ಗುರುವಾರ , ಜೂಲೈ 2, 2020
27 °C

ನನ್ನ ವಿರುದ್ಧ ಷಡ್ಯಂತ್ರ ದಿಂಗಾಲೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ವಿರುದ್ಧ ಷಡ್ಯಂತ್ರ ದಿಂಗಾಲೇಶ್ವರ ಸ್ವಾಮೀಜಿ

ಹಾವೇರಿ: ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀ ಮತ್ತು ನಾಗನೂರಿನ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದಾಗಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ಆರೋಪಿಸಿದರು.

‘ಉಭಯ ಶ್ರೀಗಳು ಹೇಳಿಕೊಳ್ಳುವಷ್ಟು ಸರಳ ಮಂದಿಯಲ್ಲ. ಆದರೆ, ಅವರಿಬ್ಬರೂ ದೊಡ್ಡ ಜಾಗದಲ್ಲಿದ್ದಾರೆ. ಹೀಗಾಗಿ ಅವರಿಂದ ರೋಸಿ ಹೋದರೂ ಸಮಾಜವು ಮೌನವಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಸಚಿವ ವಿನಯ ಕುಲಕರ್ಣಿ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನನಗೆ ಆತ್ಮೀಯರು. ಆದರೆ, ಈ ಖಾದಿಧಾರಿಗಳ ಹಿಂದೆ ಇರುವ ಉಭಯ ಖಾವಿಧಾರಿಗಳು ನನ್ನನ್ನು ತುಳಿದು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಧರ್ಮಕಾರಣದಲ್ಲಿ ರಾಜ ಕಾರಣಿಗಳು ಮತ್ತು ರಾಜಕಾರಣದಲ್ಲಿ ಸ್ವಾಮೀಜಿಗಳು ಗುರುತಿಸಿಕೊಳ್ಳಬಾರದು. ಆದರೆ, ರಾಜಕಾರಣಿಗಳು ಆಮಿಷ ಮತ್ತು ಬೆದರಿಕೆಗಳಿಂದ ಪೀಠಾಧಿಪತಿ, ಮಠ ಹಾಗೂ ಮಠದ ಸಂಸ್ಥೆಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ದೇಶವನ್ನು ಭಯೋತ್ಪಾದಕರು ಆಕ್ರಮಿಸುವಂತೆ, ರಾಜಕಾರಣಿಗಳು ಮಠಗಳ ಕಬ್ಜಾಕ್ಕೆ ಯತ್ನಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಅವರೇನಾದರೂ ವಿಧಾನಸೌಧ ವನ್ನು ಬಿಟ್ಟು ಕೊಡುತ್ತಾರಾ?’ ಎಂದು ಕೇಳಿದ ಅವರು, ಅಲ್ಲಿಗೆ ಸ್ವಾಮೀಜಿಗಳು ಹೋದರೆ ಹಾಸ್ಯಾಸ್ಪದ ಆಗಿ ಬಿಡುತ್ತದೆ ಎಂದೂ ಹೇಳಿದರು.

ಹೆಚ್ಚುತ್ತಿರುವ ಬೆದರಿಕೆ ‘ಇತ್ತೀಚೆಗೆ ಹಾವೇರಿಯ ಹುಕ್ಕೇರಿಮಠದಿಂದ ವಾಪಸ್ ಬರುವ ವೇಳೆಯಲ್ಲಿ ಕೆಲವರು ಬಂದು ನನಗೆ ಬೆದರಿಕೆ ಹಾಕಿದರು. ಇನ್ನೂ ಹಲವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಸಮಾಜಕ್ಕಾಗಿ ನಾನು ಹುತಾತ್ಮನಾದರೂ ಪರವಾಗಿಲ್ಲ. ಧರ್ಮ ಒಡೆಯಲು ಬಿಡುವುದಿಲ್ಲ’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಒಳಪಂಗಡಗಳ ಒಪ್ಪಿಗೆ ತೋರಿಸಿ’: ‘ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಹೋರಾಟ ನಡೆಸುವವರು, 99 ಒಳಪಂಗಡಗಳ ಸಮಾಜ ಬಾಂಧವರ ಸಭೆ ನಡೆಸಬೇಕು. ಅವರಿಂದ ನಾವೆಲ್ಲ ಲಿಂಗಾಯತರು ಎಂದು ಹೇಳಿಕೆ ಕೊಡಿಸಬೇಕು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

‘ಆಚರಣೆ ಧರ್ಮವಲ್ಲ’

‘ಲಿಂಗಾಯತ’ ಎನ್ನುವುದು ‘ವೀರಶೈವ’ ಧರ್ಮದ ದೀಕ್ಷಾ ಸಂಸ್ಕಾರದ ಒಂದು ಕ್ರಿಯೆ. ಒಂದು ಆಚರಣೆಯನ್ನೇ ‘ಧರ್ಮ’ ಎನ್ನುವುದು ದ್ರೋಹ. ಈ ಹಿಂದೆ ಜನಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಎಂದೇ ನಮೂದಿಸುವಂತೆ ಎಲ್ಲರೂ ಹೇಳಿಕೆ ನೀಡಿದ್ದರು. ಅಂದು ಅವರೆಲ್ಲ ಆ ಪತ್ರಗಳಿಗೆ ಸಹಿ ಹಾಕಿದ್ದಾರೆ. ಈಗ ಮಾತ್ರ ತಿರುಗಿ ಬಿದ್ದಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.