ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಪುಣೆ ಸಿಟಿ ಸವಾಲು

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪುಣೆ: ವಿಶ್ವಾಸದ ಬುಗ್ಗೆಯಾಗಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್ ತಂಡ ಇಂಡಿಯನ್ ಸೂಪರ್‌ ಲೀಗ್ ಫುಟ್‌ಬಾಲ್ (ಐಎಸ್‌ಎಲ್‌) ಪಂದ್ಯದಲ್ಲಿ ಗುರುವಾರ ಎಫ್‌ಸಿ ಪುಣೆ ಸಿಟಿ ತಂಡದ ಸವಾಲು ಎದುರಿಸಲಿದೆ.

ಹಿಂದಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎದುರು ಅಮೋಘ ಜಯ ದಾಖಲಿಸಿದ್ದ ಬಿಎಫ್‌ಸಿ ತಂಡ ಐಎಸ್‌ಎಲ್ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಸ್ಥಾನ ಉಳಿಸಿಕೊಳ್ಳಬೇಕಾದರೆ ಪುಣೆ ತಂಡದ ಎದುರು ಬಿಎಫ್‌ಸಿಗೆ ಜಯ ಅನಿವಾರ್ಯವಾಗಿದೆ.

ಬಿಎಫ್‌ಸಿ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಒಟ್ಟು ಒಂಬತ್ತು ಪಾಯಿಂಟ್ಸ್‌ಗಳು ಈ ತಂಡದ ಬಳಿ ಇವೆ. ಪುಣೆ ಸಿಟಿ ತಂಡ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದೆ. ಈ ತಂಡ ಕೂಡ ಒಂಬತ್ತು ಪಾಯಿಂಟ್ಸ್‌ಗಳನ್ನು ಹೊಂದಿದೆ.

ಗುವಾಹಟಿಯಲ್ಲಿ ನಡೆದ ನಾರ್ತ್ ಈಸ್ಟ್ ವಿರುದ್ಧದ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗಕ್ಕೆ ಸ್ಟ್ರೈಕರ್ ಮಿಕು ಜಯ ತಂದುಕೊಟ್ಟಿದ್ದರು. ಅವರ ಏಕೈಕ ಗೋಲಿನಿಂದ ತಂಡ ಗೆಲುವಿನ ಕದ ತಟ್ಟಿತ್ತು. ಇದರಿಂದ ಪೂರ್ಣ ಪಾಯಿಂಟ್ಸ್ ಪಡೆದುಕೊಂಡು ಬೀಗಿತ್ತು.

‘ಬಿಎಫ್‌ಸಿ ಉತ್ತಮ ಆರಂಭ ಪಡೆದಿದೆ. ಆದರೆ ಈ ತಂಡ ಪುಣೆ ಎದುರು ನಿಜವಾದ ಅಗ್ನಿಪರೀಕ್ಷೆ ಎದುರಿಸಲಿದೆ. ಪುಣೆ ಎಫ್‌ಸಿ ಪ್ರಬಲ ತಂಡ. ನಮ್ಮ ಆಟಗಾರರು ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕು’ ಎಂದು ಬಿಎಫ್‌ಸಿ ಕೋಚ್‌ ಆಲ್ಬರ್ಟ್ ರೋಕಾ ಹೇಳಿದ್ದಾರೆ.

‘ಹಿಂದಿನ ಪಂದ್ಯದಲ್ಲಿ ಮೂರು ಪಾಯಿಂಟ್ಸ್ ಪಡೆದಿರುವುದು ತಂಡದ ಉತ್ಸಾಹ ಹೆಚ್ಚಿಸಿದೆ. ಇದಕ್ಕಾಗಿ ನಾವು ಸಾಕಷ್ಟು ಶ್ರಮ ಹಾಕಿದ್ದೇವೆ. ಮುಂದಿನ ದಿನಗಳಲ್ಲೂ ತಂಡದಿಂದ ಉತ್ತಮ ಆಟದ ನಿರೀಕ್ಷೆ ಇದೆ. ತವರಿನಿಂದ ಹೊರಗೆ ಆಡುವ ಎಲ್ಲಾ ಪಂದ್ಯಗಳು ತಂಡಕ್ಕೆ ಹೊಸ ಅನುಭವ ನೀಡಲಿವೆ’ ಎಂದು ಅವರು ಹೇಳಿದ್ದಾರೆ.‌

ಪುಣೆ ತಂಡದ ಮಾರ್ಸೆಲಿನೊ ಮತ್ತು ಎಮಿಲಿಯಾನೊ ಅಲ್ಫರೊ ಹೆಚ್ಚು ನಿಖರವಾಗಿ ಹಾಗೂ ವೇಗವಾಗಿ ಪಾಸ್ ಮಾಡುತ್ತಾರೆ. ಇವರಿಂದ ಚೆಂಡನ್ನು ಕಸಿಯುವುದು ಬಿಎಫ್‌ಸಿ ತಂಡಕ್ಕೆ ಪ್ರಮುಖ ಸವಾಲು ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT