ಶನಿವಾರ, ಜೂಲೈ 4, 2020
21 °C
ಬಸವಕಲ್ಯಾಣ: ಜಿಲ್ಲೆಯ ವಿವಿಢೆಯಿಂದ ಸಹ್ರಸಾರು ಭಕ್ತರು ಭಾಗಿ

ಸಂಭ್ರಮದ ಬನಶಂಕರಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಭ್ರಮದ ಬನಶಂಕರಿ ರಥೋತ್ಸವ

ಬಸವಕಲ್ಯಾಣ: ಇಲ್ಲಿನ ಪ್ರಸಿದ್ಧವಾದ ಬನಶಂಕರಿ ದೇವಿ ದೇವಸ್ಥಾನದ ಜಾತ್ರೆ ಅಂಗವಾಗಿ ಮಂಗಳವಾರ ರಾತ್ರಿ ರಥೋತ್ಸವ ಸಂಭ್ರಮದಿಂದ ನೆರವೇರಿತು.

ದೇವಸ್ಥಾನದಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನೆರವೆರಿಸಲಾಯಿತು. ಇಡೀ ದಿನ ಭಕ್ತರು ತೆಂಗಿನ ಕಾಯಿ, ಕರ್ಪೂರ ಮತ್ತು ನೈವೇದ್ಯ ಅರ್ಪಿಸಿದರು. ದೇವಸ್ಥಾನದಿಂದ ಕೋಟೆಯವರೆಗೆ ಅಲ್ಲಿಂದ ಮಹಾತ್ಮಗಾಂಧಿ ವೃತ್ತದವರೆಗೆ ಪಲ್ಲಕ್ಕಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ಬ್ಯಾಂಡ್ ಬಾಜಾದವರು ಪಾಲ್ಗೊಂಡಿದ್ದರು.

ದೇವಿಯ ಮೂರ್ತಿ ಮತ್ತು ಭಾವಚಿತ್ರಗಳನ್ನು ಪುಷ್ಪ ಅಲಂಕೃತ ವಾಹನದಲ್ಲಿ ಇಡಲಾಗಿತ್ತು. ಶಿವಪಾದ ಧನ್ನೂರೆ ಮತ್ತಿತರೆ ಪುರವಂತರು ಪಾಲ್ಗೊಂಡು ಮೆರವಣಿಗೆಯದ್ದಕ್ಕೂ ಕಲೆ ಪ್ರದರ್ಶಿಸಿದರು.

ಮೆರವಣಿಗೆ ಮನೆಗಳ ಎದುರು ಬಂದಾಗ ಕುಟುಂಬ ಸಮೇತರಾಗಿ ಹರ್ಷದಿಂದ ಸ್ವಾಗತಿಸಿ ಅದಕ್ಕೆ ನೀರೇರೆದು ತೆಂಗಿನ ಕಾಯಿ ಅರ್ಪಿಸಿ, ಆರತಿ ಬೆಳಗಿ ದರ್ಶನ ಪಡೆಯಲಾಯಿತು. ಮೆರವಣಿಗೆ ದೇವಸ್ಥಾನಕ್ಕೆ ಹಿಂದಿರುಗಿದಾಗ ಧರ್ಮ ಸಭೆ ಆಯೋಜಿಸಲಾಯಿತು.

ಮಾಜಿ ಶಾಸಕ ಎಂ.ಜಿ.ಮುಳೆ ಮಾತನಾಡಿ, ‘ಜಾತ್ರೆಗಳು ಭಾವೈಕ್ಯತೆಯನ್ನು ಮೂಡಿಸುತ್ತವೆ. ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಬನಶಂಕರಿ ದೇವಸ್ಥಾನ ಸಮಿತಿಯವರು ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಪಟ್ಟಣ ಠಾಣೆ ಸಿಪಿಐ ಅಲಿಸಾಬ್ ಮಾತನಾಡಿ, ‘ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ದೊರಕುತ್ತದೆ. ಸಮಾಜದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು’ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಭುರಳೆ ಮಾತನಾಡಿದರು. ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಗುರು ಪಾಟೀಲ, ನೀಲಕಂಠಪ್ಪ ಮುನ್ನೋಳಿ, ಮಹೇಶ ಸುಂಟನೂರೆ, ಸುರೇಶ ಅಡಕೆ, ಬಾಬು ಹೆಗ್ಗೆ, ಬಂಡೆಪ್ಪ ಹಾವಗುಂಡೆ, ಬಾಳಪ್ಪ, ಬಸವಣ್ಣಪ್ಪ ಕನಕ, ರಾಮಚಂದ್ರ ಹುಡಗೆ, ಅಶೋಕ ಹಿಪ್ಪರ್ಗೆ ಪಾಲ್ಗೊಂಡಿದ್ದರು. ನಂತರ ರಥೋತ್ಸವ ನಡೆಯಿತು.

ಪುಷ್ಪಗಳಿಂದ ಮತ್ತು ತಳೀರು ತೋರಣ ಕಟ್ಟಿ ಅಲಂಕರಿಸಿದ ರಥವನ್ನು ಎಳೆದಾಗ ಎಲ್ಲರೂ ಹರ್ಷದಿಂದ ಜಯಘೋಷ ಮಾಡಿದರು. ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.