ಭಾನುವಾರ, ಮಾರ್ಚ್ 7, 2021
22 °C

‘ಸಿ.ಎಂ.ಗೆ ಆಹ್ವಾನವೇ ಹಾಸ್ಯಾಸ್ಪದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿ.ಎಂ.ಗೆ ಆಹ್ವಾನವೇ ಹಾಸ್ಯಾಸ್ಪದ’

ಹಾವೇರಿ: ‘ಸ್ವತಃ ಗೆಲ್ಲುವುದೇ ಸಾಧ್ಯವಿರದ ಮಾಜಿ ಶಾಸಕ ಬಿ.ಸಿ. ಪಾಟೀಲರು, ಸಿ.ಎಂ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನಿಸಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಶಾಸಕ ಯು.ಬಿ. ಬಣಕಾರ ಲೇವಡಿ ಮಾಡಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯುಲ್ಲಿ ಮಾತನಾಡಿದ ಅವರು, ‘ಹಿರೇಕೆರೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಸಮಾವೇಶವು ಅವ್ಯವಸ್ಥೆಯಿಂದ ಕೂಡಿರುವುದನ್ನು ದೃಶ್ಯ ಮಾಧ್ಯಮಗಳ ಮೂಲಕ ನೋಡಿದ್ದೇನೆ. ಆರಂಭದಲ್ಲಿ ಒಂದು ಲಕ್ಷ ಜನ ಸೇರಿಸುವುದಾಗಿ ಹೇಳಿದ್ದ ಬಿ.ಸಿ. ಪಾಟೀಲರು, ಕೇವಲ 4,300 ಕುರ್ಚಿಗಳನ್ನು ಹಾಕಿಸಿದ್ದರು. ಅದೂ ಭರ್ತಿಯಾಗಿರಲಿಲ್ಲ. ಬಂದಿದ್ದ ಜನರನ್ನೂ ಸಮರ್ಪಕವಾಗಿ ನಿರ್ವಹಿಸದ ಕಾರಣ ಅವ್ಯವಸ್ಥೆಯಾಗಿತ್ತು’ ಎಂದರು.

‘25ರಿಂದ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ಧೈರ್ಯವಿದ್ದರೆ ಮಾತ್ರ, ಪಕ್ಷದ ನಾಯಕರನ್ನು ಆಹ್ವಾನಿಸುತ್ತಾರೆ. ಆದರೆ, ಹೇಳಿದಂತೆ ಸಮಾವೇಶವೇ ಸಂಘಟಿಸದ ಅವರು, ಸಿ.ಎಂ.ಗೆ ಆಹ್ವಾನ ನೀಡಿದ್ದಾರೆ’ ಎಂದು ಹಾಸ್ಯವಾಡಿದರು.

ಸಿ.ಎಂ. ಸೌಜನ್ಯ: ‘ಸಿ.ಎಂ. ಜವಾಬ್ದಾರಿಯುತವಾಗಿ ಮಾತನಾಡಬೇಕಿತ್ತು. ಆದರೆ, ಬಿ.ಸಿ.ಪಾಟೀಲರು ದಿಕ್ಕು ತಪ್ಪಿಸಿದರು’ ಎಂದ ಅವರು, ‘ಕ್ಷೇತ್ರದ ಸಲುವಾಗಿ ಹಲವು ಬಾರಿ ಸಿ.ಎಂ. ಭೇಟಿಯಾಗಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಮೂಲಕ ಕ್ಷೇತ್ರದಲ್ಲಿ ₹ 92 ಲಕ್ಷ ಪರಿಹಾರ ಕೊಡಿಸಿದ್ದೇನೆ. ಆ ಚೆಕ್‌ ಗಳನ್ನು ಹಿಡಿದುಕೊಂಡು ಬಿ.ಸಿ. ಪಾಟೀಲರು ಮಾಧ್ಯಮಗಳಿಗೆ ಫೋಟೊ ನೀಡಿದ್ದಾರೆ’ ಎಂದು ಆರೋಪಿಸಿದರು.

‘ನನ್ನ ಕಾರ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ. ಬಿ.ಸಿ. ಪಾಟೀಲರು ಚರ್ಚೆಗೆ ಬರಬಹುದು’ ಎಂದ ಅವರು, ‘ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನೀರಾವರಿ ಯೋಜನೆಗಳ ಬಗ್ಗೆ ಘೋಷಣೆ ಮಾಡುತ್ತಿದೆ. ಮುಂದೆ ಬರುವ ನಮ್ಮ ಸರ್ಕಾರ ಜಾರಿ ಮಾಡಲಿದೆ’ ಎಂದರು.

ಯಾವುದು ಸಾಧನೆ: ‘ಈ ಹಿಂದೆ ಶಾಸಕ ರಾಗಿದ್ದ 9 ವರ್ಷಗಳು ಹಾಗೂ ಕಳೆದ 4.5 ವರ್ಷಗಳಲ್ಲಿ ನಡೆದ ಕೆಲಸಗಳೆಲ್ಲವೂ ತಮ್ಮದೇ ಸಾಧನೆ ಎಂದು ಬಿ.ಸಿ. ಪಾಟೀಲರು ಹೇಳಿಕೊಂಡಿದ್ದಾರೆ. ಅವರು ಶಾಸಕರಾಗಿದ್ದಾಗ ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರ ಇತ್ತು. ಅಂದಿನ ಸಾಧನೆಗಳು ಯಾರದ್ದು ಎಂದು ಪ್ರಶ್ನಿಸಿದ ಅವರು, ‘ಎಷ್ಟೇ ದ್ವಂದ್ವ ಹೇಳಿಕೆ ನೀಡಿದರೂ, ಜನತೆ ನಂಬುವುದಿಲ್ಲ’ ಎಂದರು.

‘ನರೇಗಾದಲ್ಲಿ ಕ್ಷೇತ್ರವು ರಾಜ್ಯದಲ್ಲೇ 10ನೇ ಸ್ಥಾನದಲ್ಲಿದೆ’ ಎಂದ ಅವರು, ‘ಹಿರೇಕೆರೂರಿನಲ್ಲಿ ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮದಂತೆ ಬಿಂಬಿಸಲು ಅವಕಾಶ ಕಲ್ಪಿಸಿದರೆ, ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ, ಸ್ವಲ್ಪ ಕಡಿವಾಣ ಬಿದ್ದಿದೆ.

‘ಡಿ.24ರಂದು ಬಿಜೆಪಿಯ ಪರಿವರ್ತನಾ ಯಾತ್ರೆಯು ಜಿಲ್ಲೆಗೆ ಬರಲಿದೆ. ಜನ ಬೆಂಬಲ ಹೇಗಿದೆ? ಎಂದು ಆಗ ಸ್ಪಷ್ಟವಾಗಿ ತಿಳಿಯಲಿದೆ’ ಎಂದ ಅವರು, ‘ಕಾಂಗ್ರೆಸಿಗರು ಹತಾಶ ಮನೋಭಾವದಿಂದ ಟೀಕೆ ಮಾಡುತ್ತಿ ದ್ದಾರೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ವಕ್ತಾರ ಸುರೇಶ ಹೊಸಮನಿ, ಮುಖಂಡರಾದ ನಂಜುಂಡೇಶ ಕಳ್ಳೇರ, ಷಣ್ಮುಖಪ್ಪ ಮಳ್ಳೀಮಠ, ಪ್ರಶಾಂತ ಕಾಮನಹಳ್ಳಿ, ಶಿವರಾಜ ಹರಿಜನ, ದತ್ತಾತ್ರೇಯ ರಾಯ್ಕರ್ ಮತ್ತಿತರರು ಇದ್ದರು.

ದನ ಕಾಯೋನಿಗೂ ಗೊತ್ತು!

ಈಗ ದನ ಕಾಯೋನೋ ಕೂಡಾ ಮೊಬೈಲ್‌ ಮೂಲಕ ಮಾಹಿತಿ ಅರಿತಿರುತ್ತಾನೆ. ಹೀಗಾಗಿ ಶಾಸಕರು ಎಲ್ಲಿದ್ದಾರೆ? ಮಾಜಿ ಶಾಸಕರು ಎಲ್ಲಿದ್ದರು? ಸಾಧನೆಗಳೇನು? ಎಂಬುದು ಅವರಿಗೂ ಗೊತ್ತು, ಸುಳ್ಳು ಹೇಳಿದರೆ ಯಾರೂ ನಂಬುವುದಿಲ್ಲ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

* * 

ನನ್ನ ಸಾಧನೆಗಳ ಬಗ್ಗೆ ಸಿ.ಎಂ.ಗೆ ಒಳ್ಳೆಯ ಭಾವನೆ ಇದೆ. ಹೀಗಾಗಿ ಸಿ.ಎಂ. ಭಾಷಣದಲ್ಲಿ ‘ಬಣಕಾರ’ ಎಂದು ಉಲ್ಲೇಖಿಸಿದ್ದಾರೆ. ಇದು ದುರ್ಗಾದೇವಿ ಮಹಿಮೆ

ಯು.ಬಿ. ಬಣಕಾರ ಶಾಸಕರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.