ಬುಧವಾರ, ಮಾರ್ಚ್ 3, 2021
31 °C

ತಾಜ್ ಸಂರಕ್ಷಣೆಗೆ ದೀರ್ಘ ಕಾಲೀನ ಕ್ರಮ ಅಗತ್ಯ: ಸುಪ್ರೀಂ

ಪಿಟಿಐ Updated:

ಅಕ್ಷರ ಗಾತ್ರ : | |

ತಾಜ್ ಸಂರಕ್ಷಣೆಗೆ ದೀರ್ಘ ಕಾಲೀನ ಕ್ರಮ ಅಗತ್ಯ: ಸುಪ್ರೀಂ

ನವದೆಹಲಿ: ತಾಜ್ ಮಹಲ್ ಸಂರಕ್ಷಣೆಗಾಗಿ ಕನಿಷ್ಠ 100 ವರ್ಷಗಳ ಕಾರ್ಯಯೋಜನೆ ಕುರಿತು ಸಮಗ್ರ ಮತ್ತು ವಿಸ್ತೃತ ವರದಿ ಸಲ್ಲಿಸುವಂತೆ ತಾಜ್ ವಲಯ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

‘ತಾಜ್ ವಲಯ ಪ್ರಾಧಿಕಾರ (ಟಿಟಿಝಡ್) ಸಲ್ಲಿಸಿರುವುದು ಮಧ್ಯಂತರ ವರದಿ. ಇದರಲ್ಲಿ ತಾತ್ಕಾಲಿಕ ಕ್ರಮಗಳನ್ನು ವಿವರಿಸಲಾಗಿದೆ. ಟಿಟಿಝಡ್ ಪರಿಸರ ಸೂಕ್ಷ್ಮ ವಲಯ. ಹೀಗಾಗಿ ತಾಜ್ ಮಹಲ್ ಸಂರಕ್ಷಣೆಗೆ ದೀರ್ಘ ಕಾಲೀನ ಕಾರ್ಯಸೂಚಿಯ ಅಗತ್ಯವಿದೆ’ ಎಂದು ನ್ಯಾಯಮೂರ್ತಿ ಎಂ.ಬಿ. ಲೋಕೂರ್ ಅವರಿದ್ದ ಪೀಠವು ಹೇಳಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಶರ್ಮಾ ಅವರು ಸಲ್ಲಿಸಿದ ಪ್ರಮಾಣಪತ್ರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಉತ್ತರ ಪ್ರದೇಶದ ಆಗ್ರಾ, ಫಿರೋಜಾಬಾದ್, ಮಾಥುರ್, ಹಥ್ರಸ್, ಏಟಾ ಹಾಗೂ ರಾಜಸ್ಥಾನದ ಭರತ್‌ಪುರ್ ಜಿಲ್ಲೆಗಳ 10,400 ಚದರ ಕಿ.ಮೀ ವ್ಯಾಪ್ತಿಯಲ್ಲಿ ತಾಜ್ ವಲಯ ಹರಡಿಕೊಂಡಿದೆ.

‘ತಜ್ಞರು, ನಾಗರಿಕ ಸಮಾಜದ ಸದಸ್ಯರು ಎಲ್ಲರೂ ಒಟ್ಟಾಗಿ ಚರ್ಚಿಸಿ ಮುಂದಿನ ಪೀಳಿಗೆಗೋಸ್ಕರ ತಾಜ್ ಮಹಲ್ ಅನ್ನು ಹೇಗೆ ಸಂರಕ್ಷಿಸುವುದು ಎಂಬ ಕುರಿತು ನಿರ್ಧಾರಕ್ಕೆ ಬರಬೇಕು’ ಎಂದು ಶರ್ಮಾ ಅವರಿಗೆ ಪೀಠ ಸೂಚಿಸಿದೆ.

ತಾಜ್ ಮಹಲ್ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿ ನಿಷೇಧಿಸುವುದು, ಸಿಎನ್‌ಜಿ ಇಂಧನ ಬಳಕೆಯ ವಾಹನಗಳಿಗಷ್ಟೇ ಈ ಸ್ಮಾರಕದ ಸಮೀಪ ಓಡಾಡಲು ಅವಕಾಶ ನೀಡುವುದು, ವಿದ್ಯುತ್ ಜನಕಗಳ (ಜನರೇಟರ್) ಬಳಕೆ ತಗ್ಗಿಸುವ ಸಲುವಾಗಿ ನಿರಂತರ ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಕಸ, ತ್ಯಾಜ್ಯಗಳನ್ನು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಶಿಫಾರಸು ಮಾಡಲಾಗಿದೆ’ ಎಂದು ತುಷಾರ್ ಶರ್ಮಾ ವಿವರಿಸಿದರು.

‘ನಿರೀಕ್ಷೆಯಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಏಕೆ ಸಭೆ ನಡೆಸುತ್ತಿಲ್ಲ’ ಎಂದೂ ನ್ಯಾಯಾಲಯ ಪ್ರಶ್ನಿಸಿದೆ. ಮುಂದಿನ ವಿಚಾರಣೆಯನ್ನು ಎಂಟು ವಾರಗಳಿಗೆ ಮುಂದೂಡಲಾಗಿದೆ.

ಯಥಾಸ್ಥಿತಿ ಕಾಯ್ದುಕೊಳ್ಳಿ: ತಾಜ್ ಮಹಲ್ ಸಮೀಪ ಕಾರುಗಳ ನಿಲುಗಡೆಗಾಗಿ ನಿರ್ಮಿಸಲಾದ ಬಹುಮಹಡಿ ಕಟ್ಟಡಗಳನ್ನು ನೆಲಸಮ ಮಾಡುವಂತೆ ನೀಡಿದ್ದ ತನ್ನ ಈ ಹಿಂದಿನ ಆದೇಶಕ್ಕೆ ನ್ಯಾಯಾಲಯವು ತಡೆ ನೀಡಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಂಬಂಧ ಪಟ್ಟ ಪ್ರಾಧಿಕಾರಗಳಿಗೆ ಸೂಚಿಸಿದೆ.

**

ಉತ್ತರ ಪ್ರದೇಶ ಸರ್ಕಾರಕ್ಕೆ ಛೀಮಾರಿ

ತಾಜ್ ಮಹಲ್‌ನ ಸೌಂದರ್ಯ ಸಂರಕ್ಷಣೆಗೆ ಸಮಗ್ರ ವರದಿ ಸಲ್ಲಿಸದ ಉತ್ತರ ಪ್ರದೇಶ ಸರ್ಕಾರಕ್ಕೆ ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ‘ನಾವು ಸುಸ್ಥಿರ ಅಭಿವೃದ್ಧಿಯನ್ನು ನಿರೀಕ್ಷಿಸುತ್ತೇವೆ’ ಎಂದು ಅದು ಹೇಳಿತ್ತು.

ತಾಜ್ ಮಹಲ್ ವ್ಯಾಪ್ತಿಯ ವಾಯು ಮಾಲಿನ್ಯಕ್ಕೆ ಸಂಬಂಧಿಸಿ ಸಮಗ್ರ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು. ಟಿಟಿಝಡ್ ಅಗತ್ಯ ನೀತಿಗಳನ್ನು ಸಿದ್ಧಪಡಿಸಿದೆ ಎಂದು ಸರ್ಕಾರ ತಿಳಿಸಿತ್ತು. ಆದರೆ ನ್ಯಾಯಾಲಯದ ಮುಂದೆ ವರದಿ ಸಲ್ಲಿಸಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.