ತ ಒಕ್ಕೂಟಗಳಲ್ಲಿ ನಡೆಯುವ ಕೆಲವು ಆಚರಣೆಗಳನ್ನೂ ಪಟ್ಟಿಗೆ ಸೇರಿಸಲಾಗಿದೆ.

ಈ ಪಟ್ಟಿಗೆ ಸೇರುವುದರಿಂದ, ಸಾಂಸ್ಕೃತಿಕ ಪರಂಪರೆ ಆಚರಣೆಯಲ್ಲಿ ಭಾಗವಹಿಸಲು ಮತ್ತು ಅವುಗಳನ್ನು ಪ್ರಚುರಪಡಿಸಲು ಅಂತರರಾಷ್ಟ್ರೀಯ ಸಹಕಾರ ಸಿಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.