ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗೆ ರಾಷ್ಟ್ರ ಮನ್ನಣೆ

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಹೇಳಿಕೆ
Last Updated 14 ಡಿಸೆಂಬರ್ 2017, 7:32 IST
ಅಕ್ಷರ ಗಾತ್ರ

ಕೋಲಾರ: ‘ಹಿಂದುಳಿದ ಕೋಲಾರ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತವಾಗಿರುವುದು ಇತರೆ ಜಿಲ್ಲೆಗಳಲ್ಲಿ ಅಚ್ಚರಿ ಮೂಡಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ.ಕಾವೇರಿ ಹೇಳಿದರು.

ಜಿಲ್ಲೆಗೆ ಭೇಟಿ ನೀಡಿರುವ ಉತ್ತರಪ್ರದೇಶ ಸರ್ಕಾರದ ‘ಸ್ವಚ್ಛ ಭಾರತದೆಡೆಗೆ ನಮ್ಮ ನಡೆ’ ತಂಡದ ಪ್ರತಿನಿಧಿಗಳೊಂದಿಗೆ ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, 100 ದಿನದ ಆಂದೋಲನದಿಂದ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5 ತಾಲ್ಲೂಕುಗಳು, 27 ಹೋಬಳಿಗಳು ಹಾಗೂ 156 ಗ್ರಾಮ ಪಂಚಾಯಿತಿಗಳಿವೆ. ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವುದು ದೊಡ್ಡ ಸವಾಲಾಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿಯ ನೆರವಿನಿಂದ ಈ ಸಾಧನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆಯಲು ಸಾಧ್ಯವಾಯಿತು
ಎಂದರು.

ಕೋಲಾರ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಗ್ರಾಮಗಳಿವೆ. ಪ್ರತಿ ಹಳ್ಳಿಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸಲು ಜೂನ್ 21ರಿಂದ ಆರಂಭಿಸಿದ ಆಂದೋಲನ ಅ.2ರವರೆಗೆ ಸತತವಾಗಿ ನಡೆಯಿತು. ಅಧಿಕಾರಿಗಳು ರಜೆ ಹಾಕದೆ ಉತ್ಸಾಹದಿಂದ ಮನೆ ಮನೆಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದರಿಂದ ತುಂಬಾ ಸಹಾಯವಾಯಿತು ಎಂದು ವಿವರಿಸಿದರು.

ಅರಿವು ಮೂಡಿಸಲಾಯಿತು: ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಮಕ್ಕಳ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಿ ಬಯಲು ಬಹಿರ್ದೆಸೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳು ಮನೆಗಳ ಬಳಿ ಹೋಗಿ ಅರಿವು ಮೂಡಿಸಿದ್ದರಿಂದ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾದರು ಎಂದು ಮಾಹಿತಿ ನೀಡಿದರು.

ಸಮಿತಿ ರಚನೆ: ಜಿಲ್ಲಾ ಮಟ್ಟದಿಂದ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಮೊದಲ ಹಂತವಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಅವರು ಮುಳಬಾಗಿಲು ತಾಲ್ಲೂಕಿನಲ್ಲಿ ಯೋಜನೆಗೆ ಚಾಲನೆ ನೀಡಿದ್ದರು. ನಂತರ ಮೂರು ತಿಂಗಳಲ್ಲಿ ಸಾಧನೆ ಮಾಡಬೇಕೆಂದು ಯೋಜನೆ ರೂಪಿಸಿಕೊಳ್ಳಲಾಗಿತ್ತು. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಸಾರ್ವಜನಿಕರ ಮನವೊಲಿಸಿದರು ಎಂದರು.

ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡುತ್ತದೆ. ಶೌಚಾಲಯ ಕಟ್ಟಿಕೊಳ್ಳದಿದ್ದರೆ ಪಡಿತರ ಕಡಿತಗೊಳಿಸಲಾಗುತ್ತದೆ ಎಂದು ಜನರಿಗೆ ಎಚ್ಚರಿಕೆ ನೀಡಲಾಯಿತು. ಹಣಕಾಸಿನ ಸಮಸ್ಯೆ ಇರುವ ವ್ಯಕ್ತಿಗಳಿಗೆ ಗ್ರಾಮ ಪಂಚಾಯಿತಿಯಿಂದಲೇ ಶೌಚಾಲಯ ನಿರ್ಮಾಣ ಸಾಮಗ್ರಿ ಕೊಡಿಸಲಾಯಿತು. ಜತೆಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಸಕಾಲಕ್ಕೆ ಬಿಲ್‌ ಜಮಾ ಮಾಡಲಾಯಿತು ಎಂದು
ವಿವರಿಸಿದರು.

ಕೆಲ ಗ್ರಾಮಗಳಲ್ಲಿ ಕಲ್ಲು ಬಂಡೆ ಹಾಗೂ ಜಾಗದ ಸಮಸ್ಯೆ ಇದ್ದ ಕಡೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಸರ್ಕಾರಿ ಜಾಗ ಗುರುತಿಸಿ ಸಮುದಾಯ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಇತರ ರಾಜ್ಯಕ್ಕೆ ಮಾದರಿ: ‘ಕೋಲಾರ ಜಿಲ್ಲೆಯ ಸಾಧನೆ ಇತರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಮಾದರಿಯಾಗಿದೆ. ಇಲ್ಲಿನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯದ ಹಳ್ಳಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಪ್ರತಿನಿಧಿಗಳ ನಿಯೋಗದ ಸದಸ್ಯ ರಾಮ್‌ ಸಂಜನ್ ಚೌದರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿತೇಂದ್ರ ಪ್ರತಾಪ್‌ ಸಿಂಗ್, ರಿತೇಶ್ ಶರ್ಮ, ದಿನೇಶ್‌ಕುಮಾರ್ ಸಿಂಗ್, ನಂದಿನಿ ಜೈನ್, ರಾಘವೇಂದ್ರ ಡೇವಿಡ್‌, ಅಲೋಕ್‌ಕುಮಾರ್, ಪವನ್‌ಕುಮಾರ್, ನಿರೇಶ್ ಕುಮಾರ್, ಮನೋಜ್ ಸಾಹು ನಿಯೋಗದಲ್ಲಿದ್ದರು.

**

ಇತರೆ ರಾಜ್ಯಗಳಲ್ಲಿ ಸರ್ಕಾರದ ಆದೇಶದ ಪ್ರಕಾರ ಶೌಚಾಲಯ ನಿರ್ಮಿಸಕೊಳ್ಳಬೇಕಿದೆ. ಆದರೆ, ಜಿಲ್ಲೆಯಲ್ಲಿ ಫಲಾನುಭವಿಯ ಇಷ್ಟಕ್ಕೆ ಬಿಡಲಾಗಿತ್ತು.

–ಬಿ.ಬಿ.ಕಾವೇರಿ, ಜಿ.ಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT