ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಸಾವಿರ ಉದ್ಯೋಗಾಕಾಂಕ್ಷಿಗಳ ನಿರೀಕ್ಷೆ

ಕೈಗಾರಿಕೋದ್ಯಮಿಗಳ ಜತೆ ಪೂರ್ವಭಾವಿ ಸಭೆ ನಡೆಸಿದ ಮುರಳೀಧರ ಹಾಲಪ್ಪ
Last Updated 4 ಜನವರಿ 2018, 6:58 IST
ಅಕ್ಷರ ಗಾತ್ರ

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶನಿವಾರ (ಜ.6) ಮತ್ತು ಭಾನುವಾರ (ಜ.7) ನಡೆಯಲಿರುವ ಉದ್ಯೋಗ ಮೇಳದಲ್ಲಿ ಕೈಗಾರಿಕೆ, ತರಬೇತಿ ಮತ್ತು ಹಣಕಾಸಿಗೆ ಸಂಬಂಧಿಸಿದ ಸುಮಾರು 250 ಸಂಸ್ಥೆಗಳು ಭಾಗವಹಿಸಲಿವೆ ಎಂದು ಕೌಶಲ ಅಭಿವೃದ್ಧಿ ಮತ್ತು ವೃತ್ತಿ ತರಬೇತಿ ನಿಗಮದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.

ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕೈಗಾರಿಕೋದ್ಯಮಿಗಳೊಂದಿಗೆ ಉದ್ಯೋಗ ಮೇಳದ ಪೂರ್ವಭಾವಿ ಸಭೆಯನ್ನು ನಡೆಸಿ ಅವರು ಮಾತನಾಡಿದರು.

‘ಯುವ ಸಬಲೀಕರಣ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ರಾಜ್ಯದಾದ್ಯಂತ ಉದ್ಯೋಗ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯ ಯುವಕರಿಗೆ ಉದ್ಯೋಗ ಒದಗಿಸುವ ಸಲುವಾಗಿ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಂಪೆನಿಗಳು ಭಾಗವಹಿಸಿ, ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡಲು ಮುಂದಾಗಬೇಕು’ ಎಂದು ಮನವಿ ಮಾಡಿಕೊಂಡರು.

‘ತುಮಕೂರಿನಲ್ಲಿಯೇ ಅನೇಕ ಕಂಪೆನಿಗಳಿವೆ. ದೂರದ ಊರಿನ ಕಂಪೆನಿಗಳ ಬದಲು, ಇಲ್ಲಿಯೇ ಕೆಲಸ ಸಿಕ್ಕರೆ ಉತ್ತಮ ಎನ್ನುವ ಮಾತುಗಳು ಯುವಕರಿಂದ ಕೇಳಿ ಬರುತ್ತಿದೆ. ಹೀಗಾಗಿಯೇ ಇಲ್ಲಿಯ ಉದ್ಯಮಿಗಳನ್ನು ಸಭೆ ಕರೆದು ಮೇಳದಲ್ಲಿ ಭಾಗವಹಿಸುವಂತೆ ಕೇಳಿಕೊಳ್ಳುತ್ತಿದ್ದೇನೆ’ ಎಂದರು.

ಈಗಾಗಲೇ ಜಿಲ್ಲೆಯ ಹತ್ತೂ ತಾಲ್ಲೂಕುಗಳಲ್ಲಿ ಸಂದರ್ಶನದ ಸಿದ್ಧತೆಯ ಕುರಿತಂತೆ ತರಬೇತಿಗಳು ನಡೆಯುತ್ತಿವೆ. ಮೇಳದಲ್ಲಿ ಇನ್ಫೊಸಿಸ್‌, ವಿಪ್ರೋ, ಅಶೋಕ್‌ ಲೈಲ್ಯಾಂಡ್‌, ಹುಂಡೈಯಂತಹ ದಿಗ್ಗಜ ಸಂಸ್ಥೆಗಳು ಭಾಗವಹಿಸಲಿದ್ದು, ಮೇಳದ ಮೊದಲ ದಿನವೇ ಸುಮಾರು 10 ಸಾವಿರ ಯುವಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ವರ್ಷವೊಂದಕ್ಕೆ 7 ಸಾವಿರ ಎಂಜಿನಿಯರ್‌ಗಳು

ನಗರದಲ್ಲಿರುವ ಸಿದ್ಧಗಂಗಾ, ಸಿದ್ಧಾರ್ಥ ಮತ್ತು ಶ್ರೀದೇವಿ ಮತ್ತು ಅಕ್ಷಯದಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಂದ ವರ್ಷಕ್ಕೆ ಸುಮಾರು 7,000 ಎಂಜಿನಿಯರ್‌ಗಳು ಹೊರಬರುತ್ತಿದ್ದಾರೆ ಎಂದು ತುಮಕೂರು ಕಾಮರ್ಸ್‌ ಛೇಂಬರ್ಸ್‌ನ ಸುರೇಂದ್ರ ಶಾ ಹೇಳಿದರು.

‘ಜಿಲ್ಲೆಯಲ್ಲಿ ಸುಮಾರು 25,600 ಕೈಗಾರಿಕೆಗಳಿವೆ. ಅದರಲ್ಲಿ 25 ಸಾವಿರ ಸಣ್ಣ ಕೈಗಾರಿಕೆಗಳು, 50 ದೊಡ್ಡ ಪ್ರಮಾಣದ ಕೈಗಾರಿಕೆಗಳಿದ್ದರೆ ಸುಮಾರು 7 ಬೃಹತ್‌ ಪ್ರಮಾಣದ ಕೈಗಾರಿಕೆಗಳಿವೆ. ಆದರೂ ಜಿಲ್ಲೆಯ ಸುಮಾರು 10 ಸಾವಿರ ಎಂಜಿನಿಯರ್‌ಗಳು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ’ ಎಂದು ತಿಳಿಸಿದರು.

ನಗರದಿಂದ ಪ್ರತಿನಿತ್ಯ 5 ಸಾವಿರ ಎಂಜಿನಿಯರ್‌ಗಳು ಕೆಲಸಕ್ಕೆಂದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಕೈಗಾರಿಕೆಗಳಲ್ಲಿ ಶೇ 50ರಷ್ಟು ಉದ್ಯೋಗಗಳನ್ನು ಇಲ್ಲಿಯವರಿಗೆ ನೀಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

ಮೇಳದಿಂದ ಉದ್ಯಮಿಗಳಿಗೂ ಅನುಕೂಲ

ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಶಿವಶಂಕರ್‌ ಮಾತನಾಡಿ, ‘ಯಾವುದೇ ಕೈಗಾರಿಕೆ ಅಥವಾ ಕಂಪೆನಿ ತನಗೆ ಬೇಕಾದ ಮಾನವ ಸಂಪನ್ಮೂಲವನ್ನು ಪ್ರತ್ಯೇಕವಾಗಿ ಜಾಹೀರಾತು ನೀಡಿ, ಸಂದರ್ಶನ ಮಾಡಿ ಪಡೆದುಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿಯೇ ನಮಗೆ ಬೇಕಾದ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ಉದ್ಯಮಿಗಳು ಮೇಳದಲ್ಲಿ ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT