ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಪ್ಪಾಜಿಯ ನೆಲದಲ್ಲಿ ಭಕ್ತಿಯ ಝೇಂಕಾರ

ಚಿಕ್ಕಲ್ಲೂರು ಚಂದ್ರಮಂಡಲ ಉತ್ಸವಕ್ಕೆ ಹರಿದುಬಂದ ಭಕ್ತ ಸಾಗರ
Last Updated 4 ಜನವರಿ 2018, 12:42 IST
ಅಕ್ಷರ ಗಾತ್ರ

ಚಾಮರಾಜನಗರ: ‘ಧರೆಗೆ ದೊಡ್ಡವರಾದ ಮಂಟೇಸ್ವಾಮಿ, ರಾಚಪ್ಪಾಜಿ ಪಾದಗಳಿಗೆ ಉಘೇ, ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳಗಿದ ಸಿದ್ದಪ್ಪಾಜಿ ಅವರ ಪಾದಕ್ಕೆ ಉಘೇ’ ಎಂಬ ಉದ್ಘೋಷ ಮುಗಿಲುಮುಟ್ಟಿತ್ತು.

ಅದೇ ಗಳಿಗೆಗಾಗಿ ಗಂಟೆಗಟ್ಟಲೆ ಕಾದಿದ್ದ ಭಕ್ತಸಮೂಹದಲ್ಲಿ ಧನ್ಯತಾ ಭಾವ. ಆಗಸಮುಖಿಯಾಗಿ ಉರಿಯುತ್ತಿದ್ದ ಚಂದ್ರಮಂಡಲ ಯಾವ ದಿಕ್ಕಿನೆಡೆಗೆ ತನ್ನ ಹಾರೈಕೆ ಸಲ್ಲಿಸುವುದೋ ಎಂಬ ಕಾತರ. ಚಂದ್ರಮಂಡಲದ ಹೊಂಬಾಳೆ, ಹೂವುಗಳು ‘ಕಪ್ಪುದೂಳ್ತ’ವಾಗಿ ಭೂಸ್ಪರ್ಶ ಮಾಡುವುದನ್ನೇ ಕಾಯುತ್ತಿದ್ದ ಜನರು, ಅದನ್ನು ಆಯ್ದುಕೊಳ್ಳಲು ಮುಗಿಬಿದ್ದರು.

ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಐದು ದಿನಗಳ ಕಾಲ ನಡೆಯುವ ಸಿದ್ದಪ್ಪಾಜಿ ಜಾತ್ರೆಗೆ ಚಾಲನೆ ನೀಡುವ ಚಂದ್ರಮಂಡಲ ಉತ್ಸವಕ್ಕೆ ಮಂಗಳವಾರ ರಾತ್ರಿ ನಿರೀಕ್ಷೆಗೂ ಮೀರಿದ ಜನಸಾಗರ ಹರಿದುಬಂದಿತು.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬೊಪ್ಪೆಗೌಡನಪುರದ ಧರೆಗೆ ದೊಡ್ಡವರು ಸಂಸ್ಥಾನ ಮಠದ ಸ್ವಾಮೀಜಿ ಜ್ಞಾನಾನಂದ ಚನ್ನರಾಜೇ ಅರಸ್ ಅವರು ಮಠದ ಬಸವನನ್ನು ಮುಂದೆ ಬಿಟ್ಟುಕೊಂಡು ಸತ್ತಿಗೆ ಸೂರಿಪಾನಿ, ಕೊಂಬುಕಹಳೆ, ಜಾಗಟೆ, ಬೆತ್ತ ಧರಿಸಿದ ನೀಲಗಾರರ ಉರಿಕಂಡಾಯದ ದಂಡಿನ ಜತೆ ಆಗಮಿಸಿದರು. ರಾತ್ರಿ 11 ಗಂಟೆ ವೇಳೆಗೆ ಹಳೆ ಮಠದ ಘನನೀಲಿ ಸಿದ್ದಪ್ಪಾಜಿಯ ಐಕ್ಯಗದ್ದಿಗೆಗೆ ಪೂಜೆ ಸಲ್ಲಿಸಿದರು.

11.30ರ ಸುಮಾರಿಗೆ ಚಂದ್ರಮಂಡಲಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಅದರ ಬೆನ್ನಲ್ಲೇ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಹುಣ್ಣಿಮೆ ಬೆಳಕನಡಿ ಬಾಣಬಿರುಸುಗಳ ಸದ್ದು ಮತ್ತು ಚಿತ್ತಾರ ಅರಳಿತು. ಚಂದ್ರಮಂಡಲ ಕಟ್ಟೆಯನ್ನು ವಿವಿಧ ಹೂವು, ಹೊಂಬಾಳೆ, ಬಾಳೆಕಂದುಗಳಿಂದ ಅಲಂಕರಿಸಲಾಗಿತ್ತು. ಸುತ್ತಲೂ ನೆರೆದಿದ್ದ ಭಕ್ತರು ತಾವು ತಂದಿದ್ದ ತುಪ್ಪ ಎಣ್ಣೆಯನ್ನು ಚಂದ್ರಮಂಡಲಕ್ಕೆ ಅರ್ಪಿಸಿ ಹರಕೆ ಸಲ್ಲಿಸಿದರು.

ಮಠದ ಮನೆಯಿಂದ ತಮಟೆ ವಾದ್ಯಮೇಳಗಳೊಂದಿಗೆ ಮೆರವಣಿಗೆಯಲ್ಲಿ ಬಂದ ಕಂಡಾಯಗಳು ಗದ್ದಿಗೆ ಸುತ್ತಲೂ ಪ್ರದಕ್ಷಿಣಿ ಹಾಕಿದವು. ಚಂದ್ರಮಂಡಲ ಕಟ್ಟೆ ಏರಿದ ಸ್ವಾಮೀಜಿ ಮೇಲೆ ಅಲಂಕರಿಸಿ ಇಟ್ಟಿದ್ದ ಚಂದ್ರಮಂಡಲಕ್ಕೆ ನೀಲಗಾರ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಮಂಗಳಾರತಿ ಬೆಳಗಿ, ಚಂದ್ರಮಂಡಲಕ್ಕೆ ಕರ್ಪೂರದ ಮೂಲಕ ಅಗ್ನಿಸ್ಪರ್ಶ ಮಾಡಿ ಉತ್ಸವ ನೆರವೇರಿಸಿದರು. ಕಟ್ಟೆಯ ಸುತ್ತಲೂ ನೆರೆದಿದ್ದ ಭಕ್ತರು ದವಸಧಾನ್ಯಗಳು, ನಗನಾಣ್ಯಗಳನ್ನು ಉರಿಯುತ್ತಿದ್ದ ಚಂದ್ರಮಂಡಲಕ್ಕೆ ಎಸೆದು ಹರಕೆ ಕಾಣಿಕೆ ಸಮರ್ಪಿಸಿದರು.

ಎಲ್ಲೆಲ್ಲೂ ಜನಸಾಗರ: ಸುತ್ತಮುತ್ತಲಿನ ಗ್ರಾಮಗಳು ಮತ್ತು ನೆರೆಯ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಬಂದ ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು. ಆಧುನಿಕತೆ ಮತ್ತು ಬದಲಾಗುತ್ತಿರುವ ಜೀವನಶೈಲಿಯ ಪ್ರಭಾವ ಜನರನ್ನು ಸಂಪ್ರದಾಯ, ಆಚರಣೆಗಳಿಂದ ದೂರಮಾಡುತ್ತಿವೆ ಎಂಬ ವಾದವನ್ನು ಹುಸಿಮಾಡುವಂತೆ ಸಿದ್ದಪ್ಪಾಜಿಯ ಜಾತ್ರಾ ವೈಭವಕ್ಕೆ ಭಕ್ತರು ಸಾಕ್ಷಿಯಾದರು.

ಎಲ್ಲ ವಯೋಮಾನದ ಜನರು ಜಾತಿಭೇದವಿಲ್ಲದೆ, ಕೊರೆವ ಚಳಿಯನ್ನೂ ಲೆಕ್ಕಿಸದೆ ಉತ್ಸಾಹದಿಂದ ಪಾಲ್ಗೊಂಡರು. ಗದ್ದಿಗೆಯ ಆವರಣದ ಸುತ್ತಲೂ ಭಕ್ತರು ಕಿಕ್ಕಿರಿದು ತುಂಬಿದ್ದರು. ನೂಕುನುಗ್ಗಲಿನ ನಡುವೆ ಚಂದ್ರಮಂಡಲವನ್ನು ವೀಕ್ಷಿಸಲು ಹರಸಾಹಸಪಟ್ಟರು. ಚಂದ್ರಮಂಡಲಕ್ಕೆ ಭಕ್ತಿಯಿಂದ ನಮಿಸಿದರೆ, ಅನೇಕರು ಅದರ ವಿಡಿಯೊ, ಫೋಟೊಗಳನ್ನು ಸೆರೆಹಿಡಿಯುವುದರಲ್ಲಿ ಮಗ್ನರಾಗಿದ್ದರು.

ಕೆಲವರು ಸಮೀಪದ ಮರಗಳು, ಕಟ್ಟಡಗಳ ಮೇಲೇರಿದರು. ಅವರನ್ನು ಕೆಳಕ್ಕಿಳಿಸಲು ಪೊಲೀಸರು ಹೆಣಗಾಡಬೇಕಾಯಿತು. ವಾಹನಗಳ ಸಂಖ್ಯೆ ಹೆಚ್ಚಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಕಿ.ಮೀ.ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು.

ಚಿಕ್ಕಲ್ಲೂರು ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಲಾಗಿದೆ ಎಂಬ ವ್ಯಾಪಕ ಪ್ರಚಾರದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕ್ಷೀಣಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ ದಿನ ಜರುಗಿದ ಉತ್ಸವದಲ್ಲಿ ಅದು ಹುಸಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT