ಬುಧವಾರ, ಆಗಸ್ಟ್ 12, 2020
27 °C

‘ರಾಷ್ಟ್ರಕವಿ’ಯ ಜನ್ಮಸ್ಥಳಕ್ಕೆ ಕಾಯಕಲ್ಪ

ಜಿನೇಶ್‌ ಇರ್ವತ್ತೂರು Updated:

ಅಕ್ಷರ ಗಾತ್ರ : | |

‘ರಾಷ್ಟ್ರಕವಿ’ಯ ಜನ್ಮಸ್ಥಳಕ್ಕೆ ಕಾಯಕಲ್ಪ

ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯೊಂದಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿರುವ ‘ಯುಗದ ಕವಿ’ ಕುವೆಂಪು ಅವರ ಜನ್ಮಸ್ಥಳ ತಾಲ್ಲೂಕಿನ ಹಿರೇಕೊಡಿಗೆಯ ‘ರಾಷ್ಟ್ರಕವಿ ಕುವೆಂಪು ಸಂದೇಶ ಭವನ’ ಹೊಸರೂಪ ತಳೆಯುತ್ತಿದ್ದು, ಹೆಚ್ಚು ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

ಸ್ಥಳೀಯರು, ಜನಪ್ರತಿನಿಧಿಗಳು, ಕುವೆಂಪು ಅಭಿಮಾನಿಗಳ ಒತ್ತಾಯದಂತೆ ಆರು ತಿಂಗಳ ಹಿಂದೆಯೇ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ಕ್ಕೆ ಸಂದೇಶ ಭವನದ ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ವಹಿಸಿತ್ತು. ಆದರೆ ಪ್ರತಿಷ್ಠಾನಕ್ಕೆ ಜವಾಬ್ದಾರಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಅಧಿಕೃತವಾಗಿ ನಡೆಸಿಲ್ಲ. ಆದರೂ ಸರ್ಕಾರದ ಸೂಚನೆಯಂತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದ ಪ್ರತಿಷ್ಠಾನ, ‘ಕುವೆಂಪು ಸಂದೇಶ ಭವನ’ಕ್ಕೆ ಹೊಸತನದ ಸ್ಪರ್ಶ ನೀಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿದೆ.

ಶಾಸಕ ಡಿ.ಎನ್. ಜೀವರಾಜ್ ಅವರ ಪ್ರಯತ್ನದಿಂದಾಗಿ 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಸಂದೇಶಭವನದ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡಿದ್ದರು. ಅದರಲ್ಲಿ ಸಂದೇಶಭವನ ನವೀಕರಣ, ಗೋಪುರ ನಿರ್ಮಾಣ, ಗ್ರಂಥಾಲಯ ಕಟ್ಟಡದಲ್ಲಿ 2 ಅತಿಥಿ ಗೃಹ ಮತ್ತು ಮೇಲಂತಸ್ಥಿನಲ್ಲಿ ಸಭಾಂಗಣ ನಿರ್ಮಾಣ, ಹೊರ ಆವರಣಕ್ಕೆ ಇಂಟರ್‌ಲಾಕ್ ಅಳವಡಿಕೆ, ಪ್ರವಾಸಿಗರು ವಿರಮಿಸಲು ಸಿಮೆಂಟ್ ಆಸನಗಳ ಅಳವಡಿಕೆ, ಆವರಣ ಗೋಡೆ ನಿರ್ಮಾಣ ಮುಂತಾದ ಕಾಮಗಾರಿ ನಡೆಸಲಾಗಿತ್ತು. ಕಾಮಗಾರಿಗೆ ₹ 85 ಲಕ್ಷ ವೆಚ್ಚವಾಗಿದೆ ಎಂದು ಸಮಿತಿ ಕಾರ್ಯದರ್ಶಿ ಆಗಿನ ತಹಶೀಲ್ದಾರ್ ತಿಳಿಸಿದರೆ, ಕಾಮಗಾರಿ ನಿರ್ವಹಿಸಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭರ್ತಿ ಒಂದು ಕೋಟಿ ಖರ್ಚಾಗಿದೆ ಎಂದಿದ್ದರು. ₹15 ಲಕ್ಷ ಹಣ ಹೇಗೆ ಖರ್ಚಾಯಿತು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಹೀಗೆ ಕೋಟಿ ವೆಚ್ಚದಲ್ಲಿ ನಡೆದ ಕಾಮಗಾರಿ ಲೂಟಿಗೆ ಸೀಮಿತವಾಗಿದ್ದರಿಂದ ಕೆಲವೇ ದಿನಗಳಲ್ಲಿ ಸಂದೇಶ ಭವನದ ಆವರಣದ ಸಿಮೆಂಟ್ ಆಸನಗಳು ಮುರಿದು ಬಿದ್ದವು. ಗುಡ್ಡದಿಂದ ಇಳಿವ ಮಳೆನೀರು ಹರಿದು ಹೋಗಲು ಕಾಲುವೆ ನಿರ್ಮಿಸದ ಕಾರಣ ಕೆಸರು, ಮಣ್ಣೆಲ್ಲ ಸಂದೇಶ ಭವನದ ಆವರಣದಲ್ಲಿ ಜಮೆಯಾಗಿತ್ತು. ಗ್ರಂಥಾಲಯದ ಹೊರಾಂಗಣಕ್ಕೆ ಮಣ್ಣು ಸುರಿದು ಸಮತಟ್ಟು ಮಾಡಿ, ಇಂಟರ್‌ಲಾಕ್ ಅಳವಡಿಸಿದ್ದರೂ, ತಡೆಗೋಡೆಗೆ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದ ಕಾರಣ ಸೈಜುಕಲ್ಲುಗಳ ಇರುಕಿನಲ್ಲಿ ಮಳೆನೀರಿನೊಂದಿಗೆ ಅಂಗಳದ ಮಣ್ಣೆಲ್ಲಾ ಕೊಚ್ಚಿಹೋಗಿ 5-6 ಅಡಿಯಷ್ಟು ಆಳದ ಕಂದಕಗಳು ನಿರ್ಮಾಣವಾಗಿದ್ದವು.

ಹೊರಾಂಗಣದ ತುಂಬಾ ಲಂಟಾನ ಬೆಳೆದು ಪ್ರವಾಸಿಗರು ಕಾಲಿಡದಂತಾಗಿತ್ತು. ಮಹಡಿ ಮೇಲಿನ ಸಭಾಂಗಣದಲ್ಲಿ ಪಾರಿವಾಳಗಳ ಹಿಕ್ಕೆ ತುಂಬಿ ದುರ್ನಾತ ಬೀರುತ್ತಿತ್ತು. ಇಂತಹ ದುರವಸ್ಥೆ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿದಾಗ ಎಚ್ಚೆತ್ತ ಜಿಲ್ಲಾಡಳಿತ ಕಳೆದ ವರ್ಷ ಮತ್ತೆ ₹15 ಲಕ್ಷ ವೆಚ್ಚದ ದುರಸ್ತಿಗೆ ನೀಲನಕ್ಷೆ ಸಿದ್ಧಪಡಿಸಿತ್ತು. ಆದರೆ ಕಾಮಗಾರಿ ನಡೆಯಲೇ ಇಲ್ಲ.

ಇದೀಗ ಸಂದೇಶ ಭವನಕ್ಕೆ ಅಂಟಿದ್ದ ಅವ್ಯವಸ್ಥೆಯ ಕೊಳೆ ತೊಳೆದು ಜೀವಕಳೆ ತುಂಬಲು ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಮುಂದಾಗಿದೆ. ಭವನದ ಸುತ್ತಲಿನ ಕಬ್ಬಿಣದ ಗ್ರಿಲ್, ಒಳಭಾಗದ ಸಂದೇಶ ಫಲಕಗಳನ್ನು ತೆರವುಗೊಳಿಸಿ, ಕಟ್ಟಡದ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲಾಗುತ್ತಿದೆ. ಭಿನ್ನಗೊಂಡಿದ್ದ ಕುವೆಂಪು ಪ್ರತಿಮೆಯ ಬದಲು ಕುಳಿತ ಭಂಗಿಯ ಕವಿ ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗುತ್ತಿದೆ.

ಭವನದ ಎದುರು ಉದ್ಯಾನವನ ನಿರ್ಮಿಸಲು ಹುಲ್ಲುಹಾಸು ಅಳವಡಿಸಲಾಗುತ್ತಿದೆ. ಪಕ್ಕದ ಗುಡ್ಡಕ್ಕೆ ಮೆಟ್ಟಿಲು ನಿರ್ಮಿಸಿ. ಸುತ್ತಲಿನ ಪ್ರಕೃತಿ ಸೊಬಗು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಂಥಾಲಯ ಕಟ್ಟಡಕ್ಕೆ ಕಡಿಮಾಡು ನಿರ್ಮಿಸಿ ಅಂದ ಹೆಚ್ಚಿಸಲಾಗಿದೆ. ಮಹಡಿಯಲ್ಲಿರುವ ಸಭಾಂಗಣದ ಸುತ್ತ ಮೆಶ್ ಅಳವಡಿಸಿ ಪಾರಿವಾರಗಳಿಂದ ಮಲಿನವಾಗುವುದನ್ನು ತಪ್ಪಿಸಲಾಗಿದೆ. ಗ್ರಂಥಾಲಯ ಹೊರಾಂಗಣದ ಗುಂಡಿಗಳನ್ನು ಮುಚ್ಚಿ ಹುಲ್ಲು ಹಾಸು ಹೊದೆಸಿ, ಕವಿಶೈಲದಲ್ಲಿರುವ ನಿಡುಗಲ್ಲು ಮಾದರಿಯ ಫೈಬರ್ ಪ್ರತಿಕೃತಿಗಳು, ಕಲ್ಲುಬೆಂಚುಗಳನ್ನು ಜೋಡಿಸಿ ಅಂದ ಹೆಚ್ಚಿಸಲಾಗಿದೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಡೆದ ಫಲಪುಷ್ಪ ಪ್ರದರ್ಶನದ ವೇಳೆ ತೋಟಗಾರಿಕೆ ಇಲಾಖೆ ಪ್ರದರ್ಶಿಸಿದ್ದ ‘ಕವಿಮನೆ’ ಪ್ರತಿಕೃತಿಯನ್ನೇ ಪ್ರತಿಷ್ಠಾನದ ವತಿಯಿಂದ ಖರೀದಿಸಿ ಸಂದೇಶಭವನದ ಅಂದ ಹೆಚ್ಚಿಸಲು ಬಳಸಲಾಗಿದ್ದು, 10-15 ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಈ ಭಾಗದವರೇ ಆಗಿರುವ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.