ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಲ್ಲಿ ತ್ಯಾಜ್ಯರಸ ಸಂಸ್ಕರಣಾ ಘಟಕ ಆರಂಭ

Last Updated 4 ಜನವರಿ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ಭೂಭರ್ತಿ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯರಸವನ್ನು (ಲಿಚೆಟ್‌) ಶುದ್ಧೀಕರಿಸುವ ಉದ್ದೇಶದಿಂದ ಬಿಬಿಎಂಪಿಯು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬೆಲ್ಲಹಳ್ಳಿಯಲ್ಲಿ 1.25 ಲಕ್ಷ ಲೀಟರ್‌ ಸಾಮರ್ಥ್ಯದ ತ್ಯಾಜ್ಯರಸ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದೆ. ಇದು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಬೆಲ್ಲಹಳ್ಳಿಯಿಂದ 4 ಕಿ.ಮೀ ದೂರದಲ್ಲಿ ಈ ಘಟಕವಿದೆ. ಬಾಗಲೂರು, ಬೆಲ್ಲಹಳ್ಳಿ ಹಾಗೂ ಮಿಟ್ಟಗಾನಹಳ್ಳಿ ಕ್ವಾರಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯರಸವನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ.

ಇಲ್ಲಿ ಬಳಸುವ ತ್ಯಾಜ್ಯರಸ ಸಂಸ್ಕರಣಾ ಉಪಕರಣವನ್ನು ಡಾ. ರಾಜ ಎನ್ನುವವರು ಆವಿಷ್ಕರಿಸಿದ್ದಾರೆ. ಈ ತಂತ್ರಜ್ಞಾನಕ್ಕೆ ಅವರಿಗೆ ಹಕ್ಕುಸ್ವಾಮ್ಯ ಸಿಕ್ಕಿದೆ. ರಾಕೆಟ್‌ ರೀತಿಯ ಉಪಕರಣವಿದ್ದು, ಅದರೊಳಗೆ ತ್ಯಾಜ್ಯರಸವನ್ನು ಹಾಕಲಾಗುತ್ತದೆ. ಅದರಲ್ಲಿರುವ ಬಯೋ ಆಕ್ಸಿಜನ್‌ ಡಿಮಾಂಡ್‌ (ಬಿಒಡಿ) ಹಾಗೂ ಕೆಮಿಕಲ್‌ ಆಕ್ಸಿಜನ್‌ ಡಿಮಾಂಡ್‌ (ಸಿಒಡಿ) ಮಟ್ಟವನ್ನು ಕಡಿಮೆಗೊಳಿಸುತ್ತದೆ. ಶುದ್ಧೀಕರಣದ ಬಳಿಕ ಕುಡಿಯಲು ಯೋಗ್ಯವಾಗುವಂತಹ ನೀರು ಹೊರಬರುತ್ತದೆ.

ಬಾಗಲೂರು ಕ್ವಾರಿ ನಾಲ್ಕೂವರೆ ಎಕರೆ ವಿಸ್ತೀರ್ಣವಿದ್ದು, ಇದರಲ್ಲಿ ಎರಡೂವರೆ ಎಕರೆಯಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಕಸದಿಂದ ಹೊರಬರುವ ಲಿಚೆಟ್‌ ಸಂಗ್ರಹಕ್ಕೆಂದು ಉದ್ಯಾನದ ನಾಲ್ಕೈದು ಕಡೆಗಳಲ್ಲಿ ಸಣ್ಣ ಬಾವಿಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯರಸವನ್ನು ಟ್ಯಾಂಕರ್‌ಗಳ ಮೂಲಕ ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ ಸಾಗಿಸಿ ಸಂಸ್ಕರಿಸಲಾಗುತ್ತಿದೆ.‌ ಈಗ ಬೆಲ್ಲಹಳ್ಳಿಯ ಘಟಕಕ್ಕೆ ಇದನ್ನು ಸಾಗಿಸಲು ಉದ್ದೇಶಿಸಲಾಗಿದೆ. ಈ ನೀರನ್ನು ಉದ್ಯಾನ, ಕಾರು ತೊಳೆಯಲು ಹಾಗೂ ಶೌಚಾಲಯಕ್ಕೆ ಬಳಕೆ ಮಾಡಬಹುದು.

ಮೀಥೇನ್‌ ಅನಿಲ ಸಂಗ್ರಹ: ತ್ಯಾಜ್ಯರಸದಿಂದ ಮೀಥೇನ್‌ ಅನಿಲ ಹೊರಬರಲು ತೂತುಗಳಿರುವ ಕೊಳವೆಯನ್ನು ನೆಲದಾಳದಲ್ಲಿ ಹಾಕಲಾಗಿದೆ. ಕೊಳವೆ ಮುಖಾಂತರ ಮೀಥೇನ್‌ ಅನಿಲ ಹೊರಗೆ ಬರುತ್ತದೆ. ಇದು ವ್ಯರ್ಥವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕೊಳವೆಗೆ ಬಲೂನು ಅಳವಡಿಸಲು ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಬಲೂನಿನಲ್ಲಿ ಸಂಗ್ರಹಗೊಳ್ಳುವ ಅನಿಲವನ್ನು ಬಳಸಿ ದೀಪಗಳನ್ನು ಬೆಳಗಿಸಬಹುದು.‌

ಸ್ವಚ್ಛ ಭಾರತ್‌ ಮಿಷನ್‌ ಅಧಿಕಾರಿಗಳ ಮೆಚ್ಚುಗೆ: ‘ತ್ಯಾಜ್ಯರಸ ಅಂತರ್ಜಲ ಸೇರಬಾರದು ಎಂಬ ಉದ್ದೇಶದಿಂದ ಕ್ವಾರಿಗಳಿಗೆ ಕಸ ಸುರಿಯುವ ಮುನ್ನ ಡಾಂಬರುಯುಕ್ತ ಟಾರ್ಪಲ್‌ ಹಾಕಿ, ಅದರ ಮೇಲೆ ಬಟ್ಟೆ ಹಾಕಲಾಗುತ್ತದೆ. ಬಳಿಕ ಕಸವನ್ನು ಸುರಿಯಲಾಗುತ್ತದೆ. ದೇಶದಲ್ಲೇ ಎಲ್ಲೂ ಈ ರೀತಿ ಮಾಡುತ್ತಿಲ್ಲ. ಸ್ವಚ್ಛ ಭಾರತ ಮಿಷನ್‌ನ ಅಧಿಕಾರಿಗಳು ಈ ಕ್ವಾರಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದು ಉತ್ತಮ ಉಪಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.‌

‘ಕ್ವಾರಿಗಳಲ್ಲಿ ಕಸ ಹಾಕಬಾರದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೋಟಿಸ್‌ ನೀಡಿದ್ದರು. ಆದರೆ, ಭೂಭರ್ತಿ ಮಾಡಬಹುದು ಎಂದು ಘನತ್ಯಾಜ್ಯ ನಿರ್ವಹಣೆಯ ನಿಯಮಗಳಲ್ಲಿ ಹೇಳಲಾಗಿದೆ. ದೆಹಲಿ, ಮುಂಬೈ ನಗರಗಳಲ್ಲಿ ಕಸದ ರಾಶಿಗಳು ಕಂಡುಬರುತ್ತವೆ. ಆದರೆ, ಬೆಂಗಳೂರಿನಲ್ಲಿ ಭೂಭರ್ತಿ ಮಾಡುವ ಮೂಲಕ ಉದ್ಯಾನ ನಿರ್ಮಿಸುತ್ತಿದ್ದೇವೆ’ ಎಂದರು.

‘ತ್ಯಾಜ್ಯರಸ ಹಾನಿಕಾರಕವಲ್ಲ’
ಕಸದಿಂದ ಉತ್ಪತ್ತಿಯಾಗುವ ತ್ಯಾಜ್ಯರಸ ಹಾನಿಕಾರಕ ಎಂದೇ ಎಲ್ಲರೂ ಭಾವಿಸಿದ್ದಾರೆ. ಅದರಲ್ಲಿ ಕ್ಯಾಡ್ಮಿಯಂ, ಕ್ರೋಮಿಯಂನಂತಹ ಭಾರದ ಲೋಹಗಳಿದ್ದರೆ ಮಾತ್ರ ಹಾನಿಕಾರಕ. ಸಾವಯವ ಅಂಶಗಳಿದ್ದರೆ ಯಾವುದೇ ತೊಂದರೆ ಇರುವುದಿಲ್ಲ. ಲಿಚೆಟ್‌ನಿಂದ ಅಂತರ್ಜಲ ಕಲುಷಿತಗೊಳ್ಳುತ್ತದೆ. ಕೃಷಿ ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಕೆಲವರು ದೂರುತ್ತಾರೆ. ಆದರೆ, ಮಾವಳ್ಳಿಪುರ ಘನತ್ಯಾಜ್ಯ ಘಟಕದ ಸುತ್ತಲಿನ ಪ್ರದೇಶಗಳ ಮಣ್ಣು, ನೀರು ಹಾಗೂ ಬೆಳೆಗಳ ಮೇಲೆ ಆಗಿರಬಹುದಾದ ವೈಪರೀತ್ಯಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಅಧ್ಯಯನ ನಡೆಸಿತ್ತು. ಮಣ್ಣಿನ 68 ಮಾದರಿ, ಬೆಳೆಯ 69 ಮಾದರಿ ಹಾಗೂ ನೀರಿನ 80 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸಿ ವರದಿ ನೀಡಿತ್ತು. ಕೃಷಿ ಬೆಳೆಗಳಿಗೆ ಯಾವುದೇ ರೀತಿಯ ಹಾನಿಕಾರಕವಲ್ಲ ಎಂಬುದು ಗೊತ್ತಾಗಿದೆ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ಈ ರಸವನ್ನು ಗೊಬ್ಬರವಾಗಿ ಬೆಳೆಗಳಿಗೆ ಬಳಸಬಹುದು. 1 ಲೀಟರ್‌ ಲಿಚೆಟ್‌ಗೆ 5 ಲೀಟರ್‌ ನೀರು ಸೇರಿಸಿ ಬೆಳೆಗಳಿಗೆ ಹಾಕಬಹುದು. ಸಾವಯವ ಗೊಬ್ಬರ ತಯಾರಿಸುವಾಗ ಸಹ ಇದನ್ನು ಬಳಸಬಹುದು. ಇದರಲ್ಲಿ ಬ್ಯಾಕ್ಟೀರಿಯಾಗಳು ಇರುವುದರಿಂದ ಕಸವು ಬೇಗ ಗೊಬ್ಬರವಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಿದರು.

ದೊಡ್ಡಬಿದರಕಲ್ಲು ಘಟಕ
ದೊಡ್ಡಬಿದರಕಲ್ಲು ಕಸ ಸಂಸ್ಕರಣಾ ಘಟಕದಲ್ಲಿ 25 ಸಾವಿರ ಲೀಟರ್‌ ಸಾಮರ್ಥ್ಯದ ತ್ಯಾಜ್ಯರಸ ಶುದ್ಧೀಕರಣ ಘಟಕವನ್ನು ₹1.86 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಮಾರ್ಚ್‌ನಲ್ಲಿ ಕಾಮಗಾರಿ ಮುಗಿಯಲಿದೆ.

ಕನ್ನಹಳ್ಳಿ, ಸೀಗೇಹಳ್ಳಿ, ಕೆಸಿಡಿಸಿ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು, ಚಿಕ್ಕನಾಗಮಂಗಲ ಹಾಗೂ ಸುಬ್ಬರಾಯಪ್ಪನಪಾಳ್ಯದ ಕಸ ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯರಸವನ್ನು ಇಲ್ಲಿ ಶುದ್ಧೀಕರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT