ಕಟ್ಟಡ ನವೀಕರಣಕ್ಕೆ ಅನುಮತಿ ಕಡ್ಡಾಯ

7

ಕಟ್ಟಡ ನವೀಕರಣಕ್ಕೆ ಅನುಮತಿ ಕಡ್ಡಾಯ

Published:
Updated:

ಮೈಸೂರು: ‘ಎಲ್ಲ ಪಾರಂಪರಿಕ ಕಟ್ಟಡಗಳ ನವೀಕರಣ ಹಾಗೂ ದುರಸ್ತಿಗೆ ವಿಶೇಷ ಪಾರಂಪರಿಕ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂಬುದು ಗೊತ್ತಿದ್ದರೂ ನಿರ್ಮಿತಿ ಕೇಂದ್ರದವರು ಅನುಮತಿ ಪಡೆಯುತ್ತಿಲ್ಲ ಏಕೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಕಿಡಿಕಾರಿದರು.‌

ಇಲ್ಲಿ ಬುಧವಾರ ನಡೆದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಪಾರಂಪರಿಕ ಕಟ್ಟಡಗಳ ನವೀಕರಣ ಹಾಗೂ ದುರಸ್ತಿಗೆ ಇರುವ ನಿಯಮ ಎಲ್ಲರಿಗೂ ಒಂದೇ. ಸರ್ಕಾರದ ಸಂಸ್ಥೆಯಾದ ನಿರ್ಮಿತಿ ಕೇಂದ್ರವೇ ಈ ನಿಯಮ ಪಾಲಿಸದೆ ಇದ್ದರೆ ಖಾಸಗಿಯವರು ‍‍ಪಾಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ನಂಜನಗೂಡಿನಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ಇದರ ಜತೆಗೆ, ಹೆಲಿಪ್ಯಾಡ್ ಹಾಗೂ ಉದ್ಯಾನಗಳ ನಿರ್ಮಾಣ ಕಾಮಗಾರಿಯೂ ನಡೆಯಲಿದೆ. ಆದರೆ, ಇದುವರೆಗೂ ಇಲಾಖೆ ಅನುಮತಿ ಕೋರಿ ಸಮಿತಿಗೆ ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪಾರಂಪರಿಕ ಸಮಿತಿಗೆ ಕೇವಲ ಮೈಸೂರು ಮಾತ್ರ ಸೇರುವುದಿಲ್ಲ. ನಂಜನಗೂಡು ಕೂಡ ಇದರ ವ್ಯಾಪ್ತಿಗೆ ಬರುತ್ತದೆ ಎಂಬ ವಿಷಯವನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್.ಕಾಂತರಾಜ್, ಅಧೀಕ್ಷಕ ಎಂಜಿನಿಯರ್ ಸುರೇಶ್‌ಬಾಬು, ನಗರಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಸೀಮಾ, ಪಾರಂಪರಿಕ ಇಲಾಖೆಯ ಉಪನಿರ್ದೇಶಕ ಗವಿಸಿದ್ಧಯ್ಯ, ವಾಸ್ತುಶಿಲ್ಪ ತಜ್ಞ ಎನ್.ಎಸ್.ನಾರಾಯಣಶಾಸ್ತ್ರಿ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry