ಗುರುವಾರ , ಫೆಬ್ರವರಿ 25, 2021
29 °C
ಕರ್ನಾಟಕ ವಿ.ವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ, ಕುವೆಂಪು ವಿಶ್ವವಿದ್ಯಾಲಯದಿಂದ ಹೆಚ್ಚು ಹಣ ಪಾವತಿ

ಎಂಎಸ್‌ಐಎಲ್ ಕಾಗದ ಖರೀದಿಯಿಂದ ನಷ್ಟವೇ ಹೆಚ್ಚು

ವಿರೂಪಾಕ್ಷ ಹೊಕ್ರಾಣಿ Updated:

ಅಕ್ಷರ ಗಾತ್ರ : | |

ಎಂಎಸ್‌ಐಎಲ್ ಕಾಗದ ಖರೀದಿಯಿಂದ ನಷ್ಟವೇ ಹೆಚ್ಚು

ಬೆಂಗಳೂರು: ಎಂಎಸ್‌ಐಎಲ್ (ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿ.) ಮೂಲಕ ಅಂಕಪಟ್ಟಿ ಮುದ್ರಿಸುವ ಕಾಗದ ಖರೀದಿಗೆ ಒಪ್ಪಂದ ಮಾಡಿಕೊಂಡ ಬಳಿಕ ತುಮಕೂರು ವಿಶ್ವವಿದ್ಯಾಲಯಕ್ಕೆ ಲಾಭವಾಗಿದ್ದರೆ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈ ಹಿಂದೆ ಮಾಡುತ್ತಿದ್ದ ಖರ್ಚಿನಲ್ಲಿ ಆರೇಳು ಪಟ್ಟು ಹೆಚ್ಚಾಗಿದೆ.

ತುಮಕೂರು ವಿ.ವಿ ಈ ಹಿಂದೆ ಪ್ರತಿ ಅಂಕಪಟ್ಟಿಗೆ ₹ 214.44 ಖರ್ಚು ಮಾಡುತ್ತಿತ್ತು. ಎಂಎಸ್‌ಐಎಲ್ ಲೇಖಕ್ ಕಾಗದ ಖರೀದಿ ನಂತರ ಆ ವೆಚ್ಚ ₹ 36.60ಕ್ಕೆ ಇಳಿದಿದೆ. ಆದರೆ, ಪ್ರತಿ ಅಂಕಪಟ್ಟಿಗೆ ₹ 1.61 ಖರ್ಚು ಮಾಡುತ್ತಿದ್ದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ₹ 2.60 ವ್ಯಯಿಸುತ್ತಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಈಗ ಅನಿವಾರ್ಯವಾಗಿ ₹ 18.50 ಪಾವತಿಸಬೇಕಾಗಿದೆ. ಅದೇ ರೀತಿ ಕುವೆಂಪು ವಿಶ್ವವಿದ್ಯಾಲಯದ ವೆಚ್ಚ ₹ 22.85ರಿಂದ ₹ 36.50ಕ್ಕೆ ಹೆಚ್ಚಾಗಿದೆ.

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯವು ಪರೀಕ್ಷಾ ಪ್ರವೇಶ ಪತ್ರ, ಪರೀಕ್ಷೆ, ಮೌಲ್ಯಮಾಪನ, ಅಂಕಪಟ್ಟಿ, ಆಂತರಿಕ ಮತ್ತು ಪ್ರಾಯೋಗಿಕ ವಿಷಯಗಳ ಅಂಕ ಸೇರ್ಪಡೆ ವೆಚ್ಚಕ್ಕೆ ಪ್ರತಿ ವಿದ್ಯಾರ್ಥಿಯಿಂದ ತಲಾ ₹ 239 ಶುಲ್ಕ ಸಂಗ್ರಹಿಸುತ್ತಿದೆ. ಈ ಮೊತ್ತದಲ್ಲಿ ಅಂಕಪಟ್ಟಿಗಾಗಿ ಮಾತ್ರ ₹ 30  ವೆಚ್ಚ ಆಗುತ್ತಿದೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 17 ವಿಶ್ವವಿದ್ಯಾಲಯಗಳು ಈ ಹಿಂದೆ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ಮುದ್ರಿಸಲು ಎಷ್ಟು ಖರ್ಚು ಮಾಡುತ್ತಿದ್ದವು ಎಂಬ ವಿವರವನ್ನು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಂಗ್ರಹಿಸಿತ್ತು. ಹಿಂದಿನ ದರ ಮತ್ತು ಎಂಎಸ್‌ಐಎಲ್ ಕಾಗದ ಖರೀದಿ ನಂತರ ವಿಶ್ವವಿದ್ಯಾಲಯಗಳು ಮಾಡುತ್ತಿರುವ ವೆಚ್ಚವನ್ನು ಹೋಲಿಸಿದರೆ ಹಲವು ವಿಶ್ವವಿದ್ಯಾಲಯಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ದಾಖಲೆಗಳು ಹೇಳುತ್ತಿವೆ.

ಹಿನ್ನೆಲೆ: ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 2016ರ ಆ.20ರಂದು ಉನ್ನತ ಶಿಕ್ಷಣ ಪರಿಷತ್ತಿನ 17ನೇ ಸಾಮಾನ್ಯ ಸಭೆ ನಡೆಸಿದರು. ವಿಶ್ವವಿದ್ಯಾಲಯಗಳು ಅಂಕಪಟ್ಟಿಗಾಗಿ ಬೇಕಾಬಿಟ್ಟಿ ಖರ್ಚು ಮಾಡುತ್ತಿವೆ ಎಂದು ಆ ಸಭೆಯಲ್ಲಿ ಚರ್ಚೆಯಾಯಿತು. ಬಳಿಕ ವಿಶ್ವವಿದ್ಯಾಲಯಗಳು ಎಂಎಸ್ಐಎಲ್ ಲೇಖಕ್ ಕಾಗದ ಖರೀದಿಸುವಂತೆ ನಿರ್ದೇಶನ ನೀಡಲಾಯಿತು.

ಈ ಸೂಚನೆ ಬಳಿಕ ತುಮಕೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂಎಸ್‌ಐಎಲ್‌ ಜೊತೆ ಒಪ್ಪಂದ ಮಾಡಿಕೊಂಡಿವೆ. ಉಳಿದ ವಿಶ್ವವಿದ್ಯಾಲಯಗಳು ಈ ಸಲಹೆಯನ್ನು ತಿರಸ್ಕರಿಸಿ, ಈ ಹಿಂದಿನಂತೆ ಟೆಂಡರ್ ಕರೆದು ಅಂಕಪಟ್ಟಿ ಕಾಗದ ಪಡೆಯುತ್ತಿವೆ.

ಈ ಮಧ್ಯೆ, ಎಂಎಸ್‌ಐಎಲ್ ಮೂಲಕ ಖರೀದಿಯಲ್ಲೂ ಅಕ್ರಮ ನಡೆದಿದ್ದು, ಸಚಿವರೂ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಎಂಎಸ್‌ಐಎಲ್ ಮೂಲಕ ವಿಶ್ವವಿದ್ಯಾಲಯಗಳು ಅಂಕಪಟ್ಟಿ ಕಾಗದ ಖರೀದಿಸುತ್ತಿರುವುದಕ್ಕೂ ನನಗೂ ಸಂಬಂಧವಿಲ್ಲ ಎಂದು ಸಚಿವರೂ ಸ್ಪಷ್ಟನೆ ನೀಡಿದ್ದಾರೆ.

ಎಂಎಸ್‌ಐಎಲ್ ಮೂಲಕ ಕಾಗದ ಖರೀದಿ ನಂತರ ಆರು ವಿಶ್ವವಿದ್ಯಾಲಯಗಳಿಗೆ ಒಟ್ಟು ₹ 2.25 ಕೋಟಿ ಲಾಭವಾಗಿದೆ ಎಂದು ಸಚಿವರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಆದರೆ, ಹಲವು ವಿಶ್ವವಿದ್ಯಾಲಯಗಳು ಈ ಹಿಂದಿನ ದರಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿರುವುದು ಸಂಗತಿ ಗೊತ್ತಾಗಿದೆ.ಸೆಕ್ಯೂರಿಟಿ ಫೀಚರ್ಸ್‌:  ಅಂಕಪಟ್ಟಿ ಮುದ್ರಣಕ್ಕೆ 125 ಜಿಎಸ್‌ಎಂ ನಿಂದ 205 ಜಿಎಸ್‌ಎಂ ವರೆಗಿನ ಕಾಗದ ಬಳಸಲಾಗುತ್ತದೆ. ಹೈ ರೆಸಲ್ಯೂಷನ್ ಸೆಕ್ಯೂರಿಟಿ ಬಾರ್ಡರ್, ಹಾಲೊಗ್ರಾಮ್, ಇನ್‌ವಿಸಿಬಲ್ ಲೋಗೊ, ಸೆಕ್ಯೂರಿಟಿ ಇಂಕ್ ನಂಬರಿಂಗ್, ಆ್ಯಂಟಿ ಕಾಪಿ ಇಂಕ್ ಸಹಿತ 15 ರಕ್ಷಣಾತ್ಮಕ ಗುಣಗಳು (ಸೆಕ್ಯೂರಿಟಿ ಫೀಚರ್ಸ್‌) ಇದ್ದು, ಅದರಲ್ಲಿ ಎಂಟು ಸೆಕ್ಯೂರಿಟಿ ಫೀಚರ್ಸ್‌ಗಳನ್ನು ಅಂಕಪಟ್ಟಿಯಲ್ಲಿ ಕಡ್ಡಾಯವಾಗಿ ಅಳವಡಿಸಬೇಕು.

ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಜೊತೆಗೆ ಅಂಕಪಟ್ಟಿ ಶುಲ್ಕವನ್ನೂ ವಿಶ್ವವಿದ್ಯಾಲಯಗಳು ಸಂಗ್ರಹಿಸುತ್ತವೆ. ಅಂಕಪಟ್ಟಿ ಕಾಗದ, ಮುದ್ರಣ ವೆಚ್ಚಕ್ಕಿಂತಲೂ ಈ ಶುಲ್ಕ ಹಲವು ಪಟ್ಟು ಹೆಚ್ಚಿರುತ್ತದೆ. ವೆಚ್ಚ ಮಾಡಿ ಉಳಿದ ಹಣವನ್ನು ವಿಶ್ವವಿದ್ಯಾಲಯಗಳ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.