ಗುರುವಾರ , ಆಗಸ್ಟ್ 13, 2020
27 °C

ಕುರಿ ಸಾಕೆ? ಜಿಂಬೊ ಬೇಕೇ?

ಸಂದೀಪ್‌ ಕೆ. ಎಂ. Updated:

ಅಕ್ಷರ ಗಾತ್ರ : | |

ಕುರಿ ಸಾಕೆ? ಜಿಂಬೊ ಬೇಕೇ?

ಪ್ರತಿದಿನ ಮಾರುಕಟ್ಟೆಯಲ್ಲಿ ಹೊಸ ಯಂತ್ರಗಳದ್ದೇ ಮಾತು. ಮಾನವನ ಜೀವನ ಶೈಲಿಯ ಉನ್ನತೀಕರಣಕ್ಕೆ ವಿವಿಧ ಸಂಶೋಧನೆಗಳು ಪ್ರಪಂಚದಲ್ಲಿ ನಿರಂತರವಾಗಿ ನಡೆಯುತ್ತಾ ಸಾಗಿವೆ.

ಸಾಕಷ್ಟು ಕ್ಷೇತ್ರದಲ್ಲಿ ಮಾನವನ ಬುದ್ಧಿಶಕ್ತಿಯನ್ನು ಮೀರಿಸುವಂತಹ ಕೃತಕ ಬುದ್ಧಿಮತ್ತೆ ಹೊಂದಿರುವ ಯಂತ್ರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ.

ಮಾನವ ನಿರ್ಮಿತವಾದ ರೋಬೊಗಳು ಮಾನವನ ದೈಹಿಕ ಮತ್ತು ಬೌದ್ಧಿಕ ಶಕ್ತಿಗೆ ಸವಾಲು ಹಾಕಿ ಮುನ್ನಡೆಯುತ್ತಿವೆ. ಮಾನವನ ಪ್ರತಿರೂಪವನ್ನು ತಂತ್ರಜ್ಞಾನದ ಮೂಲಕ ರೋಬೊಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ಸಾಕಷ್ಟು ರೋಬೊ ತಯಾರಿಕಾ ಸಂಸ್ಥೆಗಳು ಯತ್ನಿಸುತ್ತಿವೆ.

ಪ್ರತಿಯತ್ನದಲ್ಲೂ ಹೊಸದೊಂದು ಆವಿಷ್ಕಾರವನ್ನು ಕಂಡುಕೊಂಡು ಅದನ್ನು ರೋಬೊಗಳಿಗೆ ಅಳವಡಿಸಿ ಪರೀಕ್ಷಿಸಲಾಗುತ್ತಿದೆ. ಹಾಗೆ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿದ ರೋಬೊಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಹೊಸ ವರ್ಷಕ್ಕೆ ಸೇವಾ ಆಧಾರಿತ ರೋಬೊಗಳನ್ನು ಹಲವಾರು ಸಂಸ್ಥೆಗಳು ಬಿಡುಗಡೆಗೆ ಸಿದ್ಧ ಮಾಡಿಕೊಂಡಿದ್ದು, ಕೆಲವು ರೋಬೊಗಳು ಕುತೂಹಲ ಮೂಡಿಸುತ್ತಿವೆ.

ಮನೆ ನೋಡಿಕೊಳ್ಳುತ್ತೆ ಈ ಕುರಿ

ಮೇಫೀಲ್ಡ್ ರೊಬಾಟಿಕ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮನೆ ರೋಬೊ ಕುರಿ (ಇದು ನಾವು ತಿಳಿದ ಕುರಿಯಲ್ಲ ಸ್ವಾಮಿ; ಇದರ ಹೆಸರೇ KURI ಎಂದು!), ಇದು ಅತ್ಯಂತ ಬುದ್ಧಿವಂತ ರೋಬೊವಾಗಿದ್ದು, ಉನ್ನತ ಮಟ್ಟದ ಆ್ಯನಿಮೇಟಿಂಗ್ ವಿನ್ಯಾಸ ಹೊಂದಿದೆ. ಮಾನವನ ರೀತಿಯಲ್ಲೇ ಕಣ್ಣುಗಳನ್ನು ಹೊಂದಿದ್ದು, ಸಂಕೇತ, ಸಂಜ್ಞೆಗಳ ಮೂಲಕ ಅಭಿವ್ಯಕ್ತಗೊಳಿಸುವುದು ಅದರ ವಿಶೇಷ. ಮನೆಯ ಮೇಲ್ವಿಚಾರಣೆ ಮತ್ತು ರಕ್ಷಣೆಯ ಉದ್ದೇಶ ಈ ರೋಬೊ ಹಿಂದಿನದ್ದು. ಮನೆಯಲ್ಲಿರುವ ಸಾಕು ಪ್ರಾಣಿಯಂತೆ ರೋಬೊ ಇರುತ್ತದೆ. ವಿಡಿಯೊ, ಫೋಟೊ ಸೆರೆ ಹಿಡಿಯುವ, ಮನುಷ್ಯನ ಮುಖಗಳನ್ನು ಗುರುತಿಸುವ ಎಚ್.ಡಿ. ಕ್ಯಾಮೆರಾ ರೋಬೊದಲ್ಲಿದೆ. ಇದು ಸಂಪೂರ್ಣ ಬ್ಯಾಟರಿಚಾಲಿತವಾಗಿದ್ದು, ಚಾರ್ಜಿಂಗ್ ಪೋರ್ಟ್‌ ಸಹ ಇರಲಿದೆ. ನಿಮ್ಮ ಮೊಬೈಲ್ ಮೂಲಕ ನಿಯಂತ್ರಿಸಬಹುದಾಗಿದೆ ಮತ್ತು ಅದರ ಕ್ಯಾಮೆರಾಗಳ ಮೂಲಕ ನಿಮ್ಮ ಮನೆಯ ಸುರಕ್ಷತೆಯ ಬಗ್ಗೆ ಗಮನಹರಿಸಲು ಸಾಧ್ಯವಿದೆ.

ಆಪ್ತ ಸಹಾಯಕ ಓಲಿ

ಅಮೆರಿಕ ಮೂಲದ ಎಮೋಟೆಕ್ ಇಂಟರ್‌ನ್ಯಾಷನಲ್ ಸಂಸ್ಥೆ ವಿಶ್ವದ ಮೊದಲ ಸಂವೇದನಾಶೀಲ ರೋಬೊ ‘ಓಲಿ’ಯನ್ನು ಆವಿಷ್ಕರಿಸಿದೆ. ಮೂಲತಃ ಯಂತ್ರಗಳ ಮೂಲಕ ನರವಿಜ್ಞಾನದ ಕುರಿತು ಸಂಶೋಧನೆಯಲ್ಲಿದ್ದ ಸಂಸ್ಥೆ, ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ಕಾರ್ಯವನ್ನು ಮಾಡುವ ರೀತಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಆಪ್ತ ಸಹಾಯಕನ ರೀತಿ ಕಾರ್ಯ ನಿರ್ವಹಿಸುವ ಓಲಿ, ಬೆಳಿಗ್ಗೆ ಎಚ್ಚರಗೊಳ್ಳಲು ತನ್ನ ಧ್ವನಿಯ ಮೂಲಕ ಸೂಚನೆ ನೀಡುತ್ತದೆ, ಜಿಮ್‌ನಲ್ಲಿ ದೇಹ ದಂಡಿಸುವ ವ್ಯಾಯಾಮದ ವೇಳೆ ಲೆಕ್ಕ ಮಾಡುತ್ತಾ ಮತ್ತಷ್ಟು ದೇಹ ದಂಡಿಸುವಂತೆ ಉತ್ತೇಜಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಸಂಗೀತವನ್ನು ಆಲಿಸುವಂತೆ ಮಾಡಿ ಖುಷಿ ನೀಡುತ್ತದೆ. ವೈಫೈ ಮೂಲಕ ಇತರ ಗ್ಯಾಜೆಟ್‌ಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಮಕ್ಕಳ ಸ್ನೇಹಿತ ಜಿಂಬೊ

ಅಸೂಸ್ ಸಂಸ್ಥೆ ನಿರ್ಮಾಣ ಮಾಡಿರುವ ಜಿಂಬೊ ರೋಬೊ ಮನೆಯ ಸದಸ್ಯನಂತೆ ಜೊತೆಗಿರುತ್ತದೆ. ಮುದ್ದಾಗಿರುವ ಜಿಂಬೊ, ಮನೆಯ ಎಲ್ಲ ಸದಸ್ಯರಿಗೆ ನೆಚ್ಚಿನ ಸಂಗಾತಿಯಾಗಿ ಕಾರ್ಯ ನಿರ್ವಹಿಸುತ್ತದೆ, ಸಣ್ಣ ಮಕ್ಕಳಿಗೆ ಸ್ನೇಹಿತನಾಗಿ, ಅವರೊಂದಿಗೆ ಮಾತನಾಡುತ್ತಾ, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಶಿಕ್ಷಕನಾಗಿರುತ್ತದೆ. ಮಲಗುವ ವೇಳೆ ಕತೆಗಾರನಾಗಿ ಸುಂದರ ಕತೆಗಳನ್ನು ಜಿಂಬೊ ಮಕ್ಕಳಿಗೆ ಹೇಳುತ್ತದೆ.

ಜಿಂಬೊ ಸ್ವತಂತ್ರವಾಗಿ ಸಂವೇದಿಸುತ್ತದೆ. ಮನೆಯಲ್ಲಿರುವ ಹಿರಿಯರಿಗೆ ಸರಿಯಾದ ಸಮಯದಲ್ಲಿ ಔಷಧಿಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಸುತ್ತದೆ. ಅವರ ಆರೋಗ್ಯದಲ್ಲಿ ಏರುಪೇರಾದಲ್ಲಿ ಸಂಬಂಧಿಸಿದ ವ್ಯಕ್ತಿಗೆ ವಿಡಿಯೊ ಕಾಲ್ ಮಾಡಿ ಅವರ ಪರಿಸ್ಥಿತಿ ತಿಳಿಸುತ್ತದೆ.

ಆನ್‌ಲೈನ್ ಶಾಪಿಂಗ್ ಮಾಡಲು ರೋಬೊ ಮಾರ್ಗದರ್ಶಕನ ರೀತಿ ಕಾರ್ಯ ನಿರ್ವಹಿಸುತ್ತದೆ. ನಿಗದಿಗೊಂಡಿರುವ ವೇಳಾಪಟ್ಟಿಯಂತೆ ಕಚೇರಿ ಮೀಟಿಂಗ್‌ಗಳಿಗೆ ಹಾಜರಾಗುವಂತೆ ಸೂಚನೆ ನೀಡುತ್ತದೆ.

ಅಡುಗೆ ತಯಾರಿಸುವ ವೇಳೆಯಲ್ಲಿ ಯಾವ ರೆಸಿಪಿಗಳನ್ನು ಹೇಗೆ ಬಳಸಬೇಕೆಂದು ಹಂತ-ಹಂತವಾಗಿ ಸೂಚಿಸುತ್ತದೆ ಜಿಂಬೊ. ಮನೆಯಲ್ಲಿರುವ ಇತರ ನಿಯಂತ್ರಿತ ಕ್ಯಾಮೆರಾಗಳಲ್ಲಿ ಸ್ಮಾರ್ಟ್ ಹೋಂ ಸಾಧನದ ಮೂಲಕ ಫೋಟೊ ಕ್ಲಿಕಿಸುವ ಆಯ್ಕೆಯನ್ನೂ ಹೊಂದಿದೆ.

ಸ್ವಾಗತಕಾರ ಸ್ಯಾನ್‌ಬಾಟ್‌

ಸ್ಯಾನ್‌ಬಾಟ್‌ ರೊಬಾಟಿಕ್ಸ್ ಸಂಸ್ಥೆ ರೂಪಿಸಿರುವ ಸ್ಯಾನ್‌ಬಾಟ್‌ ಮ್ಯಾಕ್ಸ್, ಆಫೀಸ್ ಸ್ವಾಗತಕಾರನಾಗಿ ಕಾರ್ಯ ನಿರ್ವಹಿಸುತ್ತದೆ. ಕಚೇರಿ ಸಿಬ್ಬಂದಿಯನ್ನು ಭೇಟಿಯಾಗಲು ಬರುವ ಅತಿಥಿಗಳ ಬೇಕು ಬೇಡಗಳನ್ನು ವಿಚಾರಿಸುವಂತೆ ತಂತ್ರಾಂಶ ರೂಪಿಸಲಾಗಿದೆ.

ಕಚೇರಿ ಸಿಬ್ಬಂದಿಯನ್ನು ಭೇಟಿಯಾಗಲು ಬರುವ ವ್ಯಕ್ತಿಗಳನ್ನು ಮಾತನಾಡಿಸುವ ಸ್ಯಾನ್‌ಬಾಟ್‌ ಮ್ಯಾಕ್ಸ್ ರೋಬೊ, ಅವರ ಮಾಹಿತಿಯನ್ನು ಕಲೆಹಾಕಿ ಅವರ ಫೋಟೊ ಕ್ಲಿಕ್ಕಿಸುತ್ತದೆ. ಅತಿಥಿಗಳು ಭೇಟಿಯಾಗಲು ಬಯಸಿರುವ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡುತ್ತದೆ. ಸಿಬ್ಬಂದಿಯಿಂದ ಅನುಮತಿ ದೊರೆತ ಮೇಲೆ ಅವರನ್ನು ತನ್ನ ಜೊತೆಯಲ್ಲೇ ಕರೆದುಕೊಂಡು ಹೋಗಿ ಅವರನ್ನು ಭೇಟಿ ಮಾಡಿಸುತ್ತದೆ. ಈ ರೋಬೊ ಸ್ವಯಂ ಚಾಲಿತವಾಗಿ ನಕ್ಷೆಗಳನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಪ್ರಶ್ನೆಗಳಿಗೆ ಕೃತಕ ಬುದ್ಧಿಮತ್ತೆಯಿಂದ ಉತ್ತರಿಸುವ ಗುಣ ಹೊಂದಿದೆ.

ಇದರಲ್ಲಿ ಟಚ್ ಪ್ಯಾಡ್, ಕ್ಯಾಮೆರಾ, ಸಿಮ್‌ ಕಾರ್ಡ್, 4ಜಿ ಡೆಟಾ ಕಾರ್ಡ್, ಯುಎಸ್‌ಬಿ, ಎಚ್‌ಡಿಎಂಐ ಪೋರ್ಟ್‌ನ ಆಯ್ಕೆಗಳಿವೆ.

ಕಳೆ ನಾಶ ಮಾಡುವ ಟರ್ಟಿಲ್

ಫ್ರಾಂಕ್ಲಿನ್ ರೊಬಾಟಿಕ್ಸ್ ಸಂಸ್ಥೆ ನಿರ್ಮಿಸಿರುವ ಟರ್ಟಿಲ್ ರೋಬೊ ಸಂಪೂರ್ಣ ಸೌರಶಕ್ತಿಯನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ರೋಬೊವಾಗಿದೆ. ಮನೆಯ ಕಿರು ಉದ್ಯಾನದಲ್ಲಿ ಕಳೆಗಳನ್ನು ನಾಶ ಮಾಡುವ ದೃಷ್ಟಿಯಿಂದ ಟರ್ಟಿಲ್ ರೋಬೊ ಸಂಶೋಧಿಸಲಾಗಿದೆ. ಉದ್ಯಾನದಲ್ಲಿ ಆಟಿಕೆ ರೀತಿ ಚಲಿಸಿಕೊಂಡು ಹೋಗಿ ಪ್ರತಿನಿತ್ಯ ಕಳೆಯನ್ನು ಕಿತ್ತುಹಾಕಿ, ಸುಂದರ ಗಿಡಗಳನ್ನು ರಕ್ಷಿಸುವ ಗಾರ್ಡನ್ ನಿರ್ವಾಹಕನ ರೀತಿ ಕಾರ್ಯ ನಿರ್ವಹಿಸುತ್ತದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.