ತರೀಕೆರೆ: ಕುಡಿಯುವ ನೀರಿಗೆ ತತ್ವಾರ

7
ಮಾನಸಿಕೆರೆ ಖಾಲಿ: ಜನ ಜಾನುವಾರಿಗೂ ನೀರಿಲ್ಲ

ತರೀಕೆರೆ: ಕುಡಿಯುವ ನೀರಿಗೆ ತತ್ವಾರ

Published:
Updated:
ತರೀಕೆರೆ: ಕುಡಿಯುವ ನೀರಿಗೆ ತತ್ವಾರ

ತರೀಕೆರೆ: ಪುರಸಭೆಯಿಂದ ಕುಡಿಯುವ ನೀರು ಪೂರೈಕೆಯಲ್ಲಿ ಆಗುತ್ತಿರುವ ಲೋಪದಿಂದಾಗಿ ಪಟ್ಟಣದ ನಾಗರಿಕರು ಪರದಾಡುವಂತಾಗಿದ್ದು, ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಭದ್ರಾ ನದಿಯಿಂದ ಪಟ್ಟಣಕ್ಕೆ ನೀರು ಸಂಗ್ರಹಿಸುವ ಮಾನಸಿಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿ ತಳಕಂಡಿದ್ದು, ಮಳೆಗಾಲದಲ್ಲಿ ಭದ್ರಾ ನದಿಯಿಂದ ನೀರು ಹರಿಸುವ ಬದಲು ಬೇಸಿಗೆಯಲ್ಲಿ ನೀರು ನೀಡಿದರೆ ಕುಡಿಯಲು ಯೋಗ್ಯವಾಗುತ್ತದೆ ಎಂದು ದಾವಣಗೆರೆ ಜಿಲ್ಲೆಯ ಜನರು ಭದ್ರಾನದಿ ಅಚ್ಚುಕಟ್ಟು ಪ್ರಾಧಿಕಾರಕ್ಕೆ ಒತ್ತಡ ಹೇರಿದ್ದರಿಂದ ನದಿಯಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದನ್ನು ಕಾಡಾದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭದ್ರಾ ನದಿಯಿಂದ ನೀರು ಹರಿಸಿದರೆ ಮಾತ್ರ ಪಟ್ಟಣದ ಜನತೆಗೆ ನೀರು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು,  ಈ ಹಿಂದೆ ಹರಿಸಿದ್ದ ನೀರನ್ನು ಪುರಸಭೆ ಆಡಳಿತ ಮಾನಸಿ ಕೆರೆಯಲ್ಲಿ ಸಂಗ್ರಹಿಸಿ ಇಲ್ಲಿಯವರೆಗೆ ಜನತೆಗೆ ಕುಡಿಯಲು ಪೂರೈಸುತ್ತಾ ಬಂದಿತ್ತು. ಆದರೆ ಈಗ ನೀರು ಖಾಲಿಯಾಗಿರು ವುದರಿಂದ ಪಟ್ಟಣದ ಕೆಲವು ವಾರ್ಡ್‍ಗಳಲ್ಲಿ ನೀರು ಬಾರದೆ ಆರೇಳು ದಿನಗಳು ಕಳೆದಿವೆ.

ಹಿಂದಿನ ದಿನಗಳಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಬಿಟ್ಟರೂ ಕೇವಲ 20 ನಿಮಿಷ ಮಾತ್ರ ಸಿಗುತ್ತದೆ. ಈ ಮಧ್ಯೆ ವಿದ್ಯುತ್ ಸಮಸ್ಯೆ, ಮೋಟಾರ್ ಸಮಸ್ಯೆ, ಪೈಪ್ ಹೊಡೆದು ಹೋಗಿವೆ ಎಂಬ ಸಬೂಬುಗಳ ನಡುವೆ ಜನರು ಮಾತ್ರ ಶುದ್ಧ ಕುಡಿಯುವ ನೀರು ಸಿಗದೇ ಹೈರಾಣಾಗಿದ್ದಾರೆ.

ಪಟ್ಟಣದಲ್ಲಿ  111 ಕೈಪಂಪ್ ಹಾಗೂ ಕಿರು ನೀರು ಸರಬರಾಜು ಘಟಕಗಳಿವೆ. ಇಷ್ಟಾಗಿಯೂ ಸರಿಯಾಗಿ ನಿರ್ವಹಣೆಯಿಲ್ಲದೇ ಸ್ಟಾರ್ಟ್‍ರ್ ಸಮಸ್ಯೆ, ನಲ್ಲಿಗಳ ಸಮಸ್ಯೆ, ಮೋಟರ್‍ಗಳು ಕೆಟ್ಟಿ ನಿಲ್ಲುವುದು ಪದೇ ಪದೇ ನಡೆಯುವುದರಿಂದ ಕೊಳವೆ ಬಾವಿಯ ನೀರಿಗೂ ಸಹ ಹಾಹಾಕಾರ ಉಂಟಾಗಿರುವುದಕ್ಕೆ ನಾಗರೀಕರು ಬೇಸರ ವ್ಯಕ್ತಪಡಿಸಿದ್ದಾರೆ.

ಭದ್ರಾ ನದಿಯ ಸೆರಗಿನ ಅಂಚಿನಲ್ಲಿರುವ ಪಟ್ಟಣದಲ್ಲಿ ಪ್ರತಿವರ್ಷ ಕುಡಿಯುವ ನೀರಿಗಾಗಿ ಎದುರಾಗುತ್ತಿರುವ ಸಮಸ್ಯೆಯನ್ನು ಮನಗಂಡು ಜಿಲ್ಲಾಡಳಿತ ಶಾಶ್ವತವಾದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪಟ್ಟಣಕ್ಕೆ ನೀಡಲಿ ಎಂಬುದು ನಾಗರಿಕರ ಒತ್ತಾಯವಾಗಿದೆ.

‘ಇದೇ 5ರಿಂದ 105 ದಿನಗಳವೆರೆಗೆ ಭದ್ರಾ ನದಿಯಿಂದ ನೀರು ಪುರೈಸಲಾಗುತ್ತದೆ ಎಂದು ಕಾಡಾದ ಅಧಿಕಾರಿಗಳು ತಿಳಿಸಿದ್ದಾರೆ. ಎರಡು ದಿನಕ್ಕೊಮ್ಮೆ ಪಟ್ಟಣದ ಜನತೆಗೆ ನೀರು ಪೂರೈಸಲಾಗುತ್ತದೆ’ ಎನ್ನುತ್ತಾರೆ ಪುರಸಭೆ ಪ್ರಭಾರ ಅಧ್ಯಕ್ಷ ಟಿ.ಜಿ.ಅಶೋಕ್‍ಕುಮಾರ್.

–ದಾದಾಪೀರ್,ತರೀಕೆರೆ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry