ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಹಗರಣ: 3 ವರ್ಷ ಜೈಲು ಶಿಕ್ಷೆ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

Last Updated 2 ಜನವರಿ 2018, 10:40 IST
ಅಕ್ಷರ ಗಾತ್ರ

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾಗೆ ನೀಡಿರುವ ಮೂರು ವರ್ಷ ಜೈಲು ಶಿಕ್ಷೆ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಮಧು ಕೋಡಾ ಸಲ್ಲಿಸಿರುವ ಮೇಲ್ಮನವಿ ವಿಚಾರವಾಗಿ ಹೈಕೋರ್ಟ್‌ ಸಿಬಿಐ ಪ್ರತಿಕ್ರಿಯೆ ಕೇಳಿದ್ದು, ಜ.22ರ ವರೆಗೂ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಆದೇಶಕ್ಕೆ ತಡೆ ಸೂಚಿಸಿದೆ.

ಮಧು ಕೋಡಾಗೆ ₹25 ಲಕ್ಷ ದಂಡ ವಿಧಿಸಿ ನೀಡಿದ್ದ ಆದೇಶಕ್ಕೂ ನ್ಯಾಯಮೂರ್ತಿ ಅನು ಮಲ್ಹೋತ್ರಾ ತಡೆ ನೀಡಿದ್ದಾರೆ. ದೇಶದಿಂದ ಹೊರ ಹೋಗದಂತೆ ಶರತ್ತು ವಿಧಿಸಿ ಮುಂದಿನ ವಿಚಾರಣೆಯ ವರೆಗೂ ಮಧ್ಯಂತರ ಜಾಮೀನು ನೀಡಲಾಗಿದೆ.

ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತಾ, ಜಾರ್ಖಂಡ್‌ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ.ಬಸು ಮತ್ತು ಕೋಡಾ ಅವರ ಆಪ್ತ ವಿಜಯ್ ಜೋಶಿಗೂ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ನೀಡಿದೆ.

ಮಧು ಕೋಡಾಗೆ ₹25 ಲಕ್ಷ ಮತ್ತು ಗುಪ್ತಾಗೆ ₹1 ಲಕ್ಷ ದಂಡ, ಅಕ್ರಮವಾಗಿ ಕಲ್ಲಿದ್ದಲು ನಿಕ್ಷೇಪ ಗುತ್ತಿಗೆ ಪಡೆದ ವೀನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್‌ ಲಿಮಿಟೆಡ್‌ಗೆ (ವಿಎಸ್‌ಯುಎಲ್‌) ₹50 ಲಕ್ಷ ದಂಡ ವಿಧಿಸಿತ್ತು.

ಪ್ರಕರಣದ ಹಿನ್ನೆಲೆ:
ಪಶ್ಚಿಮ ಬಂಗಾಳದ ವಿಎಸ್‌ಯುಎಲ್‌ಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡದಂತೆ ಕಲ್ಲಿದ್ದಲು ಸಚಿವಾಲಯ ಮಾಡಿದ್ದ ಶಿಫಾರಸನ್ನು ಮರೆಮಾಚಿ, ಅದೇ ಸಂಸ್ಥೆಗೆ ನಿಕ್ಷೇಪ ಹಂಚಿಕೆ ಮಾಡುವಂತೆ ಕಲ್ಲಿದ್ದಲು ಕಾರ್ಯದರ್ಶಿ ಎಚ್‌.ಸಿ.ಗುಪ್ತಾ ನೇತೃತ್ವದ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಹೀಗೆ ಅಕ್ರಮವಾಗಿ ನಿಕ್ಷೇಪ ಹಂಚಿಕೆ ಮಾಡುವಲ್ಲಿ ಮಧು ಕೋಡಾ ಮತ್ತು ಸರ್ಕಾರದ ಅಧಿಕಾರಿಗಳು ಸಂಚು ರೂಪಿಸಿದ್ದರು ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT