ಬುಧವಾರ, ಆಗಸ್ಟ್ 5, 2020
20 °C
ಅಧಿಕಾರಿಗಳಿಗೆ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ.ಚಂದ್ರೇಗೌಡ ಎಚ್ಚರಿಕೆ

ಆರ್‌ಟಿಐ ಮಾಹಿತಿ ಸಕಾಲದಲ್ಲಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ನಿರ್ದಿಷ್ಟ ಮಾಹಿತಿ ಕೋರಿ ಯಾವ ವ್ಯಕ್ತಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿರುವವರಿಗೆ ಸಕಾಲದಲ್ಲಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳಿಗೆ ದಂಡ ವಿಧಿಸುವುದರೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಕೆ.ಎಂ.ಚಂದ್ರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ ನಿಗ್ರಹಿಸಿ ಉತ್ತಮ ಆಡಳಿತ ನೀಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಭಾವಶಾಲಿ. ಅಧಿಕಾರಿಗಳು ಈ ಕಾಯ್ದೆಯ ಸ್ವರೂಪದ ಬಗ್ಗೆ ಮಾಹಿತಿ ಅರಿತುಕೊಂಡು ಅರ್ಜಿದಾರರು ಕೋರಿರುವ ಮಾಹಿತಿ ಸಕಾಲದಲ್ಲಿ ನೀಡಬೇಕು. ಅಧಿಕಾರಿಗಳು ಅರ್ಜಿಗಳನ್ನು ಮೊದಲು ಸರಿಯಾಗಿ ಓದಿ, ಮಾಹಿತಿ ಯಾವುದನ್ನು ನೀಡಬೇಕು ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು. ಅರ್ಜಿದಾರರು ತುಂಬಾ ವಿಸ್ತಾರ ವಾದ ವಿವರ ಕೇಳುವಂತಿಲ್ಲ ಎಂದರು.

ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿರಬೇಕು. ವೈಯಕ್ತಿಕ ಅಥವಾ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವಿಚಾರಗಳನ್ನು ಕೇಳುವಂತಿಲ್ಲ ಎಂದು ತಿಳಿಸಿದರು.

ನಗರಸಭೆಯಲ್ಲಿ ಮಾಹಿತಿ ನೀಡದೇ ಬಾಕಿ ಇದ್ದ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು. ಅವಧಿ ಮೀರಿರುವ ಅರ್ಜಿಗಳ ಮಾಹಿತಿಯನ್ನು ಅರ್ಜಿದಾರರಿಗೆ ಉಚಿತವಾಗಿ ನೀಡುವಂತೆ ಕಡತದ ಮೇಲೆ ಷರಾ ಬರೆದರು. ಯಾವುದೇ ಕಾರಣಕ್ಕೂ ಮಾಹಿತಿ ನೀಡುವುದು ವಿಳಂಬವಾಗದಂತೆ ಸೂಚಿಸಿದರು.

ಸರ್ಕಾರದ ಕೆಲಸಗಳಲ್ಲಿ ಪಾರದರ್ಶಕತೆ ಇರಬೇಕು ನಿಜ. ಆದರೆ ಅನವಶ್ಯಕವಾಗಿ ಮಾಹಿತಿ ಕೇಳಿ, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ತೊಂದರೆ ಮಾಡುವುದು ಸರಿಯಲ್ಲ ಎಂದರು.

ಈ ದಿಸೆಯಲ್ಲಿ ಮಾಹಿತಿ ಕೇಳುವವರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮಾಹಿತಿ ಹಕ್ಕಿನಡಿ ಹೆಚ್ಚು ಅರ್ಜಿ ಸಲ್ಲಿಸಿದ್ದವರಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್, ಉಪವಿಭಾಗಾಧಿಕಾರಿ ಎನ್.ಮಹೇಶ್ ಬಾಬು, ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಶೇಖ್ ಫಿರೋಜ್ಹೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.