ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿತ ಬಂಡವಾಳದ ಸಿರಿಧಾನ್ಯ ಬೆಳೆಯಿರಿ

ಸಿರಿಧಾನ್ಯಗಳೆಡೆ ನಮ್ಮ ನಡಿಗೆ ಜಾಗೃತಿ ಜಾಥಾಕ್ಕೆ ಚಾಲನೆ; ರೈತರಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಸಲಹೆ
Last Updated 4 ಜನವರಿ 2018, 8:09 IST
ಅಕ್ಷರ ಗಾತ್ರ

ಕೋಲಾರ: ‘ರೈತರು ವಾಣಿಜ್ಯ ಬೆಳೆಗಳಿಗೆ ಅಧಿಕ ಬಂಡವಾಳ ಹಾಕಿ ನಷ್ಟ ಅನುಭವಿಸುವ ಬದಲು ಮಿತ ಬಂಡವಾಳದ ಹಾಗೂ ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳನ್ನು ಬೆಳೆದು ಲಾಭ ಗಳಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಕೆ.ಶಿವಕುಮಾರ್ ಸಲಹೆ ನೀಡಿದರು.

ಸಾವಯವ ಹಾಗೂ ಸಿರಿಧಾನ್ಯಗಳ ಉತ್ತೇಜನಕ್ಕಾಗಿ ನಗರದಲ್ಲಿ ಮಂಗಳವಾರ ಆರಂಭಗೊಂಡ ‘ಸಿರಿಧಾನ್ಯಗಳೆಡೆ ನಮ್ಮ ನಡಿಗೆ’ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರೈತರು ಇಂದು ಹೆಚ್ಚಿನ ಬಂಡವಾಳ ಹಾಕಿ ವಾಣಿಜ್ಯ ಬೆಳೆ ಬೆಳೆದು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಸಾಮೆ, ಸಜ್ಜೆ, ಆರ್ಕಾ, ನವಣೆಯಂತಹ ಸಿರಿಧಾನ್ಯಗಳನ್ನು ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಪುರಾತನ ಕಾಲದಲ್ಲಿ ಯಾವುದೇ ಆಸ್ಪತ್ರೆಗಳು ಹಾಗೂ ಕಾಯಿಲೆಗಳು ಇರಲಿಲ್ಲ. ಸಿರಿಧಾನ್ಯಗಳ ಬಳಕೆಯಿಂದಾಗಿ ಪೂರ್ವಿಕರು ಆರೋಗ್ಯವಂತರಾಗಿದ್ದರು’ ಎಂದರು.

‘ಬದಲಾದ ಆಹಾರ ಮತ್ತು ಜೀವನ ಪದ್ಧತಿಯಿಂದ ಮನುಷ್ಯ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದಾನೆ. ಮಾರಕ ಕಾಯಿಲೆಗಳನ್ನು ತಪ್ಪಿಸಿ, ಉತ್ತಮ ಆರೋಗ್ಯ ಪಡೆಯುವಂತಾಗಲು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಬೇಕು. ಭವಿಷ್ಯದಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ ಎಂದು ತಿಳಿಸಿದರು.

ಮಾಯವಾಗಿವೆ: ‘ಸಿರಿಧಾನ್ಯಗಳು ರೈತರಿಗೆ ಹೆಚ್ಚಿನ ಲಾಭ ತಂದು ಕೊಡುತ್ತವೆ. ಸಿರಿಧಾನ್ಯಗಳ ಸೇವನೆಯಿಂದ ಯಾವುದೇ ಕಾಯಿಲೆ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹಿಂದೆ ಸಿರಿಧಾನ್ಯಗಳೇ ಬದುಕಿನ ಜೀವಾಳವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ಮಾಯವಾಗಿವೆ’ ಎಂದು ಕೃಷಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಇಲಾಖೆಯು ಸಿರಿಧಾನ್ಯಗಳನ್ನು ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು. ಸಮಾಜ ಮತ್ತೆ ಉತ್ತಮ ಆರೋಗ್ಯ, ಸೌಹಾರ್ದ ಬದುಕಿನತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.

‘ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಹಿರಿಯರು ಸಾಮೆ ಅಕ್ಕಿ ಅನ್ನ ಮಾಡಿ ಮೊಸರಿನೊಂದಿಗೆ ತಿನ್ನುತ್ತಿದ್ದರು. ಸಂಸ್ಥೆಯು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತದೆ’ ಎಂದು ರೋಟರಿ ಅಧ್ಯಕ್ಷ ಬಿ.ಕೆ.ದೇವರಾಜ್ ಹೇಳಿದರು.

ವಿವಿಧ ಸ್ಪರ್ಧೆ: ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸುವ ಹಾಗೂ ವಿವಿಧ ಖಾದ್ಯ ತಯಾರಿಸುವ ಸ್ಪರ್ಧೆಯನ್ನು ಮಹಿಳೆಯರಿಗೆ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದವು. ಮುಳಬಾಗಿಲು ತಾಲ್ಲೂಕಿನ ದಿನ್ನಹಳ್ಳಿಯ ನಿರ್ಮಲಾ ಪ್ರಥಮ, ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನೆತ್ತದ ರತ್ನಮ್ಮ ಮತ್ತು ಮಾಲೂರು ತಾಲ್ಲೂಕಿನ ಸುಧಾ ದ್ವಿತೀಯ ಸ್ಥಾನ, ಕೋಲಾರದ ಕಾರಂಜಿಕಟ್ಟೆಯ ಶೈಲಜಾ ಹಾಗೂ ಮಾಲೂರಿನ ರಮ್ಯಾ ತೃತೀಯ ಸ್ಥಾನ ಪಡೆದರು.

ಖಾದ್ಯ ತಯಾರಿಕಾ ಸ್ಪರ್ಧೆಯಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಗುಂಡಮನೆತ್ತದ ರತ್ನಮ್ಮ ಪ್ರಥಮ, ಕೊಡಿಚೆರವು ಗ್ರಾಮದ ಅನುರಾಧಾ ದ್ವಿತೀಯ ಹಾಗೂ ದಳಸನೂರಿನ ಲಕ್ಷ್ಮೀದೇವಮ್ಮ ತೃತೀಯ ಸ್ಥಾನ ಪಡೆದರು.

ವಿವಿಧೆಡೆ ಜಾಥಾ: ಕೃಷಿ ಇಲಾಖೆ ಆವರಣದಿಂದ ಆರಂಭವಾದ ಜಾಥಾ ಮೆಕ್ಕೆ ವೃತ್ತ, ಬಂಗಾರಪೇಟೆ ವೃತ್ತ, ಕ್ಲಾಕ್‌ ಟವರ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಕಾಳಮ್ಮ ಗುಡಿ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಸಾರ್ವಜನಿಕರಿಗೆ ಸಿರಿಧಾನ್ಯಗಳ ಮಹತ್ವ ತಿಳಿಸಿಕೊಟ್ಟಿತು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್, ಕೃಷಿ ಇಲಾಖೆ ಉಪನಿರ್ದೇಶಕರಾದ ನಯೀದ್ ಪಾಷಾ, ಅನುರೂಪಾ, ಸಹಾಯಕ ನಿರ್ದೇಶಕರಾದ ಎಸ್.ರಂಗಸ್ವಾಮಿ, ಎಸ್.ನಾಗರಾಜ್‌, ಪುಷ್ಪವಲ್ಲಿ, ಅಮರ ನಾರಾಯಣರೆಡ್ಡಿ, ಗುರು ಬಸವರಾಜ್ ಪಾಲ್ಗೊಂಡಿದ್ದರು.

*

ಸಿರಿಧಾನ್ಯಗಗಳು ಪೌಷ್ಟಿಕಾಂಶಭರಿತ ಆರೋಗ್ಯಕರ ಆಹಾರ ಎಂಬುದನ್ನು ವೈದ್ಯ ಪದ್ಧತಿಗಳು ದೃಢಪಡಿಸಿವೆ.

-ಮಲ್ಲಿಕಾರ್ಜುನ್, ಕೃಷಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT