ಗುರುವಾರ , ಜೂಲೈ 9, 2020
24 °C
ಮುಖ್ಯಶಿಕ್ಷಕ ಮತ್ತು ಸಹಶಿಕ್ಷಕರ ನಡುವೆ ವೈಮನಸ್ಯ– ಪೋಷಕರು ಮತ್ತು ವಿದ್ಯಾರ್ಥಿಗಳ ಆಕ್ರೋಶ

ಶೈಕ್ಷಣಿಕ ಪ್ರವಾಸ ರದ್ದು: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಕಲ್: ಸಮೀಪದ ಮರಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಪ್ರವಾಸ ಶಿಕ್ಷಕರ ನಡುವಿನ ಸಮನ್ವಯದ ಕೊರತೆಯಿಂದ ಕೊನೆಗಳಿಗೆಯಲ್ಲಿ ರದ್ದುಗೊಂಡಿದ್ದು, ನಿರಾಸೆಗೊಂಡ ವಿದ್ಯಾರ್ಥಿಗಳು ಹಾಗೂ ಆಕ್ರೋಶಗೊಂಡ ಪಾಲಕರು ಮಂಗಳವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾಸ ರದ್ದುಗೊಂಡಿದ್ದು ಸೇರಿ ಇತರ ದೂರುಗಳ ಹಿನ್ನೆಲೆಯಲ್ಲಿ ಈ ಶಾಲೆಯ ಮುಖ್ಯ ಶಿಕ್ಷಕ ಎಚ್‌.ಡಿ. ಗೋಡಿ ಹಾಗೂ ಇಬ್ಬರು ಶಿಕ್ಷಕರನ್ನು ಬಿಇಓ ಅವರು ಬೇರೆ ಶಾಲೆಗೆ ನಿಯೋಜಿಸಿದ್ದಾರೆ.

35 ವಿದ್ಯಾರ್ಥಿಗಳು 2 ದಿನಗಳ ಪ್ರವಾಸಕ್ಕೆ ತಲಾ 1,300 ರೂಪಾಯಿ ಕೊಟ್ಟು, ಬಟ್ಟೆ, ಉಂಡಿ, ಚಕ್ಕಲಿಯೊಂದಿಗೆ ಬ್ಯಾಗ್ ಸಿದ್ಧಪಡಿಸಿಕೊಂಡು ಹುರುಪಿನಿಂದ ಶಾಲೆಯ ಆವರಣದಲ್ಲಿ ಸೇರಿದ್ದರು. ಕರೆದೊಯ್ಯಲು ವಾಹನವೂ ಬಂದಿತ್ತು. ಆದರೆ ಮುಖ್ಯ ಶಿಕ್ಷಕ ಹಾಗೂ ಸಹಶಿಕ್ಷಕರ ನಡುವೆ ವೈಮನಸ್ಸಿನಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದಾಗಿತು.

ಪರಿಣಾಮವಾಗಿ ವಿದ್ಯಾರ್ಥಿಗಳು ತೀವ್ರ ನಿರಾಸೆಗೊಂಡರು. ವಿಷಯ ತಿಳಿದು ಪಾಲಕರು ಶಾಲೆಗೆ ಬಂದರು. ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲದ್ದಕ್ಕೆ ಪ್ರವಾಸ ರದ್ದಾಗಿರುವುದು ತಿಳಿದು ತೀವ್ರ ಆಕ್ರೋಶಗೊಂಡರು. ಜತೆಗೆ ಮುಖ್ಯ ಶಿಕ್ಷಕರು, ಶಿಕ್ಷಕರು ಸಮಯಕ್ಕೆ ಸರಿಯಾಗಿ ಹಾಗೂ ನಿಯಮಿತವಾಗಿ ಶಾಲೆಗೆ ಬರುವುದಿಲ್ಲ. ಸರಿಯಾಗಿ ಕಲಿಸುವುದಿಲ್ಲ, ಮಕ್ಕಳಿಗೆ ಓದಲು, ಬರೆಯಲು ಮತ್ತು ಲೆಕ್ಕ ಮಾಡಲು ಬರುವುದಿಲ್ಲ ಪಾಲಕರೊಂದಿಗೆ ಸೌಜನ್ಯದಿಂದ ವರ್ತಿಸುವುದಿಲ್ಲ, ಕೆಲವು ಶಿಕ್ಷಕರು ರಾಜಕೀಯ ವ್ಯಕ್ತಿಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಮೊದಲೇ ಅಸಮಧಾನ ಹೊಂದಿದ್ದ ಗ್ರಾಮಸ್ಥರು, ಈ ಸಂದರ್ಭವನ್ನು ಬಳಸಿಕೊಂಡು ಶಾಲಾ ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ. ಜೀರಗಿ ಹಾಗೂ ಸಿಆರ್ಪಿ ಸಂಗಣ್ಣ ಹುಂಡೇಕಾರ ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಹಾಗೂ ಪಾಲಕರು ಮುಖ್ಯ ಶಿಕ್ಷಕ ಎಚ್.ಡಿ. ಗೋಡಿ ಹಾಗೂ ಇತರ ಶಿಕ್ಷಕರ ವಿರುದ್ಧ ದೂರುಗಳ ಸುರಿಮಳೆಗೈದರು. ವಿಚಾರಣೆ ನಡೆಸಿ, ಬಿಇಓ ಅವರಿಗೆ ವರದಿ ನೀಡಿ, ತಪ್ಪಿತಸ್ತರ ವಿರುದ್ಧ ಬುಧವಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

ಬುಧವಾರ ಗ್ರಾಮದ ಪ್ರಮುಖರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗುರುರಾಜ ಹೂಗಾರ ಹಾಗೂ ವಿ.ಬಿ. ಜೀರಗಿ ಅವರು ಸಭೆ ನಡೆಸಿ, ಮುಖ್ಯಶಿಕ್ಷಕ ಎಚ್.ಡಿ. ಗೋಡಿ, ಟಿಜಿಟಿ ಶಿಕ್ಷಕ ಅಮರಪ್ಪ ಜಕ್ಕಲಿ, ಸಹ ಶಿಕ್ಷಕ ಪ್ರಭು ಹಿರೇಮಠ ಅವರನ್ನು ತಾತ್ಕಾಲಿಕವಾಗಿ ಬೇರೆಡೆಗೆ ನಿಯೋಜಿಸಿ, ನಂತರ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಮಹಾಂತೇಶ ಕಡಿವಾಲ, ಗ್ರಾಮ ಪಂಚಾಯ್ತಿ ಸದಸ್ಯರಾದ ಸಂಗನಗೌಡ ಗೌಡರ, ಮುತ್ತಣ್ಣ ಹುತಗಣ್ಣವರ, ಶಿವಪ್ಪ ಚಲವಾದಿ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.