ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನರಹಿತ ಶಾಲೆಗಳಲ್ಲಿ ಕನಿಷ್ಠ ವೇತನ ಸಮರ್ಪಕ ಜಾರಿಗೆ ಒತ್ತಾಯ

ಅನುಷ್ಠಾನವಾಗದ ಸರ್ಕಾರದ ಆದೇಶ: ಡಿಡಿಪಿಐ, ಬಿಇಓಗೆ ಮಾಹಿತಿ ನೀಡಲು ಆರ್‌ಟಿಐ ಆಯುಕ್ತರ ಆದೇಶ
Last Updated 1 ಜನವರಿ 2018, 8:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅನುದಾನರಹಿತ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಡಿಡಿಪಿಐ ಹಾಗೂ ಬಿಇಒಗೆ ಮಾಹಿತಿ ಆಯುಕ್ತರು ಆದೇಶಿಸಿದ್ದಾರೆ.

‘ಈ ಕುರಿತು ಮಾಹಿತಿ ನೀಡುವಂತೆ ನಾನು ಧಾರವಾಡ ಶಿಕ್ಷಣ ಇಲಾಖೆಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದೆ. ಆದರೆ, ಡಿಡಿಪಿಐ ಮತ್ತು ಧಾರವಾಡ ಬಿಇಒ ಸಮರ್ಪಕ ಮಾಹಿತಿ ನೀಡದ ಕಾರಣ, ಮಾಹಿತಿ ಆಯುಕ್ತರಿಗೆ ಪತ್ರ ಬರೆದಿದ್ದೆ. ಅವರು ಈ ಆದೇಶ ನೀಡಿದ್ದು, ಅದರ ಪ್ರತಿಯನ್ನು ನನಗೆ ಕಳಿಸಿದ್ದಾರೆ’ ಎಂದು ಖಾಸಗಿ ಶಾಲೆಯ ಶಿಕ್ಷಕ ಡಿ. ರಂಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರ 2005ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಇನ್ನೂ ಅನುಷ್ಠಾನಗೊಳಿಸಿಲ್ಲ. ಹುಬ್ಬಳ್ಳಿ– ಧಾರವಾಡದ ಏಳು ಪ್ರಮುಖ ಶಾಲೆಗಳಲ್ಲಿಯೂ ಈ ನಿಯಮ ಪಾಲಿಸಿಲ್ಲ. ಈ ಕುರಿತು ಮಾಹಿತಿ ಕೇಳಿದರೂ, ಅಧಿಕಾರಿಗಳು ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ಟ್‌ಗೆ ಹಾಜರಾಗಲು ಸೂಚನೆ: ‘ಆರ್‌ಟಿಐ ಅಡಿ ಬೇಗ ಮಾಹಿತಿ ಬಾರದಿದ್ದುದರಿಂದ ನಾನು ನಾಲ್ಕು ತಿಂಗಳ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನ್ಯಾಯಾಲಯಕ್ಕೂ ಸರಿಯಾದ ಮಾಹಿತಿ ನೀಡಲಿಲ್ಲ. ಈಗ ಕೋರ್ಟ್‌, ಮುಂದಿನ ಏಪ್ರಿಲ್‌ 4ರಂದು ಖುದ್ದು ಹಾಜರಾಗಬೇಕು ಎಂದು ಡಿಡಿಪಿಐ, ಬಿಇಒಗೆ ಆದೇಶ ನೀಡಿದೆ’ ಎಂದೂ ರಂಜನ್‌ ತಿಳಿಸಿದರು.

‘ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ, ಬೆಳಗಾವಿ ವಲಯದಲ್ಲಿಯೇ ಹೆಚ್ಚು ವೇತನ ನೀಡಲಾಗುತ್ತಿದೆ. ಶಾಲೆ ಸೇರುವಾಗ ಕಡಿಮೆ ವೇತನಕ್ಕೆ ಒಪ್ಪಿ ಕೆಲಸಕ್ಕೆ ಬರುವ ಶಿಕ್ಷಕರು, ನಂತರ ದೂರುತ್ತಾರೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳುತ್ತವೆ. ಆದರೂ, ನಾನು ಹಲವು ಬಾರಿ ಡಿಡಿಪಿಐ, ಬಿಇಓ ಸಭೆ ನಡೆಸಿ ಶಿಕ್ಷಕರಿಗೆ ಕನಿಷ್ಠ ವೇತನ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ವೀರಣ್ಣ ತುರಮುರಿ ತಿಳಿಸಿದರು.

ಪ್ರಕರಣ ನ್ಯಾಯಾಲಯದಲ್ಲಿದೆ: ‘ಈ ಸಂಬಂಧದ ಪ್ರಕರಣ ಹೈಕೋರ್ಟ್‌ನಲ್ಲಿದೆ. 5–6 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಮುಂದಿನ ಮೇನಲ್ಲಿ ಪ್ರಕರಣ ಇತ್ಯರ್ಥ ಆಗುವ ನಿರೀಕ್ಷೆ ಇದ್ದು, ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ’ ಎಂದು ಕುಸ್ಮಾ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ವಿ.ಆರ್.ಎನ್. ರೆಡ್ಡಿ ಹೇಳಿದರು.

‘ಸರ್ಕಾರ ₹10 ಶುಲ್ಕ ತೆಗೆದುಕೊಂಡು, ₹1000 ವೇತನ ನೀಡಿ ಎಂದು ಹೇಳುತ್ತದೆ. ಇದನ್ನು ಪಾಲಿಸಿದರೆ ಶೈಕ್ಷಣಿಕ ಸಂಸ್ಥೆಗಳು ಉಳಿಯಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳು ಅಥವಾ ಪೋಷಕರು ಅಥವಾ ಸಂಸ್ಥೆ ಯಾರಿಗೇ ಆಗಲಿ ಕಷ್ಟವಾಗಬಾರದು. ಹಾಗಾಗಿಯೇ ತಾವು ಕೋರ್ಟ್‌ ಮೊರೆ ಹೋಗಿದ್ದಾಗಿ ಅವರು ತಿಳಿಸಿದರು.

**

ಕನಿಷ್ಠ ವೇತನ ಅನುಷ್ಠಾನ ಮಾಡದಿರುವ ಕುರಿತು ಖಾಸಗಿ ಶಾಲೆಗಳಿಂದ ಮಾಹಿತಿ ಕೇಳಿದ್ದೇವೆ. ಇನ್ನೂ ಮಾಹಿತಿ ಬಂದಿಲ್ಲ. ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
–ಎನ್.ಎಚ್. ನಾಗೂರ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT