ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳಿನಿಂದ ತುಂಬಿಹೋದ ಪ್ರಮುಖ ರಸ್ತೆಗಳು

Last Updated 5 ಜನವರಿ 2018, 8:48 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಮತ್ತೆ ದೂಳ್‌ ದೊಡ್ಡಬಳ್ಳಾಪುರ ಆಗುವತ್ತ ಸಾಗಿದ್ದು ನಗರದ ಯಾವುದೇ ರಸ್ತೆಗಳಲ್ಲಿ ಸಂಚರಿಸಿದರೂ ಇಡೀ ದೇಹದ ಮೇಲಿನ ಬಟ್ಟೆಗಳು ದೂಳಿನಿಂದ ತುಂಬಿ ಹೋಗುತ್ತಿದೆ. ಹಿರಿಯರು, ಮಕ್ಕಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಅರ್ಧ ಕಿ.ಮೀ ಉದ್ದದ ಡಿ.ಕ್ರಾಸ್‌ ರಸ್ತೆ ಕಾಮಗಾರಿ ಆರಂಭವಾಗಿ ಸುಮಾರು ಒಂದು ವರ್ಷ ಕಳೆಯುತ್ತ ಬಂದರು ಇನ್ನು ಪೂರ್ಣಗೊಳ್ಳುವ ಲಕ್ಷಣವೇ ಕಾಣುತ್ತಿಲ್ಲ. ನಗರದಲ್ಲೇ ಅತ್ಯಂತ ಹೆಚ್ಚು ವಾಹನಗಳು, ಬೈಕ್‌ ಸವಾರರು, ಪಾದಚಾರಿಗಳು ತಿರುಗಾಡುವ ರಸ್ತೆ ಇದಾಗಿದೆ. ಈ ರಸ್ತೆಯಲ್ಲಿ ಖಾಸಗಿ ಆಸ್ಪತ್ರೆಗಳು, ನಗರದ ಬಹುತೇಕ ರಾಷ್ಟ್ರೀಕೃತ ಬ್ಯಾಂಕ್‌ಗಳು ಇವೆ. ಇದಲ್ಲದೆ ನಗರದ ಬಸ್‌ ನಿಲ್ದಾಣಕ್ಕೆ ಹೊರಗಿನಿಂದ ಬರುವ ಎಲ್ಲ ಬಸ್‌ಗಳು ಸಹ ಇದೇ ರಸ್ತೆಯಲ್ಲಿಯೇ ಬರಬೇಕು.

ಡಿ.ಕ್ರಾಸ್‌ ರಸ್ತೆಯ ಕತೆ ಒಂದು ರೀತಿಯಾದರೆ ರಂಗಪ್ಪ ವೃತ್ತದ ಮೂಲಕ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಮೂರು ವರ್ಷಗಳಿಂದಲೂ ದೂಳಿನದೇ ಕಾರುಬಾರಾಗಿದೆ. ಬೆಂಗಳೂರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಪ್ರಮುಖ ಹಾಗೂ ಏಕೈಕ ರಸ್ತೆಯಾಗಿರುವ ರಂಗಪ್ಪ ವೃತ್ತದ ರಸ್ತೆಯನ್ನು ಒಳಚರಂಡಿ ಪೈಪ್‌ ಲೈನ್‌, ಕುಡಿಯುವ ನೀರಿನ ಪೈಪ್‌ ಲೈನ್‌, ದೂರವಾಣಿ ಕೇಬಲ್‌ ಸೇರಿದಂತೆ ಹತ್ತಾರು ಕಾಮಗಾರಿಗಳಿಗಾಗಿ ರಸ್ತೆಯಲ್ಲಿ ಗುಂಡಿಗಳನ್ನು ತೋಡುತ್ತಲೇ ಇದ್ದಾರೆ.

ಇದು ಸಾಲುದು ಎನ್ನುವಂತೆ ಈಗ ರಸ್ತೆ ವಿಸ್ತರಣೆಗಾಗಿ ರಸ್ತೆಯ ಎರಡೂ ಬದಿಯಲ್ಲೂ ಗುಂಡಿಗಳನ್ನು ತೋಡಲಾಗಿದೆ. ಕೆಲವು ಕಡೆಗಳಲ್ಲಿ ಜೆಲ್ಲಿ ಕಲ್ಲುಗಳನ್ನು ರಾಶಿ ಬಿಡಲಾಗಿದೆ. ಮತ್ತೆ ಕೆಲವು ಕಡೆಗಳಲ್ಲಿ ಗುಂಡಿಯನ್ನು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ರಾತ್ರಿ ವೇಳೆ ಇರಲಿ ಹಗಲಿನ ವೇಳೆಯಲ್ಲಿಯೇ ಬೈಕ್‌ ಸವಾರರು, ಆಟೋಗಳು ಅಪಘಾತಗಳು ನಡೆಯುತ್ತಲೇ ಇವೆ ಎಂದು ಶ್ರೀನಗರ ಮನು ದೂರಿದ್ದಾರೆ.

ಇದು ಪ್ರಮುಖ ರಸ್ತೆಯ ಕತೆಯಾದರೆ ನಗರದಲ್ಲಿ ₹ 32 ಕೋಟಿಗಳ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ ಲೈನ್‌ಗಳನ್ನು ಆಳವಡಿಸಲು ಇಡೀ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಗಲ್ಲಿ ರಸ್ತೆಗಳಲ್ಲೂ ಕಾಲುವೆಗಳನ್ನು ತೋಡಲಾಗಿದೆ. ಹೀಗಾಗಿ ಯಾವುದೇ ರಸ್ತೆಯಲ್ಲಿ ಹೋದರು ಸಹ ದೂಳು ಇಡೀ ಮೈಮೇಲಿನ ಬಟ್ಟೆಗಳನ್ನು ಆವರಿಸಿಕೊಳ್ಳುತ್ತಿದೆ. ಬೈಕ್‌ಗಳಲ್ಲಿ ಹಾಗೂ ನಡೆದುಕೊಂಡು ಹೋಗುವವರು ಕಣ್ಣುಗಳನ್ನು ಮುಚ್ಚಿಕೊಂಡು ಹೋಗುವಂತಾಗಿದೆ ಎನ್ನುತ್ತಾರೆ ಇಸ್ಲಾಂಪುರ ನಿವಾಸಿ ಫಯಾಜ್‌.

ಸವಾರರಿಗೆ ಆತಂಕ

ಇಂತಹ ರಸ್ತೆಯನ್ನು ಪ್ರಥಮ ಆದ್ಯತೆಯ ಮೇರೆಗೆ ತುರ್ತಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕಿತ್ತು. ಅಥವಾ ರಸ್ತೆಯ ಒಂದು ಬದಿಯನ್ನು ಅಭಿವೃದ್ಧಿ ಪಡಿಸಿದ ನಂತರ ಮತ್ತೊಂದು ಬದಿಯ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿತ್ತು. ಇದ್ಯಾವುದು ಇಲ್ಲದೆ ಏಕಾಏಕಿ ರಸ್ತೆಯ ಎರಡೂ ಬದಿಯಲ್ಲು ಗುಂಡಿಗಳನ್ನು ತೋಡಿ ಕೆಲವು ಕಡೆಗಳಲ್ಲಿ ಜಲ್ಲಿಕಲ್ಲುಗಳನ್ನು ಹಾಕಲಾಗಿದೆ.

ಮತ್ತೆ ಕೆಲವು ಕಡೆ ರಸ್ತೆಯ ಬದಿಯಲ್ಲಿ ತೋಡಲಾಗಿರುವ ಗುಂಡಿಗಳಿಗೆ ಜಲ್ಲಿಕಲ್ಲುಗಳನ್ನು ತುಂಬಿಲ್ಲ. ಹೀಗಾಗಿ ಸ್ವಲಪ್ಪ ಆಯತಪ್ಪಿದರು ಈ ಗುಂಡಿಗಳಿಗೆ ಬಿದ್ದು ಪ್ರತಿ ನಿತ್ಯ ಬೈಕ್‌ ಸವಾರರು ಕೈಕಾಲುಗಳನ್ನು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ.

* * 

ಈ ರಸ್ತೆಯಲ್ಲಿ ವಾಹನಗಳ ಓಡಾಟದ ಬರಾಟೆಗೆ ಏಳುವ ದೂಳಿನಿಂದ ರಸ್ತೆ ಬದಿಯ ಮನೆ, ವಾಣಿಜ್ಯ ಮಳಿಗೆಗಳವರು ರೋಸಿಹೋಗಿದ್ದು ಬದುಕುವುದೇ ದುಸ್ಥರ ಎನ್ನುವಂತಾಗಿದೆ  
ಚಲಪತಿ,
ಡಿ.ಕ್ರಾಸ್‌ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT