ಬುಧವಾರ, ಆಗಸ್ಟ್ 5, 2020
26 °C

ಫೇಸ್‌ಬುಕ್‌: ಮನವಿ ನಿಯಂತ್ರಣಕ್ಕೆ ಕಿರುತಂತ್ರಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೇಸ್‌ಬುಕ್‌: ಮನವಿ ನಿಯಂತ್ರಣಕ್ಕೆ ಕಿರುತಂತ್ರಾಂಶ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಇನ್ನು ಮುಂದೆ ವಿನಂತಿಸಿಕೊಳ್ಳುವ ಪೋಸ್ಟ್‌ಗಳನ್ನು ನಿಯಂತ್ರಿಸಲು ಮುಂದಾಗಿದೆ. ಇದಕ್ಕಾಗಿ ನೂತನ ಕಿರುತಂತ್ರಾಂಶ (inbuilt) ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ. ಬಳಕೆದಾರರು ನಿತ್ಯವೂ ಪೋಸ್ಟ್‌ಗಳನ್ನು ಹಾಕಿ, ಅದಕ್ಕೆ ವೋಟ್, ಲೈಕ್ ಮಾಡಿ ಮತ್ತು ಶೇರ್ ಮಾಡಿ ಎಂದು ವಿನಂತಿಸಿಕೊಳ್ಳುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಅಲ್ಲದೆ, ಅನುಮತಿ ಇಲ್ಲದೆ ಇರುವಂತಹ ಪೋಸ್ಟ್‌ಗಳನ್ನು ಹಾಕುವವರ ವಿರುದ್ಧ  ಕ್ರಮ ತೆಗೆದುಕೊಳ್ಳಲೂ ನಿರ್ಧರಿಸಲಾಗಿದೆ.

ಲೈಕ್, ಕಮೆಂಟ್‌ ಹಾಗೂ ಶೇರ್ ಮಾಡುವಂತೆ ವಿನಂತಿಸುವ ಹಿಂದೆ ಪೋಸ್ಟ್ ರೀಚ್‌ ಹೆಚ್ಚಿಸಿಕೊಳ್ಳುವ ತಂತ್ರ ಅಡಗಿದೆ ಎಂದು ಫೇಸ್‌ಬುಕ್‌ ತಂಡ ಅಭಿಪ್ರಾಯಪಟ್ಟಿದೆ.

ಜಾಹೀರಾತು ನೀಡದೆ, ಚಾರಿಟಿ, ಆರೋಗ್ಯ, ಸಾಮಾಜಿಕ ಸೇವೆಯ ಹೆಸರಿನಲ್ಲಿ ಕೆಲವರು ಬಳಕೆದಾರರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ವರದಿಯಾಗಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಪದೇ ಪದೇ ವಿನಂತಿಸಿಕೊಳ್ಳುವ ಪೋಸ್ಟ್‌ಗಳ ರೀಚ್‌ ಅನ್ನು ತಡೆಯಲಾಗುವುದು ಎಂದು ಫೇಸ್‌ಬುಕ್‌ ತಂಡ ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದೆ.

ಉತ್ತಮ ಉದ್ದೇಶ, ಸಾಮಾಜಿಕ ಮೌಲ್ಯದ ಪೋಸ್ಟ್‌ಗಳಿಗೆ ವಿನಂತಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹಾಗೇ ಅವರು ತಮ್ಮ ಫೇಸ್‌ಬುಕ್‌ ರೀಚ್ ಅನ್ನು ಮರಳಿ ಪಡೆಯಬಹುದು. ನಾಪತ್ತೆಯಾದ ಮಕ್ಕಳು, ನಾಪತ್ತೆಯಾದವರ ಪತ್ತೆಗಾಗಿ ಮತ್ತು ಉತ್ತಮ ಉದ್ದೇಶದ ಹಣ ಸಂಗ್ರಹದಂತಹ ಪೋಸ್ಟ್‌ಗಳನ್ನು ಶೇರ್ ಮಾಡಲು ವಿನಂತಿಸಿದರೆ ಅಂತಹ ಪೋಸ್ಟ್ ಗಳಿಗೆ ದಂಡದಿಂದ ವಿನಾಯ್ತಿ ನೀಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ.

ಏರ್‌ಟೆಲ್‌ ಟಿವಿ ಅಪ್ಲಿಕೇಷನ್‌

ದೇಶದಲ್ಲಿ ಅತಿ ಹೆಚ್ಚು ದೂರವಾಣಿ ಬಳಕೆದಾರರನ್ನು ಹೊಂದಿರುವ ಬಾರ್ತಿ ಏರ್‌ಟೆಲ್‌ ಇದೀಗ ತನ್ನ ಇಂಟರ್‌ನೆಟ್‌ ಬಳಕೆದಾರರಿಗೆ ನೂತನ ‘ಏರ್‌ಟೆಲ್‌ ಟಿವಿ ಆ್ಯಪ್‌‘ ಅನ್ನು ವಿನ್ಯಾಸ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಏರ್‌ಟೆಲ್‌ನ ಪೋಸ್ಡ್‌ಪೇಯ್ಡ್‌ ಮತ್ತು ಪ್ರೀಪೇಯ್ಡ್‌ ಗ್ರಾಹಕರು ಈ ’ಏರ್‌ಟೆಲ್‌ ಟಿವಿ ಆ್ಯಪ್‌‘ ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದು.

ಐಒಎಸ್‌ ಮತ್ತು  ಆ್ಯಂಡ್ರಾಯ್ಡ್‌ ಮಾದರಿಯಲ್ಲಿ ಈ ಆ್ಯಪ್ ಲಭ್ಯವಿದೆ.  ಜೂನ್‌ 2018ರ ವರೆಗೂ ಏರ್‌ಟೆಲ್‌ ಗ್ರಾಹಕರು ಉಚಿತವಾಗಿ ಲೈವ್‌ ಟಿವಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು.

ಬಳಕೆದಾರರ ಸ್ನೇಹಿಯಾಗಿ ಈ ಆ್ಯಪ್‌ ರೂಪಿಸಿರುವುದು ವಿಶೇಷ. 300ಕ್ಕೂ ಹೆಚ್ಚು ಲೈವ್‌ ಟಿವಿಗಳು, 29 ಎಚ್‌ಡಿ ಟಿವಿಗಳು ಹಾಗೂ  ಭಾರತದ ವಿವಿಧ ಭಾಷೆಗಳ 6,000ಕ್ಕೂ ಹೆಚ್ಚು ಸಿನಿಮಾಗಳನ್ನು ಈ ಅಪ್ಲಿಕೇಷನ್‌ ಮೂಲಕ ವೀಕ್ಷಣೆ ಮಾಡಬಹುದು. ಇದರ ಜತೆಗೆ ಜನಪ್ರಿಯ ಟಿವಿ ಕಾರ್ಯಕ್ರಮಗಳನ್ನು ನೋಡಬಹುದು ಎಂದು ಏರ್‌ಟೆಲ್‌  ತಿಳಿಸಿದೆ.

ಬಿಟ್‌ಕಾಯಿನ್‌ ವ್ಯವಹಾರಕ್ಕೆ ನೂತನ ಕಿರುತಂತ್ರಾಂಶ

ದುಬೈ ಮೂಲದ ಪ್ಲುಟೊ ಎಕ್ಸ್‌ಚೇಂಜ್‌ ಕಂಪೆನಿಯು ಬಿಟ್‌ಕಾಯಿನ್‌ ವ್ಯವಹಾರಕ್ಕಾಗಿ ಗುಪ್ತ ಸಂಖ್ಯೆ ಹೊಂದಿರುವ ನೂತನ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ವರ್ಮಾ ತಿಳಿಸಿದ್ದಾರೆ.

ಬಳಕೆದಾರರು ತಮ್ಮ ಮೊಬೈಲ್‌ ಸಂಖ್ಯೆಗಳ ಮೂಲಕ ಬಿಟ್‌ಕಾಯಿನ್‌ ವ್ಯವಹಾರ ಮಾಡಬಹುದು. ಇದಕ್ಕೂ ಮುಂಚೆ ಬಳಕೆದಾರರು ತಮ್ಮ ಬ್ಯಾಂಕ್‌ ಖಾತೆಯನ್ನು ಈ ಆ್ಯಪ್‌ಗೆ ಜೋಡಿಸಿರಬೇಕು. ವಿಶ್ವದ ಯಾವುದೇ ಕರೆನ್ಸಿಯನ್ನು ಬಿಟ್‌ಕಾಯಿನ್‌ಗೆ ಪರಿವರ್ತಿಸಿಕೊಳ್ಳಬಹುದು. ಉದಾಹರಣೆಗೆ ಭಾರತೀಯ ಬಳಕೆದಾರರೊಬ್ಬರು ಒಂದು ಬಿಟ್‌ಕಾಯಿನ್‌ ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದಿಟ್ಟುಕೊಳ್ಳೊಣ. ಮೊದಲು ಬಳಕೆದಾರರ ಖಾತೆಯಲ್ಲಿ ಹಣ ಇರಬೇಕು. ದಿನದ ಮಾರುಕಟ್ಟೆ ಆದರಿಸಿ ಬಿಟ್‌ಕಾಯಿನ್‌ ದರ ನಿಗದಿ ಪಡಿಸಲಾಗಿರುತ್ತದೆ. ಪ್ರಸ್ತುತ ಒಂದು ಬಿಟ್‌ಕಾಯಿನ್‌ ದರ ₹ 7.5 ಲಕ್ಷ  ಇದೆ. ಬಳಕೆದಾರನ ಬ್ಯಾಂಕ್‌ ಖಾತೆಯಲ್ಲಿ ಇಷ್ಟು ಹಣವಿದ್ದರೆ ಈ ಮೊಬೈಲ್‌ ಆ್ಯಪ್‌ ಮೂಲಕ ಸರಳವಾಗಿ ಬಿಟ್‌ಕಾಯಿನ್‌ ಪಡೆಯಬಹುದು. ಹಾಗೇ ಕೆಲವು ದಿನಗಳ ನಂತರ ಇದನ್ನು ಮಾರಾಟ ಮಾಡಬಹುದು ಎಂದು ಆ್ಯಪ್‌ ವಿನ್ಯಾಸಕರು ತಿಳಿಸಿದ್ದಾರೆ.

ಇಲ್ಲಿ ಹಣ ಸಂಗ್ರಹಿಸುವ, ಬಿಟ್‌ಕಾಯಿನ್‌ಗೆ ಪರಿವರ್ತಿಸುವ ವ್ಯವಹಾರ ನಡೆಸಬಹುದು. ಇದಕ್ಕೆ ಗುಪ್ತ ಸಂಖ್ಯೆಗಳನ್ನು ಜೋಡಣೆ ಮಾಡುವುದು ಅಗತ್ಯವಾಗಿದೆ ಎಂದು ಭರತ್ ವರ್ಮಾ ಹೇಳಿದ್ದಾರೆ.

ಜಾನುವಾರು ರೋಗ ಮುನ್ನೆಚ್ಚರಿಕೆಯ ಆ್ಯಪ್‌

ಕೇಂದ್ರ ಸರ್ಕಾರ ಜಾನುವಾರುಗಳ ರೋಗ ಮುನ್ನೆಚ್ಚರಿಕೆಯ ಅಪ್ಲಿಕೇಷನ್‌ ಅಭಿವೃದ್ದಿಪಡಿಸಿದೆ. ಈ ಆ್ಯಪ್‌ ಮೂಲಕ ದನ ಕರುಗಳ ರೋಗಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಕೃಷಿ ಸಚಿವ ರಾಧಾ ಮೋಹನ ಸಿಂಗ್‌ ತಿಳಿಸಿದ್ದಾರೆ. ಈ ಆ್ಯಪ್‌ ರೈತರಿಗೆ ಹಾಗೂ ಜಾನುವಾರು ಪಾಲಕರಿಗೆ ಹೆಚ್ಚು ಅನುಕೂಲವಾಗಲಿದೆ.

ಕೇಂದ್ರ ಸರ್ಕಾರದ ಪಶು ಇಲಾಖೆಯ ಅಂಗಸಂಸ್ಥೆಯಾಗಿರುವ ಐಸಿಎಆರ್‌ ಸಂಸ್ಥೆ ಈ ಆ್ಯಪ್‌ ವಿನ್ಯಾಸ ಮಾಡಿದೆ. ಇದರಲ್ಲಿ ಪ್ರಮುಖ 13 ರೋಗಗಳು ಹಾಗೂ ಅವುಗಳ ಚಿಕಿತ್ಸಾ ಮಾಹಿತಿ ನೀಡಲಾಗುತ್ತಿದೆ. ಜಾನುವಾರುಗಳಿಗೆ ಬಂದಿರುವ  ರೋಗದ ಲಕ್ಷಣಗಳನ್ನು ವಿಡಿಯೊ ಮಾಡಿ ಅಥವಾ ಬರೆದು ಈ ಆ್ಯಪ್‌ಗೆ ಅಪ್‌ಲೋಡ್‌ ಮಾಡಬಹುದು. ಈ ಆ್ಯಪ್ ಆ್ಯಂಡ್ರಾಯ್ಡ್‌ ಮಾದರಿಯಲ್ಲಿ ಲಭ್ಯವಿದೆ.

ಯೆಪ್‌ಝೆನ್‌ ಸುರಕ್ಷತಾ ಸಾಧನ

ಫಿನ್ಲೆಂಡ್‌ನ ಯೆಪ್‌ಝೆನ್‌ ಕಂಪೆನಿ ನೂತನ ಸುರಕ್ಷತಾ ಸಾಧನ ಅಭಿವೃದ್ಧಿಪಡಿಸಿದೆ. ಇದು ನಾಪತ್ತೆಯಾಗಿರುವ ಮಹಿಳೆಯರು ಮತ್ತು ಮಕ್ಕಳ ಹುಡುಕಾಟಕ್ಕೆ ಹೆಚ್ಚು ನೆರವು ನೀಡಲಿದೆ. ಗೂಗಲ್‌ ಮ್ಯಾಪ್‌ ನೆರವಿನೊಂದಿಗೆ ಈ ಸಾಧನ ಕೆಲಸ ಮಾಡುತ್ತದೆ. ಬಳಕೆದಾರರು ಸ್ಥಳಗಳನ್ನು ಮ್ಯಾಪ್‌ ಮಾಡಿದರೆ ನಾಪತ್ತೆಯಾದವರನ್ನು ಸುಲಭವಾಗಿ ಹುಡುಕಬಹುದು.

ಈ ಸಾಧನ ಇದೀಗ ದೇಶದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಆರಂಭಿಕ ಬೆಲೆ ₹ 3,999 .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.