4
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಕಳಸಾ–ಬಂಡೂರಿ: ಸಿಎಂ, ಬಿಎಸ್‌ವೈ ಪ್ರತಿಕೃತಿ ದಹನ

Published:
Updated:

ಹಾವೇರಿ: ‘ಮಹಾದಾಯಿ, ಕಳಸಾ–ಬಂಡೂರಿ ಯೋಜನೆ’ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ಜನತಾ ಪಕ್ಷ (ಕೆಜಿಪಿ) ಜಿಲ್ಲಾ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ ಸಿ.ಇಂಗಳಗೊಂಡಿ ಮಾತನಾಡಿ, ‘ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ಜನರು ದಶಕಗಳಿಂದ ಮಹಾದಾಯಿ, ಕಳಸಾ–ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಯಾವುದೇ ರಾಷ್ಟ್ರೀಯ ಪಕ್ಷಗಳು ಸರಿಯಾದ ಸ್ಪಂದನೆ ನೀಡುತ್ತಿಲ್ಲ’ ಎಂದು ದೂರಿದರು.

‘2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವ ಕಾರಣಕ್ಕೆ ರಾಷ್ಟ್ರೀಯ ಪಕ್ಷಗಳನ್ನು ಈ ವಿಷಯವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿವೆ. ಆದರೆ, ಯಾವುದೇ ಪಕ್ಷದ ಮುಖಂಡರು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ’ ಎಂದು ದೂರಿದರು.

ಮುಖಂಡ ಬಸವರಾಜ ಟೀಕೆಹಳ್ಳಿ ಮಾತನಾಡಿ, ‘ಕಳಸಾ–ಬಂಡೂರಿ ನಾಲೆಯನ್ನು ಮಲಪ್ರಭಾ ನದಿಗೆ ಜೋಡಿಸಿದರೆ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಗೋವಾ ಸರ್ಕಾರ ಮೊಂಡು ವಾದವನ್ನು ಮಂಡಿಸುತ್ತಿದೆ. ಸಮುದ್ರದ ಪಾಲಾಗುವ ನೀರನ್ನು ಕರ್ನಾಟಕಕ್ಕೆ ಹರಿಸಲು ಅನುವು ಮಾಡಿಕೊಟ್ಟರೆ ಯಾವುದೇ ನಷ್ಟವಾಗುವುದಿಲ್ಲ. ಆದರೆ, ನಮ್ಮ ರಾಜಕೀಯ ನಾಯಕರು ತಮ್ಮ ಪ್ರತಿಷ್ಠೆಗಾಗಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ರಾಷ್ಟ್ರೀಯ ಪಕ್ಷಗಳ ನಮ್ಮ ರಾಜ್ಯದ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅದು ಸಾಧ್ಯವಾಗಿಲ್ಲ. ಈ ಹೋರಾಟ ಹಿಂಸಾ ಸ್ವರೂಪ ಪಡೆಯುವ ಮುನ್ನವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತು ಕೊಳ್ಳಬೇಕು’ ಎಂದು ಆಗ್ರಹಿಸಿದರು.

‘1989ರಲ್ಲಿ ಗೋವಾ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿಂಗ್‌ ಅವರು 45 ಟಿ.ಎಂ.ಸಿ. ನೀರು ಬಿಡಲು ಸಮ್ಮತಿ ನೀಡಿದ್ದರು. ಆದರೆ, 2002ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಿನ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ವಿರೋಧ ಪಕ್ಷಗಳನ್ನು ಟೀಕಿಸುತ್ತಿದ್ದಾರೆ’ ಎಂದರು.

ಮುಖಂಡರಾದ ಆಸೀಫಾಕ್‌ ಮಾಳಗಿ, ಸಂತೋಷ ತಳವಾರ, ಅಶೋಕ ದೇವಿಹೊಸೂರ, ಮೆಹಬೂಬ್‌ ಮಾಳಗಿ, ರಾಮು ಪಾಟೀಲ, ರವಿ ಮಾಳಗೇರ, ಈರವ್ವ ದ್ಯಾವನಹಳ್ಳಿ, ಶೋಭಾ ಕಾಗೇರ ಹಾಗೂ ಕವಿತಾ ಕರ್ಜಗಿ ಇದ್ದರು.

ಹಾವೇರಿ: ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ನೇತೃತ್ವದಲ್ಲಿ ಬೆಂಬಲ ಸೂಚಿಸಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಸಾಬ್‌ ತರ್ಲಘಟ್ಟಾ, ಮುಖಂಡ ರಾದ ಪ್ರಕಾಶ ಕಲ್ಲೇದೆವರ, ರಾಮಣ್ಣ ಗೋಣೆಮ್ಮನವರ, ಸಾದೇವಪ್ಪ ಸವೂರ, ನಾಗಪ್ಪ ಮರಿಗೌಡರ, ಚಮನ್‌ಸಾಬ್‌ ಪೀರಸಾಬ್‌ನವರ, ಬಸಪ್ಪ ಕಾಗಿನೆಲ್ಲಿ, ನಿಂಗಪ್ಪ ಹುಲಮನಿ, ಬಸವರಾಜ ಬ್ಯಾಳಿ ಹಾಗೂ ಕಲವೀರಪ್ಪ ವೀರಶೆಟ್ಟಿ ಇದ್ದರು.

ಬ್ಯಾಡಗಿ: ನಗರದಲ್ಲಿಯೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಉತ್ತರ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ ಬುಧವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ಮುಖಂಡರಾದ ಕೆ.ವಿ.ದೊಡ್ಡಗೌಡ್ರ, ಕಿರಣಕುಮಾರ ಗಡಿಗೋಳ, ಪರಮೇಶ ನಾಯಕ, ಚಿಕ್ಕಪ್ಪ ಛತ್ರದ, ಹಾಗೂ ಶಶಿಧರಸ್ವಾಮಿ ಛತ್ರಮಠ ಇದ್ದರು.

ಶಿಗ್ಗಾವಿ: ಹೋರಾಟ ಬೆಂಬಲಿ ಪಟ್ಟಣದಲ್ಲಿ ಬುಧವಾರ ಪಿಎಲ್‌ಡಿ ಬ್ಯಾಂಕ್‌ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಣುಕು ಶವ ಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷಗೌಡ ಪಾಟೀಲ ಮಾತನಾಡಿ, ‘ರೈತರು ನಾಡಿಗೆ ಅನ್ನ ನೀಡುವವರು. ಅವರ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜಕೀಯ ಮಾಡುತ್ತಿವೆ’ ಎಂದರು.

ಜಯಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ದುರ್ಗಪ್ಪ ವಡ್ಡರ, ಕರವೇ ತಾಲ್ಲೂಕು ಘಟಕದ ಉಪಾಧ್ಯಕ್ಷ ಬಸಲಿಂಗಪ್ಪ ನರಗುಂದ, ಕರವೇ (ಪ್ರವೀಣಶೆಟ್ಟಿ) ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕುನ್ನೂರ, ಮುಖಂಡರಾದ ಈರಪ್ಪ ಹಳೆಪ್ಪನವರ, ಹನಮಂತ ಬಂಡಿವಡ್ಡರ, ವಿಜಯಲಕ್ಷ್ಮಿ ಗುಡುಮಿ ಇದ್ದರು.

ಹಾನಗಲ್: ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪಟ್ಟಣದಲ್ಲಿ ಬುಧವಾರ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದಿಂದ  ತಹಶೀಲ್ದಾರ್‌ ಶಕುಂತಲಾ ಚೌಗಲಾ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ತಾಲ್ಲುಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ನಗರ ಘಟಕದ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ಮಾಲತೇಶ ಪರಪ್ಪನವರ, ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ವಾಸುದೇವ ಕಮಾಟಿ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ಮರ್ಧಾನಸಾಬ ಬಡಗಿ, ಗಂಗಾಧರ ಕೊಪ್ಪದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry