ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆಗಾಂವ್‌ ಹಿಂಸಾಚಾರ: ನಾಳೆ ಮಹಾರಾಷ್ಟ್ರ ಬಂದ್‌ಗೆ ಪ್ರಕಾಶ್‌ ಅಂಬೇಡ್ಕರ್‌ ಕರೆ

Last Updated 2 ಜನವರಿ 2018, 13:19 IST
ಅಕ್ಷರ ಗಾತ್ರ

ಮುಂಬೈ: ಭೀಮಾ ಕೋರೆಗಾಂವ್‌ ಕದನದ 200ನೇ ವಿಜಯೋತ್ಸವದ ವೇಳೆ ಶಾಂತಿ–ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಮಹಾರಾಷ್ಟ್ರ ಬಂದ್‌ ಆಚರಿಸುವಂತೆ ಭಾರಿಪಾ ಬಹುಜನ ಮಹಾಸಂಘದ(ಬಿಬಿಎಂ) ಮುಖಂಡ ಪ್ರಕಾಶ್‌ ಅಂಬೇಡ್ಕರ್‌ ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಣೆಯ ಕೋರೆಗಾಂವ್‌ದಲ್ಲಿ ಸೋಮವಾರ ನಡೆದ ಹಿಂಸಾಚಾರಕ್ಕೆ ಹಿಂದೂ ಏಕ್ತಾ ಅಘದಿ ಸಂಘಟನೆಯೇ ಕಾರಣ’ ಎಂದು ಆರೋಪಿಸಿದರು.

‘ನಾಳಿನ ಬಂದ್‌ ಅನ್ನು ಮಹಾರಾಷ್ಟ್ರ ಪ್ರಜಾಸತ್ತಾತ್ಮಕ ಒಕ್ಕೂಟ, ಎಡಪಂಥೀಯ ಸಂಘಟನೆಗಳು ಸೇರಿದಂತೆ 250ಕ್ಕೂ ಹೆಚ್ಚು ಸಂಸ್ಥೆಗಳು ಬೆಂಬಲಿಸಲಿವೆ. ಬಂದ್‌ ವೇಳೆ ಶಾಂತಿ ಕಾಪಾಡುವಂತೆ’ ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಜನರಿಗೆ ಕಿವಿಮಾತು ಹೇಳಿದರು.

‘ಪರಿಸ್ಥಿತಿ ಅನನುಕೂಲವಾಗಿದ್ದರೆ, ನಾವು ವಿಜಯೋತ್ಸವ ಆಯೋಜಿಸುತ್ತಿರಲಿಲ್ಲ. ಸೋಮವಾರದ ವಿಜಯೋತ್ಸವವನ್ನು ಸಂಭಾಜಿ ಬ್ರಿಗೇಡ್‌(ಮರಾಠ ಸಂಸ್ಥೆ) ಆಯೋಜಿಸಿತ್ತು. ಹಿಂದೂ ಏಕ್ತಾ ಅಘದಿ ಮತ್ತು ಶಿವರಾಜ್‌ ಪ್ರತಿಷ್ಠಾನದಿಂದಾಗಿ ಉತ್ಸವ ಹಿಂಸಾಚಾರಕ್ಕೆ ತಿರುಗಿತು’ ಎಂದು ಅವರು ಹೇಳಿದರು.

‘ಕೋರೆಗಾಂವ್‌, ಶಿರೂರು ಮತ್ತು ಚಕನ್‌ ಹಳ್ಳಿಗಳ ಜನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಸಹಾಯಧನವನ್ನು ತಡೆಹಿಡಿಯಲಾಗಿದೆ’ ಎಂದು ಆರೋಪಿಸಿದ ಪ್ರಕಾಶ್‌, ‘ನಡೆದ ಹಿಂಸಾಚಾರದ ಕುರಿತು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ವಿಜಯೋತ್ಸವದ ವೇಳೆ ಕಲ್ಲು ತೂರಾಟ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದರಿಂದ ಮಹಾರಾಷ್ಟ್ರದ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಮುಂಬೈ, ಪುಣೆಯಲ್ಲಿ ಪ್ರತಿಭಟನೆಗಳ ಕಾವು ಹೆಚ್ಚಿದೆ.

ಮಹಾರ್‌ ಸಮುದಾಯದ ಸೈನಿಕರು ಪೇಶ್ವೆಯ ಸೇನೆಯನ್ನು ಸೋಲಿಸಿದ ನೆನಪಿಗಾಗಿ ಭೀಮಾ ಕೋರೆಗಾಂವ್‌ ವಿಜಯೋತ್ಸವವನ್ನು ಪ್ರತಿ ವರ್ಷ ಆಚರಿಸುತ್ತ ಬರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT