ಬುಧವಾರ, ಜೂಲೈ 8, 2020
29 °C
ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಕಾರ್ಯಕ್ರಮ: ತಾ.ಪಂ ಅಧ್ಯಕ್ಷ ಆಂಜಿನಪ್ಪ

11ಕ್ಕೆ ತಾ.ಪಂ ನಡಿಗೆ ಮನೆ ಮನೆ ಕಡೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

11ಕ್ಕೆ ತಾ.ಪಂ ನಡಿಗೆ ಮನೆ ಮನೆ ಕಡೆಗೆ

ಕೋಲಾರ: ‘ವಿವಿಧ ಇಲಾಖೆಗಳಲ್ಲಿ ಜನಸಾಮಾನ್ಯರ ಕೆಲಸ ವಿಳಂಬವಾಗು ತ್ತಿದ್ದು, ಆಡಳಿತ ಕುಂಠಿತಗೊಂಡಿದೆ ಹೀಗಾಗಿ ಇಲಾಖೆಗಳ ಕೆಲಸ ಚುರುಕುಗೊಳಿಸಲು ತಾಲ್ಲೂಕಿನಲ್ಲಿ ಜ.11ರಿಂದ ತಾಲ್ಲೂಕು ಪಂಚಾಯಿತಿ ನಡಿಗೆ ಮನೆ ಮನೆ ಕಡೆಗೆ ಎಂಬ ವಿನೂ ತನ ಕಾರ್ಯಕ್ರಮ ಆರಂಭಿಸಲಾಗುತ್ತದೆ’ ಎಂದುತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ತಿಳಿಸಿದರು.

ಕಾರ್ಯಕ್ರಮದ ಸಂಬಂಧ ನಗರದಲ್ಲಿ ಬುಧವಾರ ವಿವಿಧ ಸಂಘಟನೆಗಳ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯಿತಿಗಳಿದ್ದು, ದಿನಕ್ಕೆ ಒಂದರಂತೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ’ ಎಂದರು.

ತಾಲ್ಲೂಕಿನ ಪಂಚಾಯಿತಿಗಳು ಕೋಲಾರ, ಶ್ರೀನಿವಾಸಪುರ ಹಾಗೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತವೆ. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ನಡೆಸಲಾಗುತ್ತದೆ. ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂ ಜನಪ್ರತಿನಿಧಿಗಳು ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಸರ್ಕಾರಿ ಜಮೀನುಗಳಲ್ಲಿ ನಿರ್ಮಿಸಿದ ಮನೆಗಳ ಸಕ್ರಮಕ್ಕೆ ಸರ್ಕಾರ ಅಕ್ರಮ ಸಕ್ರಮ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ಅಕ್ರಮ ನಿರ್ಮಾಣಗಳನ್ನು ಪಟ್ಟಿ ಮಾಡಿ ಮಾಲೀಕರಿಗೆ ಖಾತೆ ಮಾಡಿಸಿಕೊಡಲಾಗುವುದು. ಇದಕ್ಕೆ ಸಂಘಟನೆಗಳ ಸಹಕಾರ ಅಗತ್ಯ. ಜನರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಕೈ ಜೋಡಿಸಬೇಕು ಎಂದು ಹೇಳಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಇ-ಖಾತೆಗೆ ಜನರಿಂದ ಲಂಚ ಪಡೆಯಲಾಗುತ್ತಿದೆ ಎಂಬ ದೂರು ಬಂದಿವೆ. ಗ್ರಾ.ಪಂ ಅಧಿಕಾರಿಗಳು ದೈನಂದಿನ ಕೆಲಸದಲ್ಲಿ ಭ್ರಷ್ಟಾಚಾರ ಎಸಗುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿಬಂದಿವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದ್ದು, ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶಕ್ಕೆ ಈ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ವಿವರಿಸಿದರು.

ಉತ್ತಮ ಮಳೆ: ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಕೆರೆ ಕುಂಟೆಗಳು ತುಂಬಿ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯೋಜನೆಗಳನ್ನು ರೈತರಿಗೆ ತಿಳಿಸಿ, ಅವು ಯಶಸ್ವಿಯಾಗುವಂತೆ ಮಾಡುವ ಗುರಿ ಇದೆ ಎಂದು ಸ್ಪಷ್ಟಪಡಿಸಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಆಡಳಿತ ಚುರುಕುಗೊಳಿಸಿ ಸರ್ಕಾರಿ ಸವಲತ್ತುಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಸಂಘಟನೆಗಳ ಸದಸ್ಯರು ಹಾಗೂ ಚಿಂತಕರು ಇದಕ್ಕೆ ಸಹಕಾರ ನೀಡಬೇಕು ಅಧಿಕಾರಿಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸಂತಸ ತಂದಿದೆ: ‘ಸ್ವಚ್ಛ ಭಾರತ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಿಸಿ ಬಯಲು ಬಹಿ ರ್ದೆಸೆ ಮುಕ್ತ ಗ್ರಾಮಗಳಾಗಿ ಮಾಡಿ ರುವುದು ಸಂತಸ ತಂದಿದೆ. ಈ ಯೋಜನೆಯ ಅನುಷ್ಟಾನದಲ್ಲಿ ಜಿಲ್ಲೆಯು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವ ಮಟ್ಟಿಗೆ ಕೆಲಸ ನಿರ್ವಹಿಸಲಾಗಿದೆ. ಶೌಚಾಲಯಗಳ ಸಮರ್ಪಕ ಬಳಕೆ ಆಗುತ್ತಿಲ್ಲ’ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ ಹೇಳಿದರು.

ಗ್ರಾ.ಪಂಗಳಲ್ಲಿ ರಾಜಕೀಯ ಕಚ್ಚಾಟದಿಂದ ಕೆಲವೆಡೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ವಸತಿ ಯೋಜನೆಯ ಫಲಾನುಭವಿಗಳಿಗೆ ಸಮರ್ಪಕವಾಗಿ ಹಣ ಬಿಡುಗಡೆ ಮಾಡಬೇಕು. ಗುಡಿಸಲುಗಳನ್ನು ನಿರ್ಮೂಲನೆ ಮಾಡಿ ಸುಸಜ್ಜಿತ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗುತ್ತಿಗೆದಾರರ ಪಾಲು: ‘ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಯೋಜನೆಗೆ ಮಂಜೂರಾಗುತ್ತಿರುವ ಸಹಾಯಧನ ಗುತ್ತಿಗೆದಾರರ ಪಾಲಾ ಗುತ್ತಿದೆ. ಅದನ್ನು ತಪ್ಪಿಸಬೇಕು. ಯೋಜನೆ ಯಲ್ಲಿ ದಲಿತ ಸಮುದಾಯದ ರೈತರಿಗೆ ಅನ್ಯಾಯವಾಗುತ್ತಿದೆ. ಫಲಾನುಭವಿಗಳು ಹೆಚ್ಚಿನ ಸಹಾಯಧನ ಕೇಳುತ್ತಿದ್ದಾರೆ. ಹನಿ ನೀರಾವರಿ ಯಂತ್ರೋಪಕರಣಗಳ ಬೆಲೆ ಹೆಚ್ಚಿ ರುವುದರಿಂದ ವೆಚ್ಚ ಭರಿಸಲಾಗದೆ ದಲಿತರು ಯೋಜನೆಯಿಂದ ವಂಚಿತ ರಾಗುತ್ತಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಚಾಲಕ ವಿಜಯಕುಮಾರ್ ಆರೋಪಿಸಿದರು.

ದಲಿತರಿಗೆ ನಿವೇಶನ ನೀಡುವಲ್ಲಿ ಜನ ಪ್ರತಿನಿಧಿಗಳು ಅಸ್ಪೃಶ್ಯತೆ ಅಚರಣೆ ಮಾಡುತ್ತಿದ್ದಾರೆ. ವಸತಿ ಯೋಜನೆ ಗಳಡಿ ದಲಿತರಿಗೆ ಕಾಲೊನಿಗಳಲ್ಲಿ ನಿವೇಶನ ಕೊಡು ವುದನ್ನು ಬಿಟ್ಟು ಎಲ್ಲಾ ವರ್ಗದ ಜನರಿಗೆ ಹೇಗೆ ನಿವೇಶನ ಹಂಚಿಕೆ ಮಾಡಲಾಗು ತ್ತಿದೆಯೋ ಅದೇ ಜಾಗದಲ್ಲಿ ನಿವೇಶನ ನೀಡಲಿ ಎಂದು ಒತ್ತಾಯಿಸಿದರು.

**

ಹಿಂದಿನ ವರ್ಷ ಕೃಷಿ ಇಲಾಖೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸೇರಿದ ಸುಮಾರು ₹ 1.20 ಕೋಟಿ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗಿದೆ. ಈ ಬಾರಿ ಆ ರೀತಿಯಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಅನುದಾನದ ಸಂಪೂರ್ಣ ಬಳಕೆಗೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುತ್ತೇವೆ.

–ಎಂ.ಆಂಜಿನಪ್ಪ, ತಾ.ಪಂ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.