ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರನಾಥ ದೇಗುಲದಲ್ಲಿ ಮಂತ್ರ, ಜಾಗಟೆ ಇಲ್ಲ

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂಗಳ ಪವಿತ್ರ ಯಾತ್ರಾಸ್ಥಳವಾದ ಅಮರನಾಥ ಗುಹಾ ದೇವಾಲಯದಲ್ಲಿ ಇನ್ನು ಮುಂದೆ ಗಂಟೆ, ಜಾಗಟೆ ಬಾರಿಸುವಂತಿಲ್ಲ. ಜಯಘೋಷ, ಮಂತ್ರ ಪಠಿಸುವಂತಿಲ್ಲ!

ಹಿಮಾಲಯದ ಈ ಗುಹಾ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ‘ನಿಶ್ಯಬ್ದ ವಲಯ’ ಎಂದು ಘೋಷಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ಬುಧವಾರ ಆದೇಶ ಹೊರಡಿಸಿದೆ.

ದಕ್ಷಿಣ ಕಾಶ್ಮೀರದಲ್ಲಿರುವ ದೇವಾಲಯದ ಸುತ್ತಮುತ್ತಲಿನ ಪರಿಸರ ಸೂಕ್ಷ್ಮವಲಯದ ರಕ್ಷಣೆ ಮತ್ತು ಹಿಮ ಕುಸಿತ ತಡೆ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಎನ್‌ಜಿಟಿ ಹೇಳಿದೆ.

ಹಾಗಂತ ಯಾತ್ರಿಗಳ ದರ್ಶನಕ್ಕೆ ಯಾವುದೇ ಅಡ್ಡಿ, ಆತಂಕವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಅವರು ದೇವಾಲಯದ ಆಡಳಿತ ಮಂಡಳಿಗೆ ತಾಕೀತು ಮಾಡಿದ್ದಾರೆ.

ಯಾತ್ರಿಕರ ಅನುಕೂಲಕ್ಕಾಗಿ ಮೂಲಸೌಕರ್ಯ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೆಟ್ಟಿಲು ಬಳಿಯೇ ತಡೆ: ಗುಹಾ ದೇವಾಲಯದ ಮೆಟ್ಟಿಲುಗಳಿಂದ ಆಚೆಗೆ ಯಾರಿಗೂ ಏನನ್ನೂ ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು. ಮೆಟ್ಟಿಲು ಹತ್ತುವ ಪ್ರವೇಶ ಸ್ಥಳದಲ್ಲಿಯೇ ಎಲ್ಲ ಯಾತ್ರಿಕರನ್ನು ಕಟ್ಟುನಿಟ್ಟಾಗಿ ಪರೀಕ್ಷಿಸಿ ಬಿಡುವಂತೆ ಸೂಚಿಸಿದ್ದಾರೆ.

ಜನರು ತಮ್ಮ ವಸ್ತುಗಳನ್ನು ಇಡಲು ಪ್ರವೇಶ ಸ್ಥಳದಲ್ಲಿ ಚೆಕ್‌ಪಾಯಿಂಟ್‌ ನಿರ್ಮಿಸುವಂತೆ ಸಲಹೆ ಮಾಡಿದ್ದಾರೆ.

ಕಬ್ಬಿಣ ಸರಳುಗಳಿಂದ ಮುಕ್ತಿ: ಶಿವಲಿಂಗ ಅಥವಾ ಅದನ್ನು ಹೋಲುವ  ಮಂಜುಗಡ್ಡೆಯ ಕಂಬವನ್ನು ಭಕ್ತರು ಸ್ಪಷ್ಟವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಅದರ ಮುಂದಿರುವ ಕಬ್ಬಿಣದ ಸರಳುಗಳನ್ನು ತೆಗೆದು ಹಾಕುವಂತೆ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ಮೂಲಸೌಕರ್ಯ ಕಲ್ಪಿಸಲು ಕ್ರಿಯಾ ಯೋಜನೆ
ಯಾತ್ರಿಕರಿಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿಗೆ ಸ್ವತಂತ್ರ ಕುಮಾರ್‌ ಸೂಚಿಸಿದ್ದಾರೆ.

ಯಾತ್ರಿಗಳ ಪ್ರಯಾಣಕ್ಕೆ ಸರಿಯಾದ ಮಾರ್ಗ ನಿರ್ಮಾಣ, ಸರದಿಯಲ್ಲಿ ನಿಲ್ಲಲು ಸಮರ್ಪಕ ಸೌಲಭ್ಯ, ದೇವಾಲಯ ಆವರಣದಲ್ಲಿ ಸ್ವಚ್ಛತೆ, ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗದ ಕ್ರಮಗಳ ಕುರಿತು ವರದಿ ನೀಡುವಂತೆ ಸೂಚಿಸಿದೆ.

ಯಾತ್ರಿಗಳಿಗೆ ಮೂಲ ಸೌಲಭ್ಯ ಕಲ್ಪಿಸದ ಅಮರನಾಥ ದೇವಾಲಯ ಆಡಳಿತ ಮಂಡಳಿಯನ್ನು ಇದೇ ನವೆಂಬರ್‌ನಲ್ಲಿ ಎನ್‌ಜಿಟಿ ತರಾಟೆಗೆ ತೆಗೆದುಕೊಂಡಿತ್ತು.

ಮೂಲ ಸೌಲಭ್ಯ ಕೊರತೆಯಿಂದ ಪರದಾಡುತ್ತಿರುವ ಯಾತ್ರಿಗಳಿಗೆ ಸರಿಯಾಗಿ ದರ್ಶನ ಪಡೆಯಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಮೂಲಸೌಲಭ್ಯ ಒದಗಿಸುವಂತೆ 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನವನ್ನು ದೇವಾಲಯದ ಆಡಳಿತ ಮಂಡಳಿ ಯಾಕೆ ಪಾಲಿಸಿಲ್ಲ ಎಂದು ಪ್ರಶ್ನಿಸಿತ್ತು.

ತುಘಲಕ್‌ ಫತ್ವಾ: ವಿಎಚ್‌ಪಿ ಟೀಕೆ
ನವದೆಹಲಿ:
ಅಮರನಾಥ ದೇವಾಲಯದ ಪ್ರವೇಶ ಸ್ಥಳದಿಂದ ಆಚೆಗೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಿರುವ ರಾಷ್ಟ್ರೀಯ ಹಸಿರುಪೀಠದ ಆದೇಶವನ್ನು ‘ತುಘಲಕ್‌ ಫತ್ವಾ’ ಎಂದು ವಿಶ್ವ ಹಿಂದೂ ಪರಿಷತ್‌ ಕಟುವಾಗಿ ಟೀಕಿಸಿದೆ.

ಸದಾ ಒಂದಿಲ್ಲ, ಒಂದು ಕಾರಣಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ.

ಎನ್‌ಜಿಟಿ ಈ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT