ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಉತ್ಸವಕ್ಕೆ ಸಂಭ್ರಮದ ತೆರೆ

ದೇಶಕ್ಕೆ ಮಾದರಿ ಎನಿಸುವ ಕೊಡುಗೆ ನೀಡಿದ ಜಿಲ್ಲೆ;ಪುದುಚೇರಿ ಮುಖ್ಯಮಂತ್ರಿ ಶ್ಲಾಘನೆ
Last Updated 11 ಡಿಸೆಂಬರ್ 2017, 8:55 IST
ಅಕ್ಷರ ಗಾತ್ರ

ಗದಗ: ಮೂರು ದಿನಗಳ ಕಾಲ, ಕಲೆ, ಸಾಹಿತ್ಯ, ಸಂಸ್ಕೃತಿಯ ಧ್ವನಿ, ಬೆಳಕು, ದೃಶ್ಯ ವೈಭವಕ್ಕೆ ಸಾಕ್ಷಿಯಾದ ಗದಗ ಉತ್ಸವಕ್ಕೆ ಭಾನುವಾರ ತಡರಾತ್ರಿ ವರ್ಣರಂಜಿತ ತೆರೆ ಬಿದ್ದಿತು.

ಇಲ್ಲಿನ ಕೆ.ಎಚ್‌.ಪಾಟೀಲ ಕ್ರೀಡಾಂಗಣದ ಮುಖ್ಯ ವೇದಿಕೆಯಲ್ಲಿ ನಡೆದ ಉತ್ಸವದ ಸಮಾರೋಪ ಸಮಾರಂಭಕ್ಕೆ ಸಾವಿರಾರು ಜನರು ಸಾಕ್ಷಿಯಾದರು. ಕೊತಬಾಳದ ಶಂಕ್ರಣ್ಣ ಸಂಕಣ್ಣವರ ತಂಡದ ದೀಪ ನೃತ್ಯ, ಪ್ರಾಣೇಶ್‌ ತಂಡದ ಹಾಸ್ಯ ಸಂಜೆ, ಬೆಂಗಳೂರಿನ ಆಕ್ಸಿಜನ್‌ ತಂಡದ ನೃತ್ಯ ಪ್ರದರ್ಶನ, ಸಂಗೀತ ಕಾರ್ಯಕ್ರಮಗಳು ಸಮಾರೋಪ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ ಎಳೆದವು.

‘25 ವರ್ಷಗಳ ಹಿಂದಿನ ಗದಗ ಜಿಲ್ಲೆಯನ್ನೂ ಈಗಿನ ಗದಗವನ್ನೂ ಸಮೀಪದಿಂದ ನೋಡಿದ್ದೇನೆ. ಅಭಿವೃದ್ಧಿ ಪಥದಲ್ಲಿ ಈ ಜಿಲ್ಲೆ ಇಡೀ ದೇಶಕ್ಕೇ ಮಾದರಿ ಎನಿಸುವ ಹಲವು ಕಾರ್ಯಗಳನ್ನು ಮಾಡಿದೆ. 24x7 ಕುಡಿಯುವ ನೀರು, ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಇವೆಲ್ಲವೂ ಮಹತ್ವದ ಮೈಲಿಗಲ್ಲುಗಳು’ ಎಂದು ಸಮಾರೋಪ ನುಡಿಗಳನ್ನಾಡಿದ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ತಮಗೂ ಗದುಗಿಗೂ ಇರುವ ಅವಿನಾಭವ ನಂಟನ್ನು ಸ್ಮರಿಸಿದ ಅವರು, ಎರಡೂವರೆ ದಶಕಗಳ ಹಿಂದೆ ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್‌ ಸರ್ಕಾರ ಇದ್ದಾಗ, ರಾಜಕೀಯ ಪರಿಸ್ಥಿತಿ ಅಧ್ಯಯನಕ್ಕಾಗಿ ಗದುಗಿಗೆ ಬಂದಿದ್ದೆ. ಆಗ ಜಿಲ್ಲೆಯ ಸಾಕಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದೆ. ಈಗ ಆಧುನಿಕ ಗದಗವನ್ನು ನೋಡುತ್ತಿದ್ದೇನೆ. ಅಲ್ಪಾವಧಿಯಲ್ಲೇ ಜಿಲ್ಲೆ ಗ್ರಾಮೀಣಾಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿಯಲ್ಲಿ, ದೇಶದಲ್ಲೇ ವಿನೂತನವಾದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸಚಿವ ಎಚ್‌.ಕೆ ಪಾಟೀಲರ ಪರಿಶ್ರಮ ಎದ್ದು ಕಾಣುತ್ತದೆ. ಈಗ ಗದುಗಿನ ಜನತೆ ತುಂಗಭದ್ರಾ ನೀರು ಕುಡಿಯುತ್ತಿರುವುದು ಹಿಂದೆ ಅವರ ಶ್ರಮ ಇದೆ’ ಎಂದರು.

ಪುದಚೇರಿಯಲ್ಲೂ ಜಾರಿಗೆ ಚಿಂತನೆ: ಪುದುಚೇರಿ ಧಾರ್ಮಿಕ, ಐತಿಹಾಸಿಕ ಮತ್ತು ಪರಿಸರ ಪ್ರವಾಸೋದ್ಯಮದ ಮೂಲಕ ಹೆಸರು ಗಳಿಸಿದೆ. ಗದಗ ನಗರವೂ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿನ ರಾಜೀವಗಾಂಧಿ ನಗರದ ಉದ್ಯಾನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮುಕ್ತ ಜಿಮ್‌ ಸೌಲಭ್ಯ ಕಲ್ಪಿಸಿರುವುದನ್ನು ನೋಡಿದೆ. ಇದೊಂದು ಹೊಸ ಬಗೆಯ ಚಿಂತನೆ. ಪುದುಚೇರಿಯಲ್ಲೂ ಸಾರ್ವಜನಿಕ ಉದ್ಯಾನದಲ್ಲಿ ಈ ಮಾದರಿಯಲ್ಲಿ ಜಿಮ್‌ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತೇನೆ ಎಂದರು.

**

ಮುಂದಿನ ವರ್ಷವೂ ಅದ್ಧೂರಿ ಉತ್ಸವ

ಗದಗ ಉತ್ಸವಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಗಿದೆ. ಮುಂದಿನ ವರ್ಷವೂ ಅದ್ಧೂರಿ ಉತ್ಸವ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ನಾಡಗೀತೆ ಬೀಜಾಂಕುರಗೊಂಡ ಗದಗ ನೆಲದಲ್ಲಿ ಈ ಉತ್ಸವದ ಮೂಲಕ ಕಲೆ, ಸಂಸ್ಕೃತಿ, ಪರಂಪರೆ ಅನಾವರಣಗೊಂಡಿದೆ. ಹೊಸ ತಲೆಮಾರಿನ ತರುಣ ತರುಣಿಯರು ಹೊಸಬಗೆಯ ಸಂಗೀತ, ನೃತ್ಯ, ನಾದಲಹರಿಗೆ ಮನಸೋತಿದ್ದಾರೆ. ಈ ವೇದಿಕೆಯಲ್ಲಿ ಕಿಕ್ಕಿರಿದು ಸೇರಿರುವ ಜನಸಾಗರವೇ ಇದಕ್ಕೆ ಸಾಕ್ಷಿ’ ಎಂದರು.

ಇಡೀ ನಗರವೇ ರಾತ್ರಿಯಾಗುತ್ತಿದ್ದಂತೆಯೇ ಬಣ್ಣಬಣ್ಣದ ದೀಪಗಳಿಂದಾಗಿ ಬೆಳಕಿನ ವರ್ಣವೈಭವದಲ್ಲಿ ಮಿಂದೆದ್ದಿತು. ಉತ್ಸವ ಮೂರು ದಿನ ನಗರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಖ್ಯಾತ ಸಂಗೀತಗಾರ ವೆಂಕಟೇಶ ಕುಮಾರ, ಕ್ರೀಡಾಪಟು ವಿಲಾಸ ನೀಲಗುಂದ, ಪ್ರೇಮಾ ಹುಚ್ಚಣ್ಣವರ, ಬಸವರಾಜ ಚೆಟ್ಟಿ, ರಾಮಣ್ಣ ವಗ್ಗಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT