ಶುಕ್ರವಾರ, ಮಾರ್ಚ್ 5, 2021
29 °C

ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹ 2,249 ಕೋಟಿ ಎಡಿಬಿ ಸಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹ 2,249 ಕೋಟಿ ಎಡಿಬಿ ಸಾಲ

ನವದೆಹಲಿ: ಕರ್ನಾಟಕದಲ್ಲಿನ ರಾಜ್ ಹೆದ್ದಾರಿಗಳ ಅಭಿವೃದ್ಧಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ₹ 2,249 ಕೋಟಿಗಳ ಸಾಲದ ನೆರವು ನೀಡಲಿದೆ.

ರಾಜ್ಯದಲ್ಲಿನ 419 ಕಿ.ಮೀ ಉದ್ದದ ಹೆದ್ದಾರಿಗಳನ್ನು ದ್ವಿಪಥ ಮತ್ತು ಚತುಷ್ಪಥಗಳನ್ನಾಗಿ ಅಭಿವೃದ್ಧಿಪಡಿಸಲು, ಸೇತುವೆ ನಿರ್ಮಿಸಲು ಈ ನೆರವು ನೀಡಲಾಗುತ್ತಿದೆ. ರಾಜ್ಯಕ್ಕೆ ‘ಎಡಿಬಿ’ ನೀಡುತ್ತಿರುವ ಎರಡನೇ ಹಣಕಾಸು ನೆರವು ಇದಾಗಿದೆ. ರಾಜ್ಯದ ತಲಾ ವರಮಾನವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿಗೆ ಇದೆ. ನಿರುದ್ಯೋಗ ಮತ್ತು ಬಡತನದ ಪ್ರಮಾಣ ಕಡಿಮೆ ಇದೆ ಎಂದು ಬ್ಯಾಂಕ್‌ ತಿಳಿಸಿದೆ.

ಈ ಯೋಜನೆಯಡಿ, ಯೋಜಿತ ರೀತಿಯಲ್ಲಿ ಪಾದಚಾರಿ ಮಾರ್ಗ, ಬಸ್‌ ತಂಗುದಾಣ ನಿರ್ಮಾಣ ಮತ್ತು ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಹೆದ್ದಾರಿ ಅಭಿವೃದ್ಧಿಯ ಒಟ್ಟು ಮೊತ್ತ ₹ 4,257 ಕೋಟಿಗಳಷ್ಟಿದೆ. ರಾಜ್ಯ ಸರ್ಕಾರವು ₹ 1,313 ಕೋಟಿ ಮತ್ತು ಖಾಸಗಿ ವಲಯವು ₹ 695 ಕೋಟಿ ಹೂಡಿಕೆ ಮಾಡಲಿದೆ. ಯೋಜನೆಯು 2023ರಲ್ಲಿ ಪೂರ್ಣಗೊಳ್ಳಲಿದೆ.

‘ರಸ್ತೆಗಳ ಅಭಿವೃದ್ಧಿಯು ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಿರುವುದನ್ನು ರಾಜ್ಯ ಸರ್ಕಾರ ಗುರುತಿಸಿದೆ. ‘ರಾಜ್ಯ ಹೆದ್ದಾರಿ ಸುಧಾರಣೆ–3’ ಯೋಜನೆಯು ರಸ್ತೆಗಳ ಸಾಮರ್ಥ್ಯ ಮತ್ತು ನಿರ್ವಹಣೆ ಸುಧಾರಿಸಲಿದೆ. ಸುರಕ್ಷಿತ ರಸ್ತೆ ಸೌಲಭ್ಯ, ಮಾರುಕಟ್ಟೆಗಳಿಗೆ ಸುಗಮ ಸಂಪರ್ಕ ಮತ್ತು ಇತರ ಮೂಲ ಸೇವೆಗಳನ್ನು ಒದಗಿಸಲು ನೆರವಾಗಲಿದೆ’ ಎಂದು ಬ್ಯಾಂಕ್‌ನ ಸಾರಿಗೆ ಪರಿಣತ ರವಿ ಪೇರಿ ಹೇಳಿದ್ದಾರೆ.

ಸುಸಜ್ಜಿತ ರಸ್ತೆ ಸಂಪರ್ಕ ಜಾಲವು ಗ್ರಾಮ, ಪಟ್ಟಣ ಮತ್ತು ನಗರಗಳ ಮಧ್ಯೆ ನೇರ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಜತೆಗೆ ದೂರದ, ಹಿಂದುಳಿದ ಮತ್ತು ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳ ಮಧ್ಯೆ ವಹಿವಾಟು ವಿಸ್ತರಿಸಲೂ ಇದರಿಂದ ಸಾಧ್ಯವಾಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.