ಬುಧವಾರ, ಜೂಲೈ 8, 2020
29 °C
ಕಾಡಾನೆ ದಾಳಿ: ಮುಖ್ಯ ಅರಣ್ಯ ಸಂರಕ್ಷಕರೊಂದಿಗೆ ಸಭೆ

ರೈಲ್ವೆ ಹಳಿ ತಡೆಗೋಡೆ ನಿರ್ಮಾಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ತಾಲ್ಲೂಕಿನಲ್ಲಿ ಉದ್ಬವಿ ಸಿರುವ ಕಾಡಾನೆ ದಾಳಿಯನ್ನು ತಡೆಯಲು ರೈಲ್ವೆ ಹಳಿಯ ತಡೆಗೋಡೆ ನಿರ್ಮಿಸಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಕಾಡಾನೆ ಹಾವಳಿ ತಡೆಯುವ ಸಲುವಾಗಿ ಮುಖ್ಯ ಅರಣ್ಯ ಸಂರಕ್ಷಕರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಯಲು ರೈಲ್ವೆ ಹಳಿ ತಡೆಗೋಡೆಯನ್ನು ನಿರ್ಮಿಸಿರುವಂತೆ, ತಾಲ್ಲೂಕಿನಲ್ಲೂ ಕಾಡಾನೆ ಹಾವಳಿ ಪ್ರದೇಶದಲ್ಲಿ ರೈಲ್ವೆ ಹಳಿಗಳ ತಡೆಗೋಡೆಯನ್ನು ನಿರ್ಮಿಸಬೇಕು. ಕಾಡಾನೆ ದಾಳಿಯಿಂದ ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದು, ಇಲಾಖೆಯು ಮಾನವೀಯ ದೃಷ್ಟಿಯಲ್ಲಿ ಶೀಘ್ರವಾಗಿ ಯೋಜನೆ ರೂಪಿಸಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಮಾತನಾಡಿ,‘ಕಳೆದ ವಾರ ದಾಳಿ ನಡೆಸಿರುವ ಹುಲಿಯನ್ನು ಶೀಘ್ರವಾಗಿ ಹಿಡಿಯಬೇಕು. ತಾಲ್ಲೂ ಕಿನಲ್ಲಿ ಕಾಡು ಪ್ರಾಣಿ ಹಾವಳಿ ನಿಯಂತ್ರಿಸಲು ಇಲಾಖೆಯಲ್ಲಿ ಪೂರಕವಾದ ಪರಿಕರಗಳಿಲ್ಲ. ಇದಕ್ಕಾಗಿ ಪ್ರತ್ಯೇಕ ವೈದ್ಯರನ್ನು ನಿಯೋಜಿಸಿಟ್ಟು ಕೊಂಡಿರಬೇಕು. ದಾಳಿ ಪೀಡಿತ ಪ್ರದೇಶಗಳಿಗೆ ತೆರಳಲು ಸುಸಜ್ಜಿತ ವಾಹಗಳನ್ನು ನೀಡಬೇಕು’ ಎಂದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್‌. ಜಯರಾಮ್‌ಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಡು ಪ್ರಾಣಿ ಹಾವಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ನೀಡುವ ಪರಿಹಾರದ ಮೊತ್ತವು ಅತ್ಯಲ್ಪವಾಗಿದ್ದು, ಈ ಮೊತ್ತವನ್ನು ವೈಜ್ಞಾನಿಕ ಮಾದರಿಯಲ್ಲಿ ಹೆಚ್ಚಿಸಬೇಕು. ಕಾಡಾನೆ ಹಾಗೂ ಹುಲಿ ದಾಳಿಯಿಂದ ಗಾಯಗೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಅರಣ್ಯ ಇಲಾಖೆಯಲ್ಲಿ ಪರಿಹಾರವನ್ನು ಪಡೆಯಲು, ಕಚೇರಿಗೆ ಅಲೆದಾಡಬೇಕಾದ ಪರಿಸ್ಥಿತಿಯಿದೆ ಎಂದರು.

ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಅರಣ್ಯ ಇಲಾಖೆಯು ಗುತ್ತಿಗೆ ಆಧಾರದಲ್ಲಿ ಕಾಫಿ ಬೆಳೆಗಾರರಿಗೆ ಬಿಟ್ಟುಕೊಟ್ಟು, ತೆರಿಗೆಯನ್ನು ವಸೂಲಿ ಮಾಡಬೇಕು, ಇದರಿಂದ ಇಲಾಖೆಗೆ ವರಮಾನ ಬರುವುದರ ಜತೆಗೆ, ರೈತರು ಬೆಳೆದಿರುವ ಬೆಳೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು.

ಮುಖ್ಯ ಅರಣ್ಯ ಸಂರಕ್ಷ ಮನೋಜ್‌ ಕುಮಾರ್‌ ಮಾತನಾಡಿ, ರೈಲ್ವೆ ಹಳಿ ತಡೆಗೋಡೆ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ವೈಜ್ಞಾನಿಕ ಪರಿಹಾರದ ವಿಚಾರವನ್ನು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಮಂಜೂರಾತಿ ದೊರೆತ ಬಳಿಕ ಜಾರಿಗೆ ಬರುತ್ತದೆ. ಹುಲಿಯಿಡಿಯಲು ಅಗತ್ಯವಾದ ಸಿಬ್ಬಂದಿ ಹಾಗೂ ಪರಿಕರಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸವಿತರಮೇಶ್‌, ಕಾಫಿ ಬೆಳಗಾರರಾದ ಕೆಂಜಿಗೆ ಕೇಶವ್‌, ಚಂದ್ರೇಗೌಡ, ಭಾಗ್ಯ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಎಚ್‌.ಆರ್‌ ಕುಮಾರ್‌ ಮುಂತಾದವರಿದ್ದರು.

***

‘ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಬದಲು, ದಾಳಿ ನಿಯಂತ್ರಿಸಲು ಶಾಶ್ವತ ಪರಿಹಾರ ರೂಪಿಸಬೇಕು’

–ಬಿ.ಎಸ್‌. ಜಯರಾಮ್‌ಗೌಡ

ಅಧ್ಯಕ್ಷರು,

ಕರ್ಣಾಟಕ ಬೆಳೆಗಾರರ ಒಕ್ಕೂಟ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.