ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು-ಏಣಿ ಆಟದಲ್ಲಿ ಗೆದ್ದ ಸಲ್ಲು

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಗೋವಿಂದ ಆ ಕಾಲಘಟ್ಟದಲ್ಲಿ ಸ್ಟಾರ್. ಅವರ ಅಭಿನಯದ ಚಿತ್ರದ ‘ಶಾಟ್’ ಒಂದರ ಚಿತ್ರೀಕರಣ. ಎವೆಯಿಕ್ಕದೆ ಅದನ್ನು ನೋಡುತ್ತಿದ್ದ ಕಟ್ಟುಮಸ್ತು ಹುಡುಗನನ್ನು ಗೋವಿಂದ ಗಮನಿಸಿದರು. ಶಾಟ್ ಓಕೆ ಆದದ್ದೇ ಹತ್ತಿರ ಬರುವಂತೆ ಕರೆದರು. ಉತ್ಸಾಹದಿಂದ ಓಡಿಹೋದ ಹುಡುಗನನ್ನು, 'ಹೇಗಿತ್ತು ಶಾಟ್' ಎಂದು ಪ್ರಶ್ನಿಸಿದರು. ಚೆನ್ನಾಗಿಲ್ಲ ಎಂದು ಅವನು ಹೇಗೆತಾನೆ ಹೇಳಿಯಾನು?

ಚುರುಕು ಕಂಗಳ ಅದೇ ಹುಡುಗ ಸಲ್ಮಾನ್ ಖಾನ್.

ಸಲ್ಮಾನ್ ಮಾಡೆಲ್ ಆಗಿ ಸಣ್ಣಪುಟ್ಟ ಅವಕಾಶಗಳನ್ನು ಇದಿರುನೋಡುತ್ತಿದ್ದ ಕಾಲಘಟ್ಟ ಅದು. ಆಗ ಗೋವಿಂದ ಅಭಿಪ್ರಾಯ ಕೇಳಿದ್ದೇ ಅವರಿಗೆ ದೊಡ್ಡದೆನಿಸಿತ್ತು. ಮುಂದೆ ಗೋವಿಂದ ಸ್ಟಾರ್ ಗಿರಿಯ ಕಾಲ ಮುಗಿದ ಮೇಲೆ ಸಲ್ಮಾನ್ ಸೂಪರ್ ಸ್ಟಾರ್ ಆದದ್ದು ಗೊತ್ತೇ ಇದೆ. ಆದರೂ ತಮ್ಮ ಅಭಿಪ್ರಾಯ ಕೇಳಿದ ನಟನನ್ನು ನೆನಪಿನಲ್ಲಿ ಇಟ್ಟುಕೊಂಡು ‘ಪಾರ್ಟ್‌ನರ್’ ಚಿತ್ರದಲ್ಲಿ ಅವಕಾಶ ಕೊಡಿಸಿದ್ದರು.

ಸಲ್ಮಾನ್ ಅಪ್ಪ ಸಲೀಂ ಖಾನ್. ಸಿನಿಮಾ ಬರಹಗಾರ. ಚಿತ್ರಕಥೆಯನ್ನು ಬಿಗಿಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದವರು. 'ಶೋಲೆ' ಚಿತ್ರದಲ್ಲೂ ಅವರ ಕಾಣ್ಕೆ ಇದೆ. ಅಂಥ ಹಿನ್ನೆಲೆ ಇದ್ದೂ ಸಲ್ಮಾನ್ ಅದರಿಂದ ಚಿಕ್ಕಾಸಿನ ಲಾಭವನ್ನೂ ಪಡೆಯಲು ಆಗಲಿಲ್ಲ. ಯಾವ ನಿರ್ಮಾಪಕ ಹೊಸ ಮುಖ ಬೇಕು ಎಂದು ಕೇಳಿದರೂ ಸಲೀಂ ತಮ್ಮ ಮಗನ ಹೆಸರನ್ನು ಸೂಚಿಸುತ್ತಿರಲಿಲ್ಲ. ಅವರಿಗೆ ಸಂಕೋಚ. ಬದಲಿಗೆ ಕುಮಾರ್ ಗೌರವ್, ಸಂಜಯ್ ದತ್, ಸನ್ನಿ ದೇವಲ್ ಹೆಸರುಗಳನ್ನು ಸೂಚಿಸುತ್ತಿದ್ದರು. ಮಗನನ್ನು ಜನ ತಾವಾಗಿಯೇ ಗುರುತಿಸಲಿ ಎಂದು ಆ ತಂದೆ ಬಯಸಿದ್ದರು.

ಅಪ್ಪನ ನೆಚ್ಚಿಕೊಂಡರೆ ಪ್ರಯೋಜನವಿಲ್ಲ ಎಂದು ಗೊತ್ತಿದ್ದ ಸಲ್ಮಾನ್ ಖುದ್ದು ಸ್ಟುಡಿಯೊಗಳಿಗೆ ಎಡತಾಕಿದರು. ಆನಂದ್ ಗಿರಿಧರ್ ಎಂಬ ಬಿ-ಗ್ರೇಡ್ ಸಿನಿಮಾ ನಿರ್ದೇಶಕನ ಬಳಿಗೆ ಒಮ್ಮೆ ಅವಕಾಶ ಕೇಳಿಕೊಂಡು ಹೋದರು. ತಕ್ಷಣ ಭದ್ರತಾ ಸಿಬ್ಬಂದಿಯನ್ನು ಕರೆಸಿ, ಯುವ ಸಲ್ಮಾನ್ ಖಾನ್ ನನ್ನು ಅವರು ಹೊರಗೆ ದಬ್ಬಿಸಿದ್ದರು.

ಲಕ್ಷ್ಮೀಕಾಂತ್ ಪ್ಯಾರೆಲಾಲ್ ಸ್ವರ ಸಂಯೋಜನೆ ಮಾಡಿದ್ದ ಹಾಡುಗಳನ್ನು ಒಳಗೊಂಡ ‘ಬೀವಿ ಹೋ ತೋ ಐಸಿ’ ಸಲ್ಮಾನ್ ನಟಿಸಿದ ಮೊದಲ ಚಿತ್ರ. ಅದರಲ್ಲಿ ಅವರು ಎರಡನೇ ನಾಯಕ. ಒಂದೂ ಹಾಡು ಅವರಿಗೆ ಸಿಕ್ಕಿರಲಿಲ್ಲ. ಆಮೇಲೆ ‘ಮೈನೆ ಪ್ಯಾರ್ ಕಿಯಾ’ ಚಿತ್ರದಲ್ಲಿ ಮೊದಲಿಗೆ ಮುಖ್ಯಪಾತ್ರ ಸಿಕ್ಕಿದ್ದು.

ವೃತ್ತಿಬದುಕಿನ ಎರಡು ದಶಕ ಸಲ್ಮಾನ್ ಹೃದಯದ ಮಾತು ಕೇಳುತ್ತಿದ್ದರು. ಅವರಿಗೆ ಒಳ್ಳೆಯವರಾಗಿ ಕಂಡವರಿಗೆಲ್ಲ ಕಾಲ್‌ಷೀಟ್‌ ಕೊಟ್ಟ ಉದಾಹರಣೆಗಳಿವೆ. ಇದೇ ಕಾರಣಕ್ಕೆ ಅವರು ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಕಾಪಾಡಿಕೊಂಡು ಬಂದಷ್ಟು ಸ್ಥಿರತೆಯನ್ನು ಯಶಸ್ಸಿನ ವಿಷಯದಲ್ಲಿ ಕಾಪಾಡಿಕೊಳ್ಳಲು ಆಗಲಿಲ್ಲ. ಸಾಲು ಸಾಲು ಸಿನಿಮಾಗಳು ತೋಪಾದರೂ ಮಗನ ಬದ್ಧತೆ ಕಂಡು ಸಲೀಂ ಅನೇಕ ಸಲ ಕಣ್ಣೀರು ಹಾಕಿದ ಉದಾಹರಣೆಗಳಿವೆ.

ಅವರು ಮಗನಿಗೆ ಸಲಹೆ ಕೊಟ್ಟರು. ಸುಮ್ಮನೆ ಒಳ್ಳೆಯತನವನ್ನಷ್ಟೇ ನೋಡಿ ಚಿತ್ರಗಳಿಗೆ ಸಹಿ ಹಾಕುವುದು ಥರವಲ್ಲ ಎಂದು ಮನದಟ್ಟು ಮಾಡಿಕೊಟ್ಟರು. ಇನ್ನೊಬ್ಬ ಮಗ ಅರ್ಬಾಜ್ ಖಾನ್ ನಿರ್ಮಾಣದ ಕನಸನ್ನು ಕಾಣುತ್ತಿದ್ದ ಹೊತ್ತಿನಲ್ಲಿ ಹೊಮ್ಮಿದ ಅಪ್ಪನ ಈ ಸಲಹೆ ಸಲ್ಮಾನ್ ಬದುಕಿಗೆ ಮಹತ್ವದ ತಿರುವು ಕೊಟ್ಟಿತು. ಅದರ ಫಲವೇ ಅಭಿನವ್ ಕಶ್ಯಪ್ ನಿರ್ದೇಶನದ ‘ದಬಂಗ್’ ಹಿಂದಿ ಚಿತ್ರ.

ಅಲ್ಲಿಂದಾಚೆಗೆ ಸಲ್ಮಾನ್ ಚಿತ್ರದಿಂದ ಚಿತ್ರಕ್ಕೆ ಹೆಚ್ಚೇ ಮಾಗುತ್ತಾ ಬಂದರು. ಹೋದವರ್ಷ ಸೆಪ್ಟೆಂಬರ್ 9ನೇ ತಾರೀಖಿಗೆ ಅವರು ಚಿತ್ರರಂಗ ಪ್ರವೇಶಿಸಿ 30 ವರ್ಷಗಳು ಪೂರೈಸಿದವು. ಕೊನೆಯ ಹತ್ತು ವರ್ಷಗಳನ್ನು ಅವರ ಯಶಸ್ಸಿನ ಪರ್ವಕಾಲ ಎನ್ನಬೇಕು.

ಕುಮಾರ್ ಗೌರವ್ ಒಂದು ಕಾಲದಲ್ಲಿ ತಾವು ಬಳಸಿದ ಜೀನ್ಸ್‌ಗಳನ್ನು ಸಲ್ಮಾನ್‌ಗೆ ಉಡುಗೊರೆಯಾಗಿ ಕೊಟ್ಟಿದ್ದರು. ಕೇಳಿದಾಗ ಓಡಾಡಲು ತಮ್ಮ ಕಾರನ್ನೂ ಕೊಟ್ಟಿದ್ದರು. ಈಗ ಆ ನಟ ಹೊಸ ಜಮಾನದ ಎಷ್ಟೋ ಪಡ್ಡೆಗಳಿಗೆ ಗೊತ್ತೇ ಇಲ್ಲ. ಸಲ್ಮಾನ್ ಮಾತ್ರ ಈಗಲೂ ಜನಮಾನಸದಲ್ಲಿ ಇದ್ದಾರೆ. 50 ವಯಸ್ಸು ದಾಟಿದ ಮೇಲೂ ಈ ಪರಿಯ ವರ್ಚಸ್ಸು ಉಳಿಸಿಕೊಂಡವರು ಕೆಲವರಷ್ಟೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಎಂಬ ಗೌರವ ಅವರದ್ದಾಗಿದೆ. 75 ರೂಪಾಯಿ ಸಂಭಾವನೆಗೆ ಬಣ್ಣ ಹಚ್ಚಿದ್ದ ಕನಸುಗಾರನೊಬ್ಬ ಈ ಮಟ್ಟಕ್ಕೆ ಬೆಳೆದಿರುವುದು ಸೋಜಿಗವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT