ಮಂಗಳವಾರ, ಆಗಸ್ಟ್ 11, 2020
23 °C
ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳಾಗಿದ್ದ ಸ್ನೇಹಿತರು

ಲಾರಿ ಕಾರು ಡಿಕ್ಕಿ: ಟೆಕಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾರಿ ಕಾರು ಡಿಕ್ಕಿ: ಟೆಕಿಗಳ ಸಾವು

ಬೆಂಗಳೂರು: ನೈಸ್ ರಸ್ತೆಯ ವೃಷಭಾವತಿ ಮೇಲ್ಸೇತುವೆಯಲ್ಲಿ ಬುಧವಾರ ಬೆಳಿಗ್ಗೆ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಗಿ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಮೃತಪಟ್ಟಿದ್ದಾರೆ.

ವಿದ್ಯಾರಣ್ಯಪುರದ ಕೆ.ಎನ್.ಬಡಾವಣೆ ನಿವಾಸಿ ಪ್ರಶಾಂತ್ ಗೋಪಾಲಕೃಷ್ಣ (27) ಹಾಗೂ ಕಡಬಗೆರೆಯ ಬಿ.ಕೆ.ಅಕ್ಷಯ್‌ ಕುಮಾರ್ (28) ಮೃತರು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಇವರಿಬ್ಬರೂ ಕಾರಿನಲ್ಲಿ ಹೊಸೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು.

ಮೇಲ್ಸೇತುವೆಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿರುವ ಅಕ್ಷಯ್, ಲಾರಿಯನ್ನು ಹಿಂದಿಕ್ಕುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಮಾಡಿದ್ದಾರೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ದೊಮ್ಮಲೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು, ಒಂದೂವರೆ ವರ್ಷದ ಹಿಂದೆ ಪರಿಚಿತರಾಗಿದ್ದರು. ಕ್ರಮೇಣ ಆಪ್ತ ಸ್ನೇಹಿತರಾಗಿದ್ದರು. ಬೆಳಿಗ್ಗೆ ಎಲ್ಲಿಗೆ ಹೊರಟಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ. ಮೃತರ ಪೋಷಕರು ಹಾಗೂ ಸಹೋದ್ಯೋಗಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಅಕ್ಷಯ್ ಪೋಷಕರು ಕಡಬಗೆರೆಯ ಜನಪ್ರಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದಾರೆ. ಮನೆಯಿಂದ ಕಂಪೆನಿಗೆ ನಿತ್ಯ ಓಡಾಡುವುದು ಕಷ್ಟವಾಗುತ್ತದೆ ಎಂದು ಅಕ್ಷಯ್ ಇತ್ತೀಚೆಗೆ ಬೆಳ್ಳಂದೂರಿನ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ವಾಸ್ತವ್ಯ ಬದಲಿಸಿದ್ದರು. ಜ.1ರಂದು ತಂದೆಗೆ ಕರೆ ಮಾಡಿ ಹೊಸ ವರ್ಷದ ಶುಭ ಕೋರಿದ್ದ ಅವರು, ಸಂಜೆ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ, ಆ ದಿನ ಮನೆಗೆ ಹೋಗಿರಲಿಲ್ಲ. ಸ್ನೇಹಿತರ ಜತೆ ಹೊಸ ವರ್ಷದ

ಸಂಭ್ರಮಾಚರಣೆಗೆ ತೆರಳಿರಬಹುದು ಎಂದು ಪೋಷಕರೂ ಸುಮ್ಮನಾಗಿದ್ದರು.

‘ಮಂಗಳವಾರ ಇಬ್ಬರೂ ಕಾರಿನಲ್ಲಿ ಸುತ್ತಾಟಕ್ಕೆ ಹೋಗಿ ಬಂದಿದ್ದರು. ಅಂತೆಯೇ ಬುಧವಾರ ಬೆಳಿಗ್ಗೆ ಸಹ ಸುತ್ತಾಟಕ್ಕೆ ಹೊರಟಿದ್ದರು ಎನಿಸುತ್ತದೆ’ ಎಂದು ಮೃತರ ಸ್ನೇಹಿತರು ಹೇಳಿಕೆ ಕೊಟ್ಟಿದ್ದಾರೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ, ದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ಬೆಳಿಗ್ಗೆ ವಿಪರೀತ ಮಂಜು ಆವರಿಸಿತ್ತು. ಇದರಿಂದ ಅವರಿಗೆ ಲಾರಿ ಕಾಣಿಸಿದಂತಿಲ್ಲ’ ಎಂದು ಲಾರಿ ಚಾಲಕ ಮಹಮದ್ ಆಲಿ ಹೇಳಿದ್ದಾರೆ. ಆದರೆ, ಆ ಕಾರಣವನ್ನು ಪೊಲೀಸರು ನಿರಾಕರಿಸಿದ್ದಾರೆ.

ಮತ್ತೊಂದು ಅಪಘಾತ

ಎಲೆಕ್ಟ್ರಾನಿಕ್‌ಸಿಟಿ ಮೇಲ್ಸೇತುವೆಯಲ್ಲಿ ಬುಧವಾರ ಸಂಜೆ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿ (31) ಮೃತಪಟ್ಟಿದ್ದಾರೆ.

ಪತ್ನಿ–ಮಕ್ಕಳ ಜತೆ ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ ತೇಜಸ್ವಿ, ಎಲೆಕ್ಟ್ರಾನಿಕ್‌ಸಿಟಿಯ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ಮೇಲ್ಸೇತುವೆಯಲ್ಲಿ ಕಾರು ಕೆಟ್ಟು ನಿಂತಿತ್ತು. ಕೆಲಸಕ್ಕೆ ತೆರಳುತ್ತಿದ್ದ ತೇಜಸ್ವಿ, ವೇಗವಾಗಿ ಬೈಕ್ ಓಡಿಸಿಕೊಂಡು ಬಂದು ಆ ಕಾರಿಗೆ ಡಿಕ್ಕಿ ಮಾಡಿದ್ದಾರೆ.

ಕೆಳಗೆ ಬಿದ್ದಾಗ ಅವರ ಮೈ ಮೇಲೆ ಟೆಂಪೊ ಟ್ರಾವೆಲರ್ ಹರಿದು ಹೋಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಹಾಗೂ ಟೆಂಪೊಟ್ರಾವೆಲರ್‌ ಚಾಲಕರನ್ನು ವಶಕ್ಕೆ ಪಡೆದಿದ್ದೇವೆ ಎಂದು ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.