ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲೇ ಗರ್ಭಪಾತ ಹೆಚ್ಚು

Last Updated 13 ಡಿಸೆಂಬರ್ 2017, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಗರ್ಭಪಾತಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಲ್ಲೇ ಹೆಚ್ಚು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ–ಅಂಶಗಳ ಪ್ರಕಾರ, 2016–17ರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 14,800 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 12,000 ಗರ್ಭಪಾತಗಳು ನಡೆದಿವೆ. 2017–18ರಲ್ಲಿ ನವೆಂಬರ್‌ವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 10,248 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 8,400 ಈ ಪ್ರಕರಣಗಳು ದಾಖಲಾಗಿವೆ.

‘ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಹೆಚ್ಚು ಇವೆ. ಎಲ್ಲ ಖಾಸಗಿ ಆಸ್ಪತ್ರೆಗಳು ಸರಿಯಾದ ದತ್ತಾಂಶ ಒದಗಿಸುತ್ತಿಲ್ಲ. ಹಾಗಾಗಿ ಅನೇಕ ಪ್ರಕರಣಗಳು ವರದಿಯಾಗುತ್ತಿಲ್ಲ’ ಎಂದು ಕುಟುಂಬ ಕಲ್ಯಾಣ ಯೋಜನೆಯ ಉಪನಿರ್ದೇಶಕ ಡಾ.ರಾಜ್‌ಕುಮಾರ್‌ ತಿಳಿಸಿದರು.

‘2015ರಲ್ಲಿ ದೇಶದಲ್ಲಿ 7 ಲಕ್ಷ ಗರ್ಭಪಾತಗಳು ನಡೆದಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಆದರೆ, ಪತ್ರಿಕೆ ಕೈಗೊಂಡ ಅಧ್ಯಯನ ಪ್ರಕಾರ ಆ ಅವಧಿಯಲ್ಲಿ 1.6 ಕೋಟಿ ಗರ್ಭಪಾತಗಳು ಆಗಿವೆ’ ಎಂದು ಲ್ಯಾನ್ಸೆಟ್‌ ಜರ್ನಲ್‌ (ವೈದ್ಯಕೀಯ ಕ್ಷೇತ್ರದ ಮಾಹಿತಿ ನೀಡುವ ವಾರಪತ್ರಿಕೆ) ಮಂಗಳವಾರ ಪ್ರಕಟಿಸಿದ ವರದಿಯಲ್ಲಿ ಉಲ್ಲೇಖಿಸಿತ್ತು.

‘ಈ ಅವಧಿಯಲ್ಲಿ ನಡೆದ ಶೇಕಡಾ 73 ಪ್ರಕರಣಗಳು ಮಾತ್ರೆ ಸೇವನೆಯಂತಹ ಅಸುರಕ್ಷಿತ ವಿಧಾನಗಳಿಂದಲೇ ಆಗಿವೆ’ ಎಂದು ವರದಿ ತಿಳಿಸಿದೆ.

‘ಅಂಕಿ–ಅಂಶಗಳಲ್ಲಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಗರ್ಭಪಾತಗಳು ನಡೆದಿರುತ್ತವೆ. ಬಹುತೇಕ ಗರ್ಭಿಣಿಯರು ಭ್ರೂಣ ತೆಗೆಸಲು ಮನೆಯಲ್ಲಿಯೇ ಮಾತ್ರೆಗಳನ್ನು ನುಂಗುತ್ತಾರೆ. ದೇಶದಲ್ಲಿ 1 ಕೊಟಿಗೂ ಅಧಿಕ ಪ್ರಕರಣಗಳು ದಾಖಲಾಗಿರುವಾಗ, ರಾಜ್ಯದಲ್ಲಿ ಏನಿಲ್ಲವೆಂದರೂ 14,000ಕ್ಕೂ ಹೆಚ್ಚು ನಡೆದಿರುತ್ತವೆ’ ಎನ್ನುತ್ತಾರೆ ಮಣಿಪಾಲ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಗಾಯತ್ರಿ ಕಾರ್ತಿಕ್‌.

ದಂಪತಿ ಗರ್ಭಪಾತದ ಬಗ್ಗೆ ಅತ್ಯಲ್ಪ ತಿಳಿವಳಿಕೆ ಇಟ್ಟುಕೊಂಡು ಆಸ್ಪತ್ರೆಗಳನ್ನು ಸಂಪರ್ಕಿಸುತ್ತಾರೆ ಎಂದು ಅವರು ತಿಳಿಸಿದರು.

‘ಯಾವ ಆಸ್ಪತ್ರೆಗಳಲ್ಲಿ ಗರ್ಭಪಾತ ನಡೆಸಬಹುದು ಎಂಬ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಹೆರಿಗೆಗಳ ದಾಖಲಾತಿಯೂ ಸರಿಯಾಗಿ ಆಗುತ್ತಿಲ್ಲ’ ಎಂದು ಡಾ.ರಾಜ್‌ಕುಮಾರ್‌ ತಿಳಿಸಿದರು.

‘ಜನರಿಗೆ ಆರೋಗ್ಯ ಕುರಿತು ಜಾಗೃತಿ ತಿಳಿವಳಿಕೆ ಮೂಡಿಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆದರೂ, ಗರ್ಭಧಾರಣೆ ಮತ್ತು ಗರ್ಭಪಾತಗಳ ಬಗ್ಗೆ ಸಮಗ್ರ ಮಾಹಿತಿ ಜನರಿಗೆ ಲಭಿಸುತ್ತಿಲ್ಲ. ಇವುಗಳ ಕುರಿತು ಇನ್ನಷ್ಟು ನಿಗಾ ವಹಿಸಬೇಕಿದೆ. ಈ ಕುರಿತು ವಿಶ್ಲೇಷಣೆ ನಡೆಸುವ ವಿಧಾನದಲ್ಲೂ ಸುಧಾರಣೆಗಳು ಆಗಬೇಕಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT