ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಆಯೋಗ ಸ್ಥಾಪನೆಗೆ ವಿರೋಧ

Last Updated 3 ಜನವರಿ 2018, 8:51 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸ್ಥಾಪನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ಆಸ್ಪತ್ರೆಯ ವೈದ್ಯರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.

ಹೊರರೋಗಿ ಚಿಕಿತ್ಸಾ ವಿಭಾಗ (ಒಪಿಡಿ) ಬಂದ್ ಮಾಡಿ ಎನ್‌ಎಂಸಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದರು. ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರು. ಸರಿಯಾದ ಸ್ಪಂದನೆ ಸಿಗದೇ ಪರದಾಡಿದರು. ಇದರಿಂದ ಕಂಗೆಟ್ಟು ವೈದ್ಯರನ್ನು ಶಪಿಸಿದರು. ವಿವಿಧ ಖಾಸಗಿ ಆಸ್ಪತ್ರೆ ಮುಂದೆ ತೂಗು ಹಾಕಿದ್ದ ನಾಮಫಲಕ ನೋಡಿ ಬೇಸರಿಸಿಕೊಂಡರು. ನಂತರ ಸರ್ಕಾರಿ ಆಸ್ಪತ್ರೆ ಕಡೆಗೆ ಮುಖಮಾಡಿದರು. ಒಪಿಡಿ ಬಂದ್ ಹಿನ್ನೆಲೆಯಲ್ಲಿ ವೈದ್ಯಕೀಯ ವ್ಯವಸ್ಥೆಯ ಮೇಲೆ ಯಾವುದೇ ರೀತಿಯ ಗಂಭೀರ ಪರಿಣಾಮ ಎದುರಾಗಲಿಲ್ಲ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಜಾರಿಗೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಲವು ವ್ಯಕ್ತಿಗಳು ಮಾಡಿರಬಹುದಾದ ತಪ್ಪಿಗೆ ಒಂದು ಸಂಸ್ಥೆಯನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ. ಈಗಾಗಲೇ ರಾಜ್ಯದಲ್ಲಿ ಶೇ.30ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕನ್ನು ರಾಜ್ಯ ಸರ್ಕಾರ ಉಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಇದು ಶೇ.40 ರಷ್ಟಕ್ಕೆ ಅನ್ವಯವಾಗಲಿದೆ. ಇದರಿಂದ ಶೇ.60ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಪಡೆದುಕೊಳ್ಳುತ್ತವೆ. ಪರಿಣಾಮ ತಮ್ಮ ಮಕ್ಕಳನ್ನು ವೈದ್ಯರನ್ನಾಗಿಸುವ ಪಾಲಕರ ಕನಸಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಆಯೋಗ ಸ್ಥಾಪನೆಯಾದರೆ ಕೇವಲ ಕೆಲವು ದಿನಗಳು ತರಬೇತಿ ಪಡೆದ ಇತರೆ ವೈದ್ಯರು ಕೂಡಾ ಅಲೋಪಥಿ ವೈದ್ಯಕೀಯ ಪದ್ಧತಿ ಅಳವಡಿಸಿಕೊಳ್ಳುತ್ತಾರೆ. ಇದರಿಂದ ವೈದ್ಯಕೀಯ ವ್ಯವಸ್ಥೆಯಲ್ಲಿ ಕೆಟ್ಟ ಪರಿಣಾಮ ಎದುರಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಸೂದೆ ಜಾರಿಗೆ ಬರದಂತೆ ನೋಡಿಕೊಳ್ಳಬೇಕು. ದೇಶದ ಆರೋಗ್ಯ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಡಾ.ಶೇಖರ್ ಆರ್.ಮಾನೆ, ಡಾ.ಶ್ರೀಕಾಂತ ತೇಲಸಂಗ, ಡಾ.ಪ್ರಮೋದ ಮಿರ್ಜಿ, ಡಾ.ಮನ್ನಾಪುರ, ಡಾ.ಅರುಣ ಮಿಸ್ಕಿನ್, ಡಾ.ಸಿ.ಡಿ.ಕಲಬುರ್ಗಿ, ಡಾ.ಆರ್.ಟಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ

‘ಇಂದು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಮಧ್ಯಾಹ್ನದವೆರೆಗೆ ಹೊರರೋಗಿಗಳ ವಿಭಾಗದಲ್ಲಿ 435 ಮಂದಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಂಜೆಯವರೆಗೆ ಇನ್ನಷ್ಟು ರೋಗಿಗಳು ಬರುವ ಸಾಧ್ಯತೆ ಇದೆ. 24 ಮಂದಿ ಒಳರೋಗಿಗಳ ವಿಭಾಗದಲ್ಲಿ ದಾಖಲಾಗಿದ್ದಾರೆ. 5 ಸಾಮಾನ್ಯ ಹೆರಿಗೆ ಮಾಡಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್ ಡಾ.ಅನಂತರಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾರಿಗೂ ರಜೆ ನೀಡಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಔಷಧಿಯ ಸಂಗ್ರಹವನ್ನು ಮಾಡಿಕೊಳ್ಳಲಾಗಿದೆ. ಈವರೆಗೂ ಯಾವುದೇ ತೊಂದರೆಯಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT