ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ: ಈ ಅಧಿವೇಶನದಲ್ಲಿ ಅನುಮಾನ

Last Updated 4 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017ಕ್ಕೆ  (ತ್ರಿವಳಿ ತಲಾಖ್‌ ನಿಷೇಧ ಮಸೂದೆ) ಸಂಬಂಧಿಸಿ ರಾಜ್ಯಸಭೆಯಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಗುರುವಾರವೂ ಪರಿಹಾರವಾಗಲಿಲ್ಲ. ಮಸೂದೆಯನ್ನು ಪರಿಷ್ಕರಿಸಲು ಪರಿಶೀಲನಾ ಸಮಿತಿಗೆ ಒಪ್ಪಿಸುವ ಪ್ರಸ್ತಾವವನ್ನು ಮತಕ್ಕೆ ಹಾಕಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ಸರ್ಕಾರ ತಿರಸ್ಕರಿಸಿತು.

ಸಂಸತ್ತಿನ ಚಳಿಗಾಲದ ಅಧಿವೇಶನದ ಕೊನೆಯ ಕಲಾಪ ಶುಕ್ರವಾರ ನಡೆಯಲಿದೆ. ಮಸೂದೆಗೆ ಅನುಮೋದನೆ ಪಡೆದುಕೊಳ್ಳಲು ಸರ್ಕಾರ ಮತ್ತೊಮ್ಮೆ ಪ್ರಯತ್ನಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸಾಮಾನ್ಯವಾಗಿ ಅಧಿವೇಶನದ ಕೊನೆಯ ದಿನ ಸದಸ್ಯರ ಖಾಸಗಿ ಮಸೂದೆಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗುತ್ತದೆ.

ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ನಿಲುವಳಿಗೆ ಆಡಳಿತ ಪಕ್ಷದ ಸಭಾನಾಯಕ ಅರುಣ್‌ ಜೇಟ್ಲಿ ಮುಂದಿಟ್ಟ ಆಕ್ಷೇಪಗಳನ್ನು ಉಪಸಭಾಪತಿ ಪಿ.ಜೆ. ಕುರಿಯನ್‌ ತಿರಸ್ಕರಿಸಿದರು. ಹಾಗಾಗಿ ಇದು ತಮಗೆ ದೊರೆತ ನೈತಿಕ ಗೆಲುವು ಎಂದು ವಿರೋಧ ಪಕ್ಷಗಳು ಹೇಳಿಕೊಂಡವು.

ಹಾಗೆಯೇ, ಆಡಳಿತ ಪಕ್ಷಕ್ಕೂ ಖುಷಿ ಕೊಡುವ ನಿರ್ಧಾರವನ್ನು ಕುರಿಯನ್‌ ಕೈಗೊಂಡರು. ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ತಿದ್ದುಪಡಿ ಮಸೂದೆಗೆ ಮೊದಲೇ ತ್ರಿವಳಿ ತಲಾಖ್‌ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸುವ ನಿಳುವಳಿಯನ್ನು ಮತಕ್ಕೆ ಹಾಕಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯಕ್ಕೂ ಕುರಿಯನ್‌ ಮಣೆ ಹಾಕಲಿಲ್ಲ. ‌

ಜಿಎಸ್‌ಟಿ ತಿದ್ದುಪಡಿ ಮಸೂದೆ ಕಲಾಪ ಕಾರ್ಯಸೂಚಿಯ ಮೊದಲ ಅಂಶವಾಗಿತ್ತು. ಈ ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಂಡಾಗ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ರಾಜ್ಯಸಭೆಯಲ್ಲಿ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ವಿರೋಧ ಪಕ್ಷಗಳ ಗದ್ದಲದಿಂದಾಗಿ ರಾಜ್ಯಸಭೆಯನ್ನು ಮುಂದೂಡಲಾಯಿತು.

ತ್ರಿವಳಿ ತಲಾಖ್‌ ಮಸೂದೆಗೆ ಸಂಬಂಧಿಸಿ ಸಹಮತ ಮೂಡಿಬರದಿದ್ದರೆ ಈ ಮಸೂದೆ ಬಜೆಟ್‌ ಅಧಿವೇಶನದ ವರೆಗೆ ಬಾಕಿ ಉಳಿಯುವುದು ಅನಿವಾರ್ಯವಾಗಲಿದೆ.

ಆರೋಪ–ಪ್ರತ್ಯಾರೋಪ

ತ್ರಿವಳಿ ತಲಾಖ್‌ ಮಸೂದೆಗೆ ಸಂಬಂಧಿಸಿ ಸದನದ ಒಳಗೆ ಮತ್ತು ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಆರೋಪ ಮತ್ತು ಪ್ರತ್ಯಾರೋಪ ಮಾಡಿಕೊಂಡಿವೆ. ಆಡಳಿತ ಪಕ್ಷದ ಬಣ್ಣ ಬಯಲಾಗಿದೆ ಎಂದು ವಿರೋಧ ‍ಪಕ್ಷಗಳು ಆರೋಪಿಸಿದರೆ, ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ದ್ವಂದ್ವ ನೀತಿ ಬಹಿರಂಗವಾಗಿದೆ ಎಂದು ಬಿಜೆಪಿ ಹೇಳಿದೆ.

ವಿರೋಧ ಪಕ್ಷಗಳು ಮಸೂದೆ ಅಂಗೀಕಾರವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಜೇಟ್ಲಿ ಸದನದಲ್ಲಿ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಒಬ್ರಯಾನ್‌, ‘ಈ ಭಾಗಕ್ಕೆ (ವಿರೋಧ ಪಕ್ಷಗಳು) ಮುಸ್ಲಿಂ ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶ ಇದೆ. ಆದರೆ ಆ ಭಾಗಕ್ಕೆ (ಬಿಜೆಪಿ) ಅದು ಬೇಕಾಗಿಲ್ಲ’ ಎಂದರು. ಇದಕ್ಕೆ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದರು. ‘ನೀವು ಹೇಳಿದ್ದು ಸಂಪೂರ್ಣ ತಪ್ಪು. ಮಹಿಳೆಯರನ್ನು ಸಶಕ್ತಗೊಳಿಸಲು ನೀವು ಬಯಸಿದ್ದರೆ ಈಗಲೇ ಚರ್ಚೆ ಆರಂಭಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT