ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಬಾಗವಾನ ವಿರುದ್ಧ ಅಸಮಾಧಾನ ಸ್ಫೋಟ

ಸಾಮಾನ್ಯ ವರ್ಗಕ್ಕೆ ಮೀಸಲಾಗದ ಮೇಯರ್ ಹುದ್ದೆ; ಸದಸ್ಯರಲ್ಲಿ ಆಕ್ರೋಶ
Last Updated 4 ಜನವರಿ 2018, 6:17 IST
ಅಕ್ಷರ ಗಾತ್ರ

ವಿಜಯಪುರ: ಪಾಲಿಕೆಯ ಐದನೇ ಅವಧಿಯ ಮೇಯರ್, ಉಪ ಮೇಯರ್‌ ಹುದ್ದೆಗೆ ನಗರಾಭಿವೃದ್ಧಿ ಇಲಾಖೆ ಮೀಸಲಾತಿಯ ಅಧಿಸೂಚನೆಯನ್ನು ಜ. 1ರ ಸೋಮವಾರ ಪ್ರಕಟಿಸಿದ್ದು, ಪಾಲಿಕೆಯ ಬಹುತೇಕ ಸದಸ್ಯರು, ನಗರ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾಯಿತ ಜನಪ್ರತಿನಿಧಿಗಳ ಆಡಳಿತ ಮಂಡಳಿಯ ಐದು ವರ್ಷದ ಕೊನೆ ಅವಧಿಯಲ್ಲಾದರೂ ಮೇಯರ್‌ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡದಿರುವುದು, ಪರಿಶಿಷ್ಟ ಜಾತಿಯ ಮಹಿಳಾ ಕ್ಷೇತ್ರದಿಂದ ಆಯ್ಕೆಯಾಗಿರುವ ಏಕೈಕ ಸದಸ್ಯೆ, ಹಾಲಿ ಮೇಯರ್‌ ಸಂಗೀತಾ ಪೋಳ ಅವರಿಗೆ ಅನುಕೂಲ ಮಾಡಿಕೊಡಲು, ಉಪ ಮೇಯರ್‌ ಸ್ಥಾನವನ್ನು ಎಸ್‌ಸಿ ಮಹಿಳೆಗೆ ಮೀಸಲು ನಿಗದಿಗೊಳಿಸಿರುವುದರಲ್ಲಿ ಶಾಸಕ ಡಾ.ಮಕ್ಬೂಲ್‌ ಎಸ್‌ ಬಾಗವಾನ ‘ಕೈ’ ಚಳಕ ನಡೆದಿದೆ ಎಂದು 15ಕ್ಕೂ ಹೆಚ್ಚು ಸದಸ್ಯರು ಪಕ್ಷಾತೀತವಾಗಿ ದೂರಿದ್ದಾರೆ.

ಐದನೇ ಅವಧಿಯ ಮೇಯರ್‌ ಹುದ್ದೆ ಬಿಸಿಎಂ ಬಿ (3 ಬಿ) ಮಹಿಳೆ, ಉಪ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ಪೂರ್ವ ನಿಯೋಜಿತ: ‘ಪಕ್ಷೇತರ ಸದಸ್ಯೆ ಸುರೇಖಾ ಕಟ್ಟಿಮನಿ ಪಾಲಿಕೆಯಲ್ಲಿ ಪರಿಶಿಷ್ಟ ಪಂಗಡ ಪ್ರತಿನಿಧಿಸುವ ಏಕೈಕ ಮಹಿಳೆ. ಮೇಯರ್‌ ಸ್ಥಾನವನ್ನು ರೋಸ್ಟರ್‌ ಪದ್ಧತಿಯಡಿ ಎಸ್‌ಟಿಗೆ ನಿಗದಿ ಪಡಿಸಲು ನಗರ ಶಾಸಕರು ಸಾಕಷ್ಟು ಯತ್ನಿಸಿದರು. ಆದರೆ ಅವರ ನಿರೀಕ್ಷೆಯಂತೆ ಒಳ ಒಪ್ಪಂದ ಕುದರದಿದ್ದರಿಂದ, ಅದನ್ನು ‘ಕೈ’ ಬಿಟ್ಟು 3 ಬಿ ಮಹಿಳೆಗೆ ಮೀಸಲಾತಿ ನಿಗದಿ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಆಡಳಿತಾರೂಢ ಕಾಂಗ್ರೆಸ್‌ನ ಹಿರಿಯ ಸದಸ್ಯ ವಿಜಯಕುಮಾರ ಮಂಗಳವೇಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಿನ ಮೀಸಲಾತಿಯಂತೆ ಮೂವರು ಮಹಿಳೆಯರು ಮೇಯರ್ ಸ್ಥಾನಕ್ಕೆ ಅರ್ಹರಿದ್ದಾರೆ. ಕಾಂಗ್ರೆಸ್‌ನ ಶ್ರೀದೇವಿ ಲೋಗಾಂವಿ, ಜೆಡಿಎಸ್‌ನ ವಿದ್ಯಾ ಕವಟಗಿ, ಬಿಜೆಪಿಯ ಭಾರತಿ ಅಶೋಕ ಬೆಲ್ಲದ. ಉಪ ಮೇಯರ್‌ ಸ್ಥಾನಕ್ಕೆ ಪೈಪೋಟಿಯೇ ಇಲ್ಲ. ಇದೇ ಅವಧಿಯಲ್ಲಿ ಎರಡು ಬಾರಿ ಮೇಯರ್‌ ಆಗಿ ಆಡಳಿತ ನಡೆಸಿದ ಸಂಗೀತಾ ಪೋಳ, ಏಕೈಕ ಸದಸ್ಯೆ ಇರುವುದರಿಂದ ಉಪ ಮೇಯರ್‌ ಆಗುವುದು ಖಚಿತ’ ಎಂದು ಹೇಳಿದರು.

‘ಚುನಾವಣೆಗೆ ಇನ್ನೂ ಆರು ತಿಂಗಳು ಸಮಯವಿದೆ. ಬದಲಾದ ರಾಜಕಾರಣದ ಕಾಲಘಟ್ಟದಲ್ಲೂ ಪಾಲಿಕೆ ತಮ್ಮ ಹಿಡಿತದಲ್ಲೇ ಇರಬೇಕು ಎಂಬ ದೂರಾಲೋಚನೆಯಿಂದ ಈ ಮೀಸಲಾತಿ ನಿಗದಿ ಪಡಿಸುವಲ್ಲಿ ಅಧಿಕಾರಸ್ಥರು ತಮ್ಮ ‘ಕೈ’ ಚಳಕ ಪ್ರದರ್ಶಿಸಿದ್ದಾರೆ’ ಎಂದರು.

‘ನಗರ ಶಾಸಕರು ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಹುದ್ದೆಯ ಮೀಸಲಾತಿ ನಿಗದಿ ಪಡಿಸುವುದರಿಂದ ಹಿಡಿದು ಆಡಳಿತದಲ್ಲಿ ನಿರಂತರ ಹಸ್ತಕ್ಷೇಪ ನಡೆಸುತ್ತಿರುವುದರಿಂದ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಜನರ ಸಮಸ್ಯೆಗೆ ಸ್ಪಂದಿಸುವವರು ಇವರಿಗೆ ಬೇಕಿಲ್ಲ. ಸಾಕಷ್ಟು ಅರ್ಹರಿದ್ದರೂ ಅಧಿಕಾರದ ಬಳಿ ಸುಳಿಯದಂತೆ ಚತುರ ರಾಜಕಾರಣ ನಡೆಸುವಲ್ಲಿ ನಿಸ್ಸೀಮರಾಗಿದ್ದಾರೆ’ ಎಂದು ಬಿಜೆಪಿ ಸದಸ್ಯ ಪರಶುರಾಮ ರಜಪೂತ ದೂರಿದರು.

‘ನೆಪ ಮಾತ್ರಕ್ಕೆ ಮಾತ್ರ ವಿಜಯಪುರದಲ್ಲಿ ಮಹಾನಗರ ಪಾಲಿಕೆ ಆಡಳಿತವಿದೆ. ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸುತ್ತಿರುವವರು ಮಾತ್ರ ಪ್ರಭಾವಿಗಳ ಬಾಲ ಬುಡುಕರು, ಆಪ್ತ ಕಾರ್ಯದರ್ಶಿಗಳು. ಅಲ್ಲೂ ಅಭಿವೃದ್ಧಿಯ ಕಾಳಜಿಯಿಲ್ಲ. ಎಲ್ಲವೂ ತಮ್ಮ ಮೂಗಿನ ನೇರಕ್ಕೆ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ಸದಸ್ಯ ರವೀಂದ್ರ ಲೋಣಿ ತಿಳಿಸಿದರು.

‘ನನ್ನ ಕೈವಾಡವಿಲ್ಲ; ಬಾಗವಾನ’

‘ಮೀಸಲಾತಿ ಪ್ರಕಟಗೊಂಡಿದೆ ಎಂದು ನನಗೆ ತಿಳಿದಿದ್ದೇ ಬುಧವಾರ. ರೋಸ್ಟರ್‌ ಪ್ರಕಾರ ಮೇಯರ್‌, ಉಪ ಮೇಯರ್ ಮೀಸಲಾತಿಯನ್ನು ಸಂಬಂಧಿಸಿದ ಇಲಾಖೆ ನಿಗದಿಪಡಿಸಿದೆ. ಇದರಲ್ಲಿ ನನ್ನ ಕೈವಾಡ ಏನು ಇಲ್ಲ’ ಎಂದು ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್‌ ಎಸ್‌.ಬಾಗವಾನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನನಗೂ ಇದಕ್ಕೂ ಸಂಬಂಧವೇ ಇಲ್ಲ. ಇದರ ಬಗ್ಗೆ ಕಿಂಚಿತ್‌ ಮಾಹಿತಿಯಿಲ್ಲ. ರಾಜಕೀಯ ಕಾರಣಗಳಿಗಾಗಿ ನನ್ನ ವಿರುದ್ಧ ಟೀಕೆ ನಡೆಸುತ್ತಾರೆ’ ಎಂದು ಹೇಳಿದರು.

*

ಕಾಂಗ್ರೆಸ್‌ನವರು ತಮ್ಮ ಆಪ್ತರ ಮೂಲಕ ಪಾಲಿಕೆಯ ಆಡಳಿತವನ್ನು ನಾಲ್ಕು ವರ್ಷದಿಂದ ನಡೆಸಿದ್ದಾರೆ. ಇದು ಅದರ ಮುಂದುವರಿದ ಭಾಗವಷ್ಟೇ.

-ರವೀಂದ್ರ ಲೋಣಿ, ಬಿಜೆಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT