ಸೋಮವಾರ, ಆಗಸ್ಟ್ 3, 2020
25 °C

ಹಸಿರುಟ್ಟು ಕಂಗೊಳಿಸುವ ಸೂನಗಹಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಸಿರುಟ್ಟು ಕಂಗೊಳಿಸುವ ಸೂನಗಹಳ್ಳಿ

ಮಂಡ್ಯ: ತೆಂಗಿನ ತೋಟ, ಕಬ್ಬು, ರಾಗಿ, ಭತ್ತ, ಹಿಪ್ಪು ನೇರಳೆ, ಬಾಳೆ ತೋಟದ ನುಡುವೆ ಅರಳಿರುವ ಗ್ರಾಮ ಸೂನಗಹಳ್ಳಿ. ಹಸಿರು ತೋರಣದಂತಿರುವ ಗ್ರಾಮ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ.

ಜನಪದ ಕಲೆ, ಧಾರ್ಮಿಕ ಪರಂಪರೆ, ಕೃಷಿಗೆ ಹೆಸರುವಾಸಿಯಾಗಿರುವ, ಮಂಡ್ಯ–ಕೆ.ಎಂ.ದೊಡ್ಡಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ‘ನಮ್ಮ ಊರು ನಮ್ಮ ಹೆಮ್ಮೆ’ ಎನ್ನುವವರಿಗೆ ಕೊರತೆ ಇಲ್ಲ.

ಊರ ಹೊರಗಿನ ಸೌಂದರ್ಯದ ಜೊತೆಗೆ ಊರೊಳಗಿನ ಇತಿಹಾಸ, ದೇವಾಲಯ, ಸುಂದರ ಶಾಲೆ ಹಳ್ಳಿಯ ಸೊಬಗನ್ನು ನೂರ್ಮಡಿಗೊಳಿಸಿವೆ. ನಗರೀಕರಣಕ್ಕೆ ತೆರೆದುಕೊಂಡಂತೆ ಊರೊಳಗೆ ಮುಖ್ಯ ರಸ್ತೆ, ಅಂಡಿ ಮುಂಗಟ್ಟು, ಪ್ರಾಥಮಿಕ ಆರೋಗ್ಯ ಕೇಂದ್ರ, ಉದ್ಯಾನಗಳಿವೆ.

ವರದರಾಯಸ್ವಾಮಿ, ಮಹದೇವಮ್ಮ, ಪಟ್ಲದಮ್ಮ, ಕಾಳಮ್ಮ, ಹಂಚಿದೇವಮ್ಮ, ಸೂಲ್ಕಮ್ಮನ ದೇವಸ್ಥಾನ ಸೇರಿ 20ಕ್ಕೂ ಹೆಚ್ಚು ದೇವಾಲಯ ಗ್ರಾಮದಲ್ಲಿವೆ. ಪಟ್ಲದಮ್ಮ ಮತ್ತು ಕಾಳಮ್ಮ ದೇವರ ಹಬ್ಬ ಪ್ರತಿ 3 ವರ್ಷಕ್ಕೊಮ್ಮೆ ವಿಷೇಶವಾಗಿ ಕೊಂಡ ಹಾಯುವ ಮೂಲಕ ಆಚರಣೆ ಮಾಡಲಾಗುತ್ತದೆ. ಜಿಲ್ಲೆಯಾದ್ಯಂತ ಸಾವಿರಾರು ಜನರು ಜಾತ್ರೆಗೆ ಸಾಕ್ಷಿಯಾಗುತ್ತಾರೆ. ‘ಪಟ್ಲದಮ್ಮ ಭಕ್ತರ ಇಷ್ಟಾರ್ಥ ನೀಡುತ್ತಾಳೆ. ಬೇರೆ ಊರಿಂದ ಬರುವ ಭಕ್ತರಿಗೆ ಒಲಿದು ಆಶೀರ್ವಾದಿಸುತ್ತಾಳೆ’ ಎಂದು ಊರಿನ ಹಿರಿಯರು ಹೆಮ್ಮೆಯಿಂದ ಹೇಳುತ್ತಾರೆ. ವರದರಾಯಸ್ವಾಮಿ ದೇವರ ಜಾತ್ರೆಯನ್ನು ಪ್ರತಿವರ್ಷ ರಥ ಎಳೆದು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

ಊರೊಳಗೆ ಪ್ರವೇಶ ಮಾಡುತ್ತಿದ್ದಂತೆ ಸೂಲ್ಕಮ್ಮ ದೇವಾಲಯ ಎದುರುಗೊಳ್ಳುತ್ತದೆ. ಆ ದೇವಾಲಯದ ಹಿಂದೆ ಐತಿಹಾಸಿಕ ಪರಂಪರೆಯೇ ಇದೆ. ‘ನಮ್ಮೂರು ಮೊದಲು ಕಾಡು ಪ್ರಾಂತ್ಯವಾಗಿತ್ತು. ಆಗ ಭೂಮಿಯಿಂದ ಒಂದು ಲಿಂಗ ಉಧ್ಬವವಾಯಿತು ಲಿಂಗಕ್ಕೆ ಟಿ.ಮಲ್ಲಿಗೆರೆಯ ಹಸುವೊಂದು ಪ್ರತಿನಿತ್ಯ ಹಾಲು ಕೊಟ್ಟು ಹೋಗುತ್ತಿತ್ತು. ಅದನ್ನು ನೋಡಿದ ಹಸುವಿನ ಮಾಲೀಕ ಹಾಲು ಕರೆಯುತ್ತಿದ್ದಾರೆ ಎಂದು ತಿಳಿದು ಕಲ್ಲನ್ನು ಬೀಸಿದಾಗ ಲಿಂಗವು ಸ್ವಲ್ಪ ಮುಕ್ಕಾಗಿದೆ. ಈ ಲಿಂಗವೇ ಸೂಲ್ಕಮ್ಮ ದೇವರು. ಆ ದೇವರ ಹೆಸರಿನಂತೆಯೇ ಊರಿಗೆ ಸೂನಗಹಳ್ಳಿ ಹೆಸರು ಬಂತು’ ಎಂದು ಗ್ರಾಮಸ್ಥರು ಹೇಳುತ್ತಾರೆ. ಗ್ರಾಮದಲ್ಲಿ 700 ಕುಟುಂಬಗಳಿವೆ. ಹೊಸೂರು, ಹೆಮ್ಮಿಗೆ ಹಾಗೂ ಕಬ್ಬನಹಳ್ಳಿ ಒಳಗೊಂಡಂತೆ ಗ್ರಾಮ ಪಂಚಾಯಿತಿಯೂ ಇದೆ.

ನಮ್ಮೂರಿನ ಜನಪದ ಕಲೆ: ‘ನಾಟಕ, ಕೋಲಾಟ, ದೊಣ್ಣೆ ವರಸೆ ಕಲೆಗಳಲ್ಲಿ ಗ್ರಾಮ ಹೆಸರುವಾಸಿ. ಹಿಂದೆ ಡಾ.ರಾಜ್‌ಕುಮಾರ್ ಅವರ ಸೋದರಮಾವ ತಿಪ್ಪಯ್ಯ ಚಾಮರಾಜನಗರದಿಂದ ಬಂದು ನಾಟಕ ಹೇಳಿಕೊಡುತ್ತಿದ್ದರು. ಒಂದು ವರ್ಷದಲ್ಲಿ 5 ರಿಂದ 10 ನಾಟಕ ನಡೆಯಿತ್ತಿದ್ದವು. ನಾಟಕ ಆಡುವುದರಲ್ಲಿ ಶಿವಲಿಂಗೇಗೌಡ, ಕ್ವಾಟಪ್ಪ, ಮಜ್ಜೇಗೌಡ, ಗೋಪಾಲ, ಉಮಾಶಂಕರ ಉತ್ತಮ ಕಲಾವಿದರು. ಈಗ ಬರಗಾಲದಲ್ಲಿ ಜೀವನ ಮಾಡುವುದೇ ಕಷ್ಟ. ನಾಟಕ ನಾಟಕ ಆಡಲು ಹೆಚ್ಚು ಹಣ ಭರಿಸಲಾಗದೆ ನಿಲ್ಲಿಸಿದ್ದೇವೆ. ದೊಣ್ಣೆ ವರಸೆ, ಕೋಲಾಟದಲ್ಲಿ ನಮ್ಮೂರಿನ ಮರೀಗೌಡ ಮತ್ತು ತಂಡ ದಸರಾ ಸೇರಿ ಜಿಲ್ಲೆಯ ಹಲವು ಕಡೆ ಪ್ರದರ್ಶನ ನೀಡಿ ಶಹಬ್ಬಾಶ್ ಎನಿಸಿಕೊಂಡಿದ್ದಾರೆ’ ಎಂದು ಗ್ರಾಮಸ್ಥ ಉಮಾಶಂಕರ ಹೇಳಿದರು.

ನಮ್ಮೂರ ಕೃಷಿ : ಕೃಷಿಯೇ ಪ್ರಮುಖವಾಗಿರುವ ಗ್ರಾಮದಲ್ಲಿ ಶೇ.30ರಷ್ಟು ರೈತರು ರೇಷ್ಮೆ ಸಾಕಾಣಿಕೆ ಮಾಡುತ್ತಾರೆ. ಕಬ್ಬು, ಭತ್ತ, ರಾಗಿ ಸೇರಿ ತರಕಾರಿ ಬೆಳೆ ಬೆಳೆಯುತ್ತೇವೆ. ಕಾಲುವೆ ನೀರಾವರಿ, ಕೊಳವೆ ಬಾವಿ ಹೆಚ್ಚು. ಗ್ರಾಮವು ಮಂಡ್ಯ, ಬೆಂಗಳೂರು ನಗರಗಳಿಗೆ ಹತ್ತಿರ ಇರುವುದರಿಂದ ಇಲ್ಲಿಯ ಕಬ್ಬು ಕಬ್ಬಿನ ಹಾಲಿಗಾಗಿ ನಗರಗಳಿಗೆ ಕಳುಸಲಾಗುತ್ತದೆ. ಪಶು ಸಂಗೋಪನೆ ಕೂಡ ಉತ್ತಮವಾಗಿದ್ದು ಹಾಲಿನ ಡೇರಿ ಇದೆ.

ಇಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು ಉತ್ತಮ ವಾತಾವರಣ, ಬೃಹತ್‌ ಮೈದಾನ, ಸುಸಜ್ಜಿತ ಕಟ್ಟಡ ಇವೆ. ಗ್ರಾಮಸ್ಥರು ಶಾಲೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಪ್ರೌಢಶಾಲೆಗೆ ಜಿಲ್ಲೆಯ ಹಸಿರು ಮಿತ್ರ ಪ್ರಶಸ್ತಿ ದೊರೆತಿದೆ. ಮಕ್ಕಳು ಹಲವು ವಿಭಾಗಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಊರಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇಲ್ಲಿ ಓದಿದವರು ದೇಶ ವಿದೇಶದಲ್ಲಿ ಉನ್ನತ ಹುದ್ದೆ ಗಳಿಸಿದ್ದಾರೆ.

ಜಯರಾಂ ಹುಟ್ಟೂರು

ಸೂನಗಹಳ್ಳಿ ಎಂದರೆ ಎಸ್.ಡಿ.ಜಯರಾಮ್ ನೆನಪಾಗುತ್ತಾರೆ. ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದರು. ಅವರ ಅಧಿಕಾರದಲ್ಲಿ ಆಸ್ಪತ್ರೆ, ಪ್ರೌಢಶಾಲೆ, ಕೆರೆ, ಉದ್ಯಾನ ಸೇರಿ ಹಲವು ದೇವಾಲಯ ನಿರ್ಮಾಣವಾಗುವ ಮೂಲಕ ಅಭಿವೃದ್ಧಿಯ ದರ್ಶನವಾಯಿತು. ಅವರ ಜತೆಗೆ ಡಾ.ಚಿಕ್ಕದೇವೇಗೌಡ, ಶಿವಲಿಂಗಯ್ಯ, ದೇವೇಗೌಡ, ಜವರೇಗೌಡ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅಭಿಲಾಷ್ ಎಂಜಿನಿಯರ್ ಆಗಿ ಗಮನ ಸೆಳೆದಿದ್ದಾರೆ. ಸುಕನ್ಯಾ ಕೀನ್ಯಾ, ಜರ್ಮನಿಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಸತೀಶ್ ಕೆ ಬಳ್ಳಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.