ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಭಯ; ಹೊಲಗಳತ್ತ ಹೆಜ್ಜೆ ಹಾಕದ ರೈತರು!

Last Updated 12 ಡಿಸೆಂಬರ್ 2017, 6:31 IST
ಅಕ್ಷರ ಗಾತ್ರ

ಶಿವಮೊಗ್ಗ: ಚನ್ನಗಿರಿ ತಾಲ್ಲೂಕಿನಲ್ಲಿ ಇಬ್ಬರನ್ನು ಬಲಿ ಪಡೆದ ಪುಂಡಾನೆಗಳು ದಾವಣಗೆರೆ– ಶಿವಮೊಗ್ಗ ಗಡಿಭಾಗದ ಗ್ರಾಮಗಳ ಅಡಿಕೆ ತೋಟಗಳಲ್ಲಿ ಬೀಡುಬಿಟ್ಟಿದ್ದು, ಆ ಭಾಗದ ಯಾವ ರೈತರೂ ಎರಡು ದಿನಗಳಿಂದ ಹೊಲ, ಗದ್ದೆಗಳತ್ತ ಮುಖ ಮಾಡಿಲ್ಲ.

ಸೋಮವಾರ ಬೆಳಿಗ್ಗೆ ಹರಮಘಟ್ಟ ಪ್ರದೇಶದಲ್ಲಿ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಸಿದ್ದ ಆನೆಗಳು ಸಂಜೆಯ ವೇಳೆಗೆ ಶಿವಮೊಗ್ಗ ಹಾಗೂ ದಾವಣಗೆರೆ ಗಡಿಭಾಗದ ಸುತ್ತುಕೋಟೆ, ಬೂದಿಗೆರೆ, ಕೊಮ್ಮನಾಳು ಬಳಿಯ ತೋಟಗಳಲ್ಲಿ ಕೆಲವರಿಗೆ ಕಾಣಿಸಿಕೊಂಡಿವೆ.

ಆನೆಗಳು ಜಿಲ್ಲೆಯೊಳಗೆ ಪ್ರವೇಶಿಸಿದ ಮಾಹಿತಿ ಸಿಕ್ಕ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ. ಸುತ್ತುಕೋಟೆ ಬಳಿ ಸಂಜೆ ಆನೆಗಳ ಹೆಜ್ಜೆ ಗುರುತು ಹಾಗೂ ಲದ್ದಿ ಕಂಡು ಬಂದಿದ್ದು, ಸುತ್ತುಕೋಟೆ ಸುತ್ತಲ ತೋಟಗಳಲ್ಲಿ ಬೀಡುಬಿಟ್ಟಿರುವ ಸಾಧ್ಯತೆ ಇದೆ.

ಎಲ್ಲೆಡೆ ಆನೆಗಳದ್ದೆ ಮಾತು: ಹೊನ್ನಾಳಿ ಹಾಗೂ ಶಿವಮೊಗ್ಗ ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನರು ಭಯದಿಂದ ಕಂಗಾಲಾಗಿದ್ದಾರೆ. ಊರ ಬಳಿ ಬಂದರೆ ಎಲ್ಲರೂ ಸೇರಿ ಶಬ್ದ ಮಾಡುತ್ತಾ ಗ್ರಾಮದ ಗಡಿಯಿಂದ ಓಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಯಾವುದೇ ಅನಾಹುತ ಸಂಭವಿಸಿದಂತೆ ಆನೆಗಳನ್ನು ಸಮೀಪದ ಅರಣ್ಯಕ್ಕೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಹಗಲಿನ ಸಮಯದಲ್ಲಿ ಆನೆಗಳನ್ನು ಚದುರಿಸಿದರೆ ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕೆ ರಾತ್ರಿವೇಳೆಯಲ್ಲಿ ಕಾಡಿಗಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.

ಲದ್ದಿ ಪತ್ತೆ, ಆನೆ ನಾಪತ್ತೆ

ಆನೆಗಳ ದಾಳಿಯಿಂದ ಆಂಧ್ರ ಗಡಿಭಾಗದಲ್ಲಿ ಇಬ್ಬರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟ ಕಾರಣ ಎಚ್ಚೆತ್ತುಕೊಂಡ ಅಧಿಕಾರಿಗಳು ಆನೆಗಳನ್ನು ಸೆರೆ ಹಿಡಿಯಲು ಆದೇಶ ಮಾಡಿದ್ದಾರೆ.

ಸಕ್ರೆಬೈಲು ಸಾಕಾನೆಗಳ ಸಹಕಾರದಿಂದ ಈ ಪುಂಡಾನೆ ಹಿಡಿಯಲು ಸಿದ್ಧತೆ ಆರಂಭವಾಗಿದೆ. ಸೋಮವಾರ ಇಡೀ ದಿನ ಹುಡುಕಾಡಿದರೂ ಆನೆ ಹೆಜ್ಜೆ ಗುರುತು, ಲದ್ದಿ ಬಿಟ್ಟರೆ ಆನೆ ಮಾತ್ರ ಕಣ್ಣಿಗೆ ಕಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT