ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಹೊದಿಕೆ ಉಳಿಸಬಲ್ಲ ಅತ್ತಿ ಮರ

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಉದ್ಯಾನ ನಗರಿ’ ಎಂದೇ ಹೆಸರುವಾಸಿಯಾಗಿದ್ದ ಬೆಂಗಳೂರು, ಕಳೆದ ಎರಡು ದಶಕಗಳಲ್ಲಿ ತ್ವರಿತ ನಗರೀಕರಣ ಮತ್ತು ಅಗಾಧ ವಿಸ್ತರಣೆಗೆ ಒಳಗಾದ ಕಾರಣ, ತನ್ನ ಹಸಿರು ಹೊದಿಕೆಯ ಶೇ 78 ಭಾಗವನ್ನು ಈಗಾಗಲೇ ಕಳೆದುಕೊಂಡಿದೆ. ಆದಾಗ್ಯೂ ನಗರದ ಅತ್ತಿ ಮರಗಳು ಈ ಆಕ್ರಮಣವನ್ನು ತಡೆದುಕೊಂಡು ತಲೆಯೆತ್ತಿ ನಿಂತಿವೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು, ನಗರದ ಹಸಿರು ಹೊದಿಕೆಯ ನಷ್ಟವನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಸಂಶೋಧನಾ ನಿರತರಾಗಿದ್ದಾರೆ; ಈ ಸಂಶೋಧನೆಯ ಭಾಗವಾಗಿ, ಅತ್ತಿ ಮರದ (ಫೈಕಸ್ ರೆಸೆಮೊಸಾ) ಆನುವಂಶಿಕ ರಚನೆ ಮತ್ತು ವೈವಿಧ್ಯವನ್ನು ಅಧ್ಯಯನ ಮಾಡಿದ್ದಾರೆ.

ಅರಣ್ಯ ಪುನರುಜ್ಜೀವನ ಅಥವಾ ನಗರಗಳಲ್ಲಿ ಗಿಡ ನೆಡುವಿಕೆ ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದಲ್ಲಿ ಯೋಜನೆ ತಯಾರಿಸುವಾಗ, ಆನುವಂಶಿಕ ಮಾಹಿತಿಯನ್ನು ಬಳಸಿಕೊಳ್ಳಬೇಕು ಎಂದು ಈ ಅಧ್ಯಯನ ನೆನಪಿಸುತ್ತದೆ. ಈ ಅಧ್ಯಯನವು ಅತ್ತಿಮರದ ಆನುವಂಶಿಕ ರಚನೆಗೆ ಪ್ರಮುಖ ಒಳನೋಟಗಳನ್ನು ಒದಗಿಸುವ ಅಪೂರ್ವ ಕೆಲಸ ಮಾಡಿದ್ದು, ನಗರದ ಹಸಿರು ಉಳಿಸುವ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡಲು ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ನಗರದಲ್ಲಿ ನಡೆಸುವ ಇಂತಹ ಗಿಡ ನೆಡುವ ಕಾರ್ಯಕ್ರಮಗಳಲ್ಲಿ, ನೆಡುವ ಸಸಿಯ ಆನುವಂಶಿಕ ಮಾಹಿತಿ ಇಲ್ಲದಿರುವುದರಿಂದ, ಆ ಕಾರ್ಯಕ್ರಮಗಳು ಮರಗಳ ಮತ್ತು ಸಸ್ಯಗಳ ಆರೋಗ್ಯಕರ ಜನಸಂಖ್ಯೆಯನ್ನು ಕಾಪಾಡಿಕೊಳ್ಳುವಲ್ಲಿ ಅಷ್ಟೇನೂ ಪರಿಣಾಮಕಾರಿಯಾಗದೇ ಇರಬಹುದು. ಆನುವಂಶಿಕವಾಗಿ ವೈವಿಧ್ಯ ಕಡಿಮೆ ಇರುವ ಮರಗಳ ಅಥವಾ ಏಕಜಾತಿಯ ಮರಗಳ ಸಂಖ್ಯೆ, ಒಂದೇ ರೋಗದಿಂದ ತ್ವರಿತವಾಗಿ ನಾಶವಾಗುತ್ತದೆ ಎಂಬುದು ಕಂಡುಬಂದಿದೆ.

ಈ ತಂಡದ ಸಂಶೋಧಕರು ಅಧ್ಯಯನಕ್ಕಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣ, ಕುರುಬರಹಳ್ಳಿ ಮತ್ತು ಲಾಲ್‌ಬಾಗ್‌ನಲ್ಲಿ ಪ್ರತ್ಯೇಕ ಮರಗಳಿಂದ ಎಲೆಯ ಮಾದರಿಗಳನ್ನು ಸಂಗ್ರಹಿಸಿದರು. ‘ಅಲ್ಲಿನ ಫೈಕಸ್ ರೆಸೆಮೊಸಾ ಮರಗಳು ನಮಗೆ ಪರಿಚಿತವಿದ್ದ ಕಾರಣ, ಈ 4 ಮಾದರಿ ತಾಣಗಳನ್ನು ನಾವು ಆರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಅನುಷಾ ಕೃಷ್ಣನ್. ಬೆಂಗಳೂರಿನ ಅತ್ತಿ ಮರಗಳು ಸಾಕಷ್ಟು ದೃಢವಾದ ಆನುವಂಶಿಕ ರಚನೆ ಹೊಂದಿವೆ ಮತ್ತು ಅವುಗಳಲ್ಲಿ ಆಂತರಿಕ ಸಂತಾನೋತ್ಪತ್ತಿಯ ಯಾವುದೇ ಚಿಹ್ನೆಗಳಿಲ್ಲ ಎಂದು ಅಧ್ಯಯನ ಬಹಿರಂಗಪಡಿಸಿದೆ. ಪರಿಸರ ವ್ಯವಸ್ಥೆಯ ವಿಘಟನೆಯ ಕಾರಣದಿಂದಾಗಿ, ಒಂದು ಪ್ರದೇಶದಲ್ಲಿ ದೂರ ದೂರಕ್ಕೆ ಒಂದೊಂದೇ ಇರುವ ಕೆಲವೇ ಸಂತಾನಶಕ್ತಿಯುಳ್ಳ ಮರಗಳು ಆಂತರಿಕ ಸಂತಾನೋತ್ಪತ್ತಿಯ ಮೊರೆ ಹೋದರೆ, ಹಲವಾರು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಆಂತರಿಕ ಸಂತಾನೋತ್ಪತ್ತಿಯು, ತಳಿಯ ವೈವಿಧ್ಯದಲ್ಲಿ ಇಳಿಕೆ ಮತ್ತು ಆರೋಗ್ಯಶಕ್ತಿಯ ನಷ್ಟವನ್ನು ಉಂಟುಮಾಡಬಹುದು. ಹೀಗಾಗಿ ಕಡಿಮೆ  ಸಂಖ್ಯೆಯಲ್ಲಿ ಇರುವ ಮರ ಪ್ರಭೇದದ ಅಳಿವಿನ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಅತ್ತಿ ಮರಗಳ ವಿಚಾರದಲ್ಲಿ, ಆರೋಗ್ಯಕರ ಸಂಖ್ಯೆ ಕಾಪಾಡಿಕೊಳ್ಳಲು ಸಾಧ್ಯವಾಗಿರುವುದು, ಬಹುಶಃ ಅವುಗಳ ಪರಾಗಸ್ಪರ್ಶಗಳಾದ ವಿಶಿಷ್ಟ ಕಣಜಗಳ ಸಹಾಯದಿಂದ ಮಾತ್ರ.

ಬೆಂಗಳೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸಲು ಮತ್ತು ರಕ್ಷಿಸಲು ಅನೇಕ ಕಾರ್ಯಕ್ರಮಗಳು ಪ್ರಾರಂಭವಾಗಿರುವುದರಿಂದ, ನಗರದ ಜೀವವೈವಿಧ್ಯದ ಉಳಿದಿರುವ ಭಾಗಗಳನ್ನು ಸಂರಕ್ಷಿಸುವ ಕಾರ್ಯಗಳು ವೇಗ ಪಡೆಯುತ್ತಿವೆ. ಆದರೂ, ಹೆಚ್ಚು ವಿಭಜಿತವಾಗಿರುವ ನಗರಗಳಲ್ಲಿ ಇಂತಹ ಕಾರ್ಯಕ್ರಮಗಳು ಸಂಪೂರ್ಣವಾಗಿ ಯಶಸ್ವಿಯಾಗುವುದು ಸಾಧ್ಯವೇ? ಹೇಗೆ ಒಂದು ಕಮಾನನ್ನು ಸ್ಥಿರವಾಗಿ ನಿಲ್ಲಿಸಲು ಆಧಾರ ಸ್ಥಂಭ ಮುಖ್ಯವೋ, ಅದೇ ರೀತಿ ಕೀಟಗಳು, ಸಣ್ಣ ಬಾವಲಿಗಳು, ಹಾರುವ ನರಿಗಳು, ಪಕ್ಷಿಗಳು ಮತ್ತು ಅಳಿಲುಗಳಂತಹಾ ಹಲವಾರು ಜೀವಿಗಳಿಗೆ ಆಧಾರವಾಗಿರುವ ಅತ್ತಿ ಮರವನ್ನು 'ಆಧಾರಸ್ತಂಭ' ಜಾತಿಯ ಮರ ಎಂದು ಪರಿಗಣಿಸಲಾಗುತ್ತದೆ. ಹೇಗೆ ಕಮಾನಿನ ಆಧಾರಸ್ತಂಭ ಕುಸಿದರೆ, ಇಡಿಯ ಕಮಾನು ಕುಸಿಯುವುದೋ, ಹಾಗೇ ಅತ್ತಿಯ ಮರಗಳು ಅಳಿದರೆ, ಅವುಗಳೊಂದಿಗೆ ತಮ್ಮ ಜೀವನವನ್ನು ಬೆಸೆದುಕೊಂಡಿರುವ ಜೀವಿಗಳು, ಅದರಲ್ಲೂ ಅತ್ತಿ ಹೂ - ಹಣ್ಣುಗಳ ಒಳಗೆ ವಾಸಿಸುವ ವಿಶಿಷ್ಟ ಕಣಜಗಳೂ ಇನ್ನಿಲ್ಲವಾಗುತ್ತವೆ.

ಸಂಗ್ರಹಿಸಿದ ಎಲೆಗಳಿಂದ ಹೊರತೆಗೆಯಲಾದ ಡಿಎನ್ಎಯನ್ನು ಸೂಕ್ಷ್ಮಉಪಗ್ರಹ ವಿಶ್ಲೇಷಣೆ ಎಂಬ ಒಂದು ಆನುವಂಶಿಕ ವಿಶ್ಲೇಷಣಾ ಪ್ರಕ್ರಿಯೆ ನಡೆಸಲು ಬಳಸಲಾಯಿತು. ಸೂಕ್ಷ್ಮ ಉಪಗ್ರಹ ಎಂಬುದು ಪುನರಾವರ್ತಿತ ಡಿಎನ್ಎಯುಳ್ಳ ಒಂದು ಪ್ರದೇಶವಾಗಿದ್ದು, ಇದರಲ್ಲಿ ನಿರ್ದಿಷ್ಟ ಅನುಕ್ರಮವು ಸಾಮಾನ್ಯವಾಗಿ ಸುಮಾರು 5–50 ಬಾರಿ ಪುನರಾವರ್ತಿತವಾಗುತ್ತದೆ. ಸೂಕ್ಷ್ಮಉಪಗ್ರಹ ಪ್ರದೇಶದಲ್ಲಿನ ಅನುಕ್ರಮದ ಪುನರಾವರ್ತನೆಯ ಸಂಖ್ಯೆಯು, ಒಂದೊಂದು ಮಾದರಿಗೂ ನಿರ್ದಿಷ್ಟವಾಗಿದ್ದು, ಈ ಕಾರಣದಿಂದ, ಹೆಚ್ಚಾಗಿ ಮಾದರಿ ಗುರುತಿಸುವಿಕೆಯಲ್ಲಿ ಸಹಾಯಕ. ಹೀಗಾಗಿ, ತಳಿಯ ಬೆರಳಚ್ಚು ತಂತ್ರಜ್ಞಾನದಲ್ಲಿ ಇದನ್ನು ಬಳಸಲಾಗುತ್ತದೆ. ಈ ಅಧ್ಯಯನದ ಲೇಖಕರು, ಈ ಮಾಹಿತಿ ಮತ್ತು ವಿಶೇಷ ತಂತ್ರಾಂಶದ ಸಹಾಯದಿಂದ, ಬೆಂಗಳೂರಿನಲ್ಲಿನ ಮಾದರಿ ಎಂದು ಪರಿಗಣಿಸಲಾದ ಮರಗಳ ನಡುವಿನ ಆನುವಂಶಿಕ ಸಂಬಂಧಗಳನ್ನು ಸಂಶೋಧನೆ ಮಾಡಲು ಸಾಧ್ಯವಾಯಿತು.

‘ಅತ್ತಿ ಹಣ್ಣು ಮತ್ತು ಅವುಗಳ ವಿಶಿಷ್ಟ ಕಣಜಗಳು ಹೊಂದಿರುವ ಪರಸ್ಪರತ್ವದ ಕಾರಣ, ಈ ಮರಗಳ  ಸಂಖ್ಯಾ ಸಾಂದ್ರತೆ ಕಡಿಮೆಯಿದ್ದರೂ, ಆರೋಗ್ಯಕರ  ತಳಿತತ್ವವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಕಣಜಗಳು ಅತ್ತಿ ಮರಗಳಿಗೆ ಈ ರೀತಿಯ ಸಹಾಯವನ್ನು ಹೇಗೆ ಮಾಡುತ್ತವೆ ಗೊತ್ತೇ? ಪುರುಷ ಮತ್ತು ಹೆಣ್ಣು ಹೂವುಗಳನ್ನು ಒಂದೇ ಸಸ್ಯದ ಮೇಲೆ ಹೊತ್ತುಕೊಳ್ಳುವ ಅತ್ತಿ ಮರದ (ಫೈಕಸ್ ರೆಸೆಮೊಸಾ) ಪರಾಗವನ್ನು, ಈ ವಿಶಿಷ್ಟ ಕಣಜಗಳು, ಗಾಳಿಯ ಪ್ರವಾಹದ ಸಹಾಯದಿಂದ ಹತ್ತಾರು ಕಿಲೋಮೀಟರುಗಳಷ್ಟು ದೂರ ಕೊಂಡೊಯ್ಯುತ್ತವೆ. ದೂರಗಾಮಿ ಪರಾಗ ವಿಭಜನೆಯ ಗುಣಲಕ್ಷಣಗಳ ಕಾರಣ, ಈ ಮರಗಳು ಕಡಿಮೆ ಜನಸಂಖ್ಯೆಯ ಸಾಂದ್ರತೆಗಳಲ್ಲೂ ಸಹ, ಆಂತರಿಕ ಸಂತಾನೋತ್ಪತ್ತಿಯ ಸಮಸ್ಯೆಗೆ ಈಡಾಗುವುದಿಲ್ಲ’ ಎಂದು ವಿವರಿಸುತ್ತಾರೆ ಅನುಷಾ ಕೃಷ್ಣನ್.

–ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಒಂದು ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT