ಶನಿವಾರ, ಮಾರ್ಚ್ 6, 2021
28 °C

ಮನೆಪಾಠಕ್ಕೆ ಮದ್ದುಂಟೆ?

ಡಾ.ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

ಮನೆಪಾಠಕ್ಕೆ ಮದ್ದುಂಟೆ?

ಮನೆಪಾಠ ಅಥವಾ ಖಾಸಗಿ ಪಾಠದ ವಿಷಯವು ಮತ್ತೊಮ್ಮೆ ಸದ್ದು ಮಾಡುತ್ತಿದೆ. ‘ಯುನೆಸ್ಕೊ’ ತನ್ನ ಜಾಗತಿಕ ಶೈಕ್ಷಣಿಕ ಮೇಲ್ವಿಚಾರಣಾ ವರದಿಯಲ್ಲಿ ಮನೆಪಾಠ ಅಥವಾ ಖಾಸಗಿ ಪಾಠವು ಶಿಕ್ಷಣ ಕ್ಷೇತ್ರದಲ್ಲಿ ಉಂಟುಮಾಡುತ್ತಿರುವ ಅಸಮಾನತೆಯ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಶಿಕ್ಷಣದ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧನೆಯ ನಿಟ್ಟಿನಲ್ಲಿ ಅವಶ್ಯಕವಾಗಿರುವ ಉತ್ತರದಾಯಿತ್ವದ ಕೊರತೆಯು ಯಾವ ರೀತಿ ಬಾಧಿಸುತ್ತಿದೆ ಎಂಬುದನ್ನು ತನ್ನ ವರದಿಯಲ್ಲಿ ಪ್ರಸ್ತಾಪ ಮಾಡಿದೆ.

ಈ ಸಂದರ್ಭದಲ್ಲಿ ಖಾಸಗಿ ಪಾಠದ ವ್ಯವಸ್ಥೆಯು ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ಹಾಗೂ ಅಸಮಾನತೆಗಳನ್ನು ತಂದೊಡ್ಡಿರುವ ಅಂಶಗಳು ಹಾಗೂ ಅವುಗಳ ಪರಿಣಾಮಗಳ ಕುರಿತು ಯುನೆಸ್ಕೊ ವಿಶ್ಲೇಷಣೆ ಮಾಡಿದೆ. ಶಿಕ್ಷಣದ ಸಾರ್ವತ್ರೀಕರಣದ ಗುರಿಯೆಡೆಗೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ, ಒತ್ತಾಸೆಗಳಿದ್ದಾಗ್ಯೂ ಜಗತ್ತಿನಲ್ಲಿ ಸರಿಸುಮಾರು 26.40 ಕೋಟಿಯಷ್ಟು ಮಕ್ಕಳು ಇನ್ನೂ ಶಾಲೆಗಳತ್ತ ಮುಖ ಮಾಡಿಲ್ಲ. ಇಂತಹ ಗಂಭೀರ ಹಾಗೂ ತುರ್ತಿನ ಸನ್ನಿವೇಶದಲ್ಲಿ ಖಾಸಗಿ ಪಾಠ ವ್ಯವಸ್ಥೆಯು ಲಾಭದಾಯಕವಾದ ಉದ್ಯಮದ ಸ್ವರೂಪವನ್ನು ತಳೆಯುತ್ತಿದೆ. ಆ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಧ್ಯುಕ್ತವಾಗಿ ಸ್ಥಾಪನೆಗೊಂಡಿರುವ ಶಾಲೆಗಳ ಅಸ್ತಿತ್ವವನ್ನೇ ಅಣಕಿಸುವಂತೆ ಬೆಳೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಲಿಕೆಯ ಕೊರತೆಯಿರುವವರಿಗೆ ಪರಿಹಾರಾತ್ಮಕವಾಗಿ ಅಥವಾ ಚಿಕಿತ್ಸಾತ್ಮಕವಾಗಿ ಕಲಿಸುವ ವ್ಯವಸ್ಥೆಗಳ ಅಗತ್ಯ ಇದ್ದೇ ಇದೆ. ಇಂತಹ ವ್ಯವಸ್ಥೆಗಳು ಆಯ್ದ ವಿಶೇಷ ಪ್ರಕರಣಗಳಲ್ಲಿ ವೈಯಕ್ತಿಕವಾಗಿ ಕಲಿಸುವ ರೀತಿಯಲ್ಲಿ ಖಾಸಗಿ ಪಾಠಬೋಧನೆಯ ವ್ಯವಸ್ಥೆ ಇದ್ದಲ್ಲಿ ಅದಕ್ಕೆ ಯಾರ ತಕರಾರೂ ಇರದು. ಆದರೆ ಖಾಸಗಿ ಪಾಠವ್ಯವಸ್ಥೆಯು ಸಾಂಸ್ಥಿಕ ರೂಪದ ಶಾಲೆ ಅಥವಾ ಕಾಲೇಜುಗಳಿಗೆ ಪರ್ಯಾಯವಾಗಿ ಬೆಳೆಯತೊಡಗಿರುವುದು ಸರ್ವ ಹಿತದ ಸಾಮಾಜಿಕ ದೃಷ್ಟಿಕೋನದಿಂದ ಸಮ್ಮತವೆನಿಸುವುದಿಲ್ಲ. ಖಾಸಗಿ ಪಾಠ ವ್ಯವಸ್ಥೆಯು ಮಕ್ಕಳಲ್ಲಿ ತೀವ್ರ ರೀತಿಯ ಮಾನಸಿಕ ಒತ್ತಡಗಳನ್ನು ಸೃಷ್ಟಿಸುವುದರ ಜೊತೆ ಪೋಷಕರ ಜೇಬನ್ನು ಖಾಲಿ ಮಾಡುತ್ತಿದೆ. ಶಾಲೆ ಹಾಗೂ ಖಾಸಗಿ ಪಾಠ ವ್ಯವಸ್ಥೆಗಳಲ್ಲಿ ನಲುಗಿ ಹೋಗುವ ಅನೇಕ ಮಕ್ಕಳು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವುದಾಗಿ ಅನೇಕ ಸಮೀಕ್ಷೆಗಳಿಂದ ತಿಳಿದುಬಂದಿದೆ.

ಹೆಚ್ಚಿನ ಪೋಷಕರು ಲಕ್ಷಗಟ್ಟಲೆ ಹಣ ತೆತ್ತು ಉತ್ತಮವೆನಿಸುವ ಪ್ರತಿಷ್ಠಿತ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಗಿಟ್ಟಿಸಲು ಹರಸಾಹಸ ಪಡುತ್ತಾರೆ. ಇದರ ಜೊತೆ ಮಕ್ಕಳು ಉತ್ತಮವಾಗಿ ಕಲಿಯಲಿ ಎಂಬ ಕಾರಣಕ್ಕೆ ಮನೆಪಾಠ ಅಥವಾ ಖಾಸಗಿ ಪಾಠಕ್ಕೆ ಕಳುಹಿಸುತ್ತಾರೆ. ಎಷ್ಟೋ ಮಕ್ಕಳ ದಿನಚರಿ ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಶಾಲೆಯಲ್ಲಿ ಕಲಿತರೆ ಮನೆಗೆ ಬಂದ ತಕ್ಷಣ ಟ್ಯೂಷನ್ ಎಂದು ಮತ್ತೆ ವಿಶೇಷ ತರಗತಿಗಳಿಗೆ ಸಂಜೆ ಏಳರವರೆಗೆ ಹಾಜರಾಗುತ್ತಾರೆ. ಇವುಗಳಲ್ಲಿ ಅವರಿಗೆ ಆಟವಾಡಲು, ತಮ್ಮ ಬಾಲ್ಯವನ್ನು ಸಹಜವಾಗಿ, ಸಂತಸದಿಂದ ಅನುಭವಿಸಲು ಸಮಯವೇ ಸಿಗದು. ಈ ಹಿನ್ನೆಲೆಯಲ್ಲಿ ಖಾಸಗಿ ಪಾಠ ವ್ಯವಸ್ಥೆಯು ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ– ಅರ್ಥಿಕ ಅಸಮಾನತೆ, ಲಿಂಗತ್ವದ ತಾರತಮ್ಯ ಹಾಗೂ ಇನ್ನಿತರೆ ಪ್ರಾದೇಶಿಕ ಅಸಮಾನತೆಗಳಿಗೆ ಯಾವ ರೀತಿ ಕಾರಣವಾಗುತ್ತಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ, ಅಧ್ಯಯನಕ್ಕೊಳಪಡಿಸುವ ಅವಶ್ಯಕತೆ ಇದೆ ಎಂಬುದನ್ನು ಯುನೆಸ್ಕೊ ಪ್ರತಿಪಾದಿಸಿದೆ.

ಖಾಸಗಿ ಪಾಠ ವ್ಯವಸ್ಥೆಯ ಬೆಳವಣಿಗೆಯ ವಿದ್ಯಮಾನವು ಯಾವುದೋ ಒಂದು ದೇಶಕ್ಕೆ ಸೀಮಿತವಾಗದೆ ಜಾಗತಿಕ ವಿದ್ಯಮಾನವಾಗಿದೆ. 2007-08ರ ಸಮೀಕ್ಷೆಗಳ ಪ್ರಕಾರ ದೇಶದ ನಗರ ಪ್ರದೇಶಗಳ ಶೇ 40 ರಷ್ಟು ಹಾಗೂ ಗ್ರಾಮೀಣ ಪ್ರದೇಶಗಳ ಶೇ 26ರಷ್ಟು ಮಕ್ಕಳು ಖಾಸಗಿ ಪಾಠಕ್ಕೆ ಮೊರೆ ಹೋಗಿದ್ದಾರೆ. ಚೀನಾ ದೇಶ ಸೇರಿದಂತೆ ಇತರೆ ಕೆಲವು ಪ್ರಮುಖ ದೇಶಗಳಲ್ಲಿ ಸರಿಸುಮಾರು ಶೇ 50 ರಷ್ಟು ಮಕ್ಕಳು ಖಾಸಗಿ ಪಾಠವನ್ನು ಆಶ್ರಯಿಸಿದ್ದಾರೆ ಎನ್ನಲಾಗಿದೆ.

2014ರಲ್ಲಿ ಕೊರಿಯಾ ದೇಶದಲ್ಲಿ ನಡೆಸಿದ ಸಮೀಕ್ಷೆಯಂತೆ ಶೇ 81ರಷ್ಟು ಪ್ರಾಥಮಿಕ ಶಾಲೆಗಳ ಮಕ್ಕಳು ಹಾಗೂ ಶೇ 56 ರಷ್ಟು ಪ್ರೌಢಶಾಲೆಗಳ ಮಕ್ಕಳು ಖಾಸಗಿ ಪಾಠಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇಂಗ್ಲೆಂಡ್‍ನಲ್ಲಿಯೂ ಶೇ 25 ರಷ್ಟು ಮಕ್ಕಳು ಖಾಸಗಿ ಪಾಠಗಳಿಗೆ ಹೋಗುತ್ತಿದ್ದಾರೆ. ಜಾಗತಿಕ ಹಂತದಲ್ಲಿ ವಾರ್ಷಿಕ ಶೇ 7ರಷ್ಟು ಬೆಳವಣಿಗೆಯನ್ನು ಖಾಸಗಿ ಪಾಠ ವ್ಯವಸ್ಥೆಯ ಜಾಲ ದಾಖಲಿಸಿದೆ. ಇದೇ ಗತಿಯಲ್ಲಿ ಬೆಳವಣಿಗೆಯಾದಲ್ಲಿ 2022ರ ಹೊತ್ತಿಗೆ ಖಾಸಗಿ ಪಾಠ ಉದ್ಯಮವು ಸುಮಾರು ₹1500 ಕೋಟಿಯಷ್ಟು ವಹಿವಾಟನ್ನು ಹೊಂದುವ ನಿರೀಕ್ಷೆಯಿದೆ. ಈ ಅಂಕಿ-ಅಂಶಗಳು ಖಾಸಗಿ ಪಾಠ ವ್ಯವಸ್ಥೆಯ ಬೆಳವಣಿಗೆಯು ಗಾಬರಿ ಹುಟ್ಟಿಸುವ ರೀತಿಯಲ್ಲಿರುವುದನ್ನು ದೃಢಪಡಿಸುತ್ತವೆ.

ಒಂದೆಡೆ ಖಾಸಗಿ ಪಾಠ ವ್ಯವಸ್ಥೆಯಿಂದ ಯಾವುದೇ ಹಾನಿ ಇಲ್ಲ ಎಂದು ತಳ್ಳಿಹಾಕಬಹುದಾದರೂ ಶೈಕ್ಷಣಿಕ ಸಂಸ್ಥೆಗಳ ಬೋಧನೆಯ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗದು. ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಕಾರ ಅಧಿಕೃತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಖಾಸಗಿ ಪಾಠವನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಅನೇಕ ಶಿಕ್ಷಕರು ಮನೆ ಪಾಠ ಅಥವಾ ಟ್ಯುಟೋರಿಯಲ್ ಸಂಸ್ಥೆಗಳಲ್ಲಿ ಬೋಧಿಸುತ್ತಿದ್ದಾರೆ. ಇದು ಅವರ ದೈನಂದಿನ ಶಾಲೆಗಳಲ್ಲಿ ಕೈಗೊಳ್ಳುವ ಬೋಧನೆಯ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

2001 ರ ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳ ನೋಂದಣಿ, ನಿಯಂತ್ರಣ ನಿಯಮಗಳ ಪ್ರಕಾರ ಪ್ರತೀ ಟ್ಯುಟೋರಿಯಲ್ ಸಂಸ್ಥೆ ಕನಿಷ್ಠ ಸೌಲಭ್ಯಗಳನ್ನು ಹೊಂದುವುದೂ ಸೇರಿದಂತೆ ಇತರೆ ಷರತ್ತುಗಳನ್ನು ಪಾಲಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಉತ್ತಮ ಮೂಲಭೂತ ಸೌಲಭ್ಯಗಳ ಜೊತೆ ಮಕ್ಕಳಿಗೆ ಸುರಕ್ಷತೆ ಕಲ್ಪಿಸುವುದು ಹಾಗೂ ಉತ್ತಮ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿಂದ ಗುಣಮಟ್ಟದ ಬೋಧನೆ ನೀಡುವ ರೀತಿಯಲ್ಲಿ ಖಾಸಗಿ ಟ್ಯುಟೋರಿಯಲ್‍ಗಳು ಸ್ಥಾಪನೆಯಾಗಿ, ಕಾರ್ಯನಿರ್ವಹಿಸು ವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ.

ಖಾಸಗಿ ಪಾಠ ವ್ಯವಸ್ಥೆಯ ಅಗತ್ಯವೇ ಇಲ್ಲದಂತೆ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಖಾಸಗಿ ಪಾಠಕ್ಕೆ ಉತ್ತಮ ಪರಿಹಾರವಾಗಬಲ್ಲದು. ಪೋಷಕರಿಗೆ ತಮ್ಮ ಮಕ್ಕಳು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ವಿಶ್ವಾಸ, ನಂಬಿಕೆ ಮೂಡಿಸಿದಲ್ಲಿ ಅವರು ತಮ್ಮ ಮಕ್ಕಳನ್ನು ಖಾಸಗಿ ಪಾಠಗಳಿಗೆ ಕಳುಹಿಸುವುದರಿಂದ ಹಿಂದೆ ಸರಿಯಬಹುದು.

ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ ಗಳಂತಹ ಪ್ರವೇಶ ಪರೀಕ್ಷೆಗಳಿಗೆ ಮಕ್ಕಳನ್ನು ಸಿದ್ಧಗೊಳಿಸಲು ಖಾಸಗಿ ಪಾಠ ಅವಶ್ಯಕವೆಂಬ ಅನಿವಾರ್ಯ ಸ್ಥಿತಿ ಇದ್ದು, ಇದನ್ನು ತಪ್ಪಿಸಲು ಪದವಿ-ಪೂರ್ವ ಹಂತದ ಪಠ್ಯಕ್ರಮ ಹಾಗೂ ಬೋಧನಾ ವ್ಯವಸ್ಥೆಯಲ್ಲಿಯೇ ಪ್ರವೇಶ ಪರೀಕ್ಷೆಗಳಿಗೆ ತಯಾರಿಯ ಕುರಿತ ಅಂಶಗಳನ್ನು ಅಂತರ್ಗತವಾಗುವಂತೆ ಮಾಡುವುದರತ್ತಲೂ ಚಿಂತಿಸಬಹುದಾಗಿದೆ.

ಇವೆಲ್ಲವುಗಳ ಜೊತೆ ಖಾಸಗಿ ಟ್ಯುಟೋರಿಯಲ್‍ಗಳೂ ಗುಣಾತ್ಮಕ ಶಿಕ್ಷಣ ಹಾಗೂ ಸರ್ವಹಿತದ ಸಾಮಾಜಿಕ ದೃಷ್ಟಿಯಿಂದ ಸ್ವ-ನಿಯಂತ್ರಣವನ್ನು

ಹೊಂದುವುದರತ್ತಲೂ ಗಮನಹರಿಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.