ಸೋಮವಾರ, ಆಗಸ್ಟ್ 10, 2020
23 °C

ಬಿಜೆಪಿ ಪರಿವರ್ತನಾ ಯಾತ್ರೆ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಜಿಲ್ಲೆಯಲ್ಲಿ ಜ.4ಮತ್ತು 5ರಂದು ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ’ ಎಂದು ಮುಖಂಡ ಜಿ.ಸೋಮಶೇಖರರೆಡ್ಡಿ ತಿಳಿಸಿದರು. ‘ಪರಿವರ್ತನೆಯ ನಿರೀಕ್ಷೆಯಲ್ಲಿರುವ ಜಿಲ್ಲೆಯ ಜನರಿಗೆ ಯಾತ್ರೆಯು 2008ರ ನೆನಪನ್ನು ತರಲಿದೆ. ಆಗ ರಾಜಕೀಯ ಸನ್ನಿವೇಶದಲ್ಲಿ ಆದಂತೆಯೇ ಬರಲಿರುವ ಚುನಾವಣೆಯಲ್ಲೂ ಮಹಾನ್‌ ಪರಿವರ್ತನೆ ಘಟಿಸಲಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಯಾತ್ರೆಯು 4ರಂದು ಜಿಲ್ಲೆಗೆ ಆಗಮಿಸಲಿದೆ. ಅಂದು ಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿಯಲ್ಲಿ ಸಮಾವೇಶ ನಡೆಯಲಿದೆ. 5ರಂದು ಬೆಳಿಗ್ಗೆ 9ಕ್ಕೆ ನಗರದಲ್ಲಿ ಬೈಕ್‌ ಜಾಥಾ ನಡೆಯಲಿದೆ. ಗಡಿಗಿ ಚೆನ್ನಪ್ಪ ವೃತ್ತದಿಂದ ಆರಂಭವಾಗಿ ಬ್ರೂಸ್‍ಪೇಟೆ ಠಾಣೆ, ಜೈನ್ ಮಾರುಕಟ್ಟೆ ಮೂಲಕ ಜಿಲ್ಲಾ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

ಸಮಾವೇಶ: ‘ಜಾಥಾ  ಬಳಿಕ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು 40 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದರು. ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ, ಮುಖಂಡರಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ರವಿಕುಮಾರ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇೇಕರ್ ಹಾಗೂ ಆಂಧ್ರದ ಪುರಂದೇಶ್ವರಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ನನೆಗುದಿಗೆ: ‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ಅತಿ ಹೆಚ್ಚು ಅನುದಾನ ನೀಡಿದ್ದ ದಾಖಲೆ ಇದೆ. ಆಗ ಆರಂಭವಾಗಿದ್ದ ನಗರಕ್ಕೆ ನೀರು ಪೂರೈಸುವ ಯೋಜನೆ, ಸತ್ಯನಾರಾಯಣಪೇಟೆ ರೈಲ್ವೆ ಮೇಲ್ಸೇತುವೆ ಯೋಜನೆ ನನೆಗುದಿಗೆ ಬಿದ್ದಿವೆ. ಐದು ವರ್ಷದಲ್ಲಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಗಮನಾರ್ಹ ಅಭಿವೃದ್ಧಿಯೇ ಆಗಿಲ್ಲ’ ಎಂದು ದೂರಿದರು. ‘ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದೆ. ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಹೀಗಾಗಿಯೇ ನಾಗೇಂದ್ರ ಪಕ್ಷ ತೊರೆದು ಕಾಂಗ್ರೆಸ್‌ ಸೇರುವ ಬಗ್ಗೆ ವದಂತಿಗಳು ಹಬ್ಬುತ್ತಿವೆ’ ಎಂದರು.

‘ಜಿಲ್ಲೆಯ ಎಲ್ಲ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಜನರು ಬಿಜೆಪಿಗೆ ಮತ ಹಾಕಲು ಕಾತರರಾಗಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ ನಡೆಸಲಾಗುತ್ತಿದೆ. ಅಂತಿಮ ಹಂತದಲ್ಲಿ ಇಬ್ಬರನ್ನು ಆಯ್ಕೆ ಮಾಡಿ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ’ ಎಂದರು. ಪಾಲಿಕೆ ಸದಸ್ಯರಾದ ಮಲ್ಲನಗೌಡ, ಶ್ರೀನಿವಾಸ ಮೋತ್ಕರ್, ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಗುರುಲಿಂಗನಗೌಡ, ಮುಖಂಡರಾದ ಡಾ.ಎಸ್.ಜೆ.ವಿ. ಮಹಿಪಾಲ್, ಬಸವರಾಜ, ಇಬ್ರಾಹಿಂಬಾಬು, ಓಬಳೇಶ್ ಇದ್ದರು.

* * 

ಪಕ್ಷೇತರರಾಗಿ ಗೆದ್ದ ಮೊದಲ ದಿನದಿಂದಲೂ ಕೂಡ್ಲಗಿ ಶಾಸಕ ಬಿ.ನಾಗೇಂದ್ರ ಬಿಜೆಪಿಯೊಂದಿಗೇ ಇದ್ದಾರೆ. ಅವರು ನಮ್ಮಿಂದ ದೂರವಾಗಿಲ್ಲ

ಜಿ.ಸೋಮಶೇಖರರೆಡ್ಡಿ

ಬಿಜೆಪಿ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.