ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಪಾತ: 70 ಜನರ ರಕ್ಷಣೆ

Last Updated 12 ಡಿಸೆಂಬರ್ 2017, 19:56 IST
ಅಕ್ಷರ ಗಾತ್ರ

ಜಮ್ಮು/ಶ್ರೀನಗರ: ಪೂಂಛ್‌ ಜಿಲ್ಲೆಯ ಸೂರನ್‌ಕೋಟ್‌ನಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಮತ್ತು ಹಿಮಪಾತದಲ್ಲಿ ಸಿಲುಕಿದ್ದ 70 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರನ್‌ಕೋಟ್‌ನ ಮೇಲ್ಭಾಗದ ಪ್ರದೇಶಗಳಲ್ಲಿ ಉಂಟಾದ ಭಾರಿ ಹಿಮಪಾತಕ್ಕೆ ಪೀರ್‌ ಕಿ ಗಲಿ ಸಮೀಪದ ಛಾತಾಪಾನಿ–ಪುಶಾನ ಎಂಬಲ್ಲಿ ಅನ್ಯ ರಾಜ್ಯಗಳ 42 ಕಾರ್ಮಿಕರು ಸೇರಿದಂತೆ 70 ಮಂದಿ ಸಿಲುಕಿದ್ದರು ಎಂದು ಸೂರನ್‌ಕೋಟ್‌ ಪೊಲೀಸರು ತಿಳಿಸಿದ್ದಾರೆ. ಅವರೆಲ್ಲರನ್ನೂ ರಕ್ಷಿಸಿ, ಬಫ್ಲಿಯಾಜ್‌ನ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಪೂಂಛ್‌ ಮತ್ತು ರಜೌರಿಗಳನ್ನು ಕಾಶ್ಮೀರಕ್ಕೆ ಸಂಪರ್ಕಿಸುವ ಪೀರ್‌ ಕಿ ಗಲಿ ಮತ್ತು ಮುಘಲ್‌ ರಸ್ತೆಯಲ್ಲಿ ಸೋಮವಾರದಿಂದ ಭಾರಿ ಹಿಮಪಾತವಾಗುತ್ತಿದೆ. ಡಿ.15ರವರೆಗೂ ಹಿಮಪಾತ ಮತ್ತು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತ್ರಿಕೂಟ ಪರ್ವತದಲ್ಲಿ ಇರುವ ಮಾತಾ ವೈಷ್ಣೋದೇವಿ ಮಂದಿರದಲ್ಲಿ ಹೆಲಿಕಾಪ್ಟರ್‌ ಮತ್ತು ಬ್ಯಾಟರಿ ಚಾಲಿತ ಕಾರ್‌ ಸೇವೆ ಸ್ಥಗಿತಗೊಳಿಸಲಾಗಿದೆ.

ಉತ್ತರಾಖಾಂಡದ  ರುದ್ರಪ್ರಯಾಗ್‌ ಜಿಲ್ಲೆಯಲ್ಲಿನ ಪ್ರಸಿದ್ಧ ಕೇದರನಾಥ ದೇವಾಲಯದ ಪ್ರದೇಶ ಮಂಗಳವಾರ ಹಿಮದಿಂದ ಆವರಿಸಿಕೊಂಡಿತ್ತು. -ಪಿಟಿಐ ಚಿತ್ರ

ಮೊದಲ ಹಿಮಪಾತ: ಕಾಶ್ಮೀರದಲ್ಲಿ ಮಂಗಳವಾರ ಋತುವಿನ ಮೊದಲ ಹಿಮಪಾತವಾಗಿದ್ದು, ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿ ಹಿಮದಿಂದ ಮುಚ್ಚಿಹೋಗಿದೆ.

ಉತ್ತರ ಕಾಶ್ಮೀರದ ಗುಲ್ಮಾರ್ಗ್‌, ದಕ್ಷಿಣ ಕಾಶ್ಮೀರದ ಪೆಹಲ್‌ಗಾಮ್‌ ಮತ್ತು ಪೀರ್‌ ಪಂಜಾಲ್‌ ಬೆಟ್ಟ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗಿದೆ. ಸೋಮವಾರ ಸಂಜೆ ಜವಾಹರ್‌ ಸುರಂಗ ಮತ್ತು ಇತರ ಪ್ರದೇಶಗಳಲ್ಲಿ ಹಿಮಪಾತ ಉಂಟಾಗಿದ್ದರಿಂದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ಶ್ರೀನಗರದಲ್ಲಿ –0.2 ಮತ್ತು ಪೆಹಲ್‌ಗಾಮ್‌ನಲ್ಲಿ –0.1 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಗುಲ್ಮಾರ್ಗ್‌ನ ಸ್ಕಿ ರೆಸಾರ್ಟ್‌ನಲ್ಲಿ –6.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಅತ್ಯಂತ ಶೀತ ಪ್ರದೇಶ ಎನಿಸಿದೆ. ಲಡಾಖ್‌ನ ಲೇಹ್‌ ಮತ್ತು ನೆರೆಯ ಕಾರ್ಗಿಲ್‌ ಪಟ್ಟಣದಲ್ಲಿ –1.4 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT