ಬುಧವಾರ, ಜೂಲೈ 8, 2020
23 °C

ಜ್ಞಾನ, ಶಿಕ್ಷಣಕ್ಕೆ ಬಡತನ ಅಡ್ಡಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ಞಾನ, ಶಿಕ್ಷಣಕ್ಕೆ ಬಡತನ ಅಡ್ಡಿಯಲ್ಲ

ಚಿಕ್ಕಬಳ್ಳಾಪುರ: ‘ಅನೇಕ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಬಡತನವಿರಬಹುದು, ಆದರೆ ವಿದ್ಯೆಗೆ ಬಡತನವಿಲ್ಲ. ಇವತ್ತು ಶಿಕ್ಷಣಕ್ಕೆ ಉತ್ತೇಜನ ನೀಡಲು ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆಗೆ ಮುಂದಾಗಬೇಕು’ ಎಂದು ಶಿಕ್ಷಣ ತಜ್ಞ ಕೋಡಿರಂಗಪ್ಪ ಹೇಳಿದರು.

ನಗರದ ಸಿವಿವಿ ಪಂಚಗಿರಿ ಬೋಧನಾ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಪೋಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳ ಬಡ ಕುಟುಂಬದಲ್ಲಿ ಹುಟ್ಟಿ, ಅನೇಕ ಕಷ್ಟಗಳ ನಡುವೆ ವಿದ್ಯಾಭ್ಯಾಸ ಪೂರೈಸಿ ಉನ್ನತ ಹುದ್ದೆಗಳಲ್ಲಿ ಅಲಂಕರಿಸಿ ಹೆಸರು ಸಂಪಾದಿಸಿದವರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. ಅಂತಹ ಮಹನೀಯರ ಜೀವನ ಚರಿತ್ರೆಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಿಮ್ಮೊಳಗಿನ ಆತ್ಮವಿಶ್ವಾಸ ಹರಳುಗಟ್ಟುತ್ತದೆ’ ಎಂದು ತಿಳಿಸಿದರು.

‘ಇವತ್ತು ಸಮಾಜದಲ್ಲಿ ಧರ್ಮ ಚಿಂತನೆಯ ಹೆಸರಿನಲ್ಲಿ ಶಾಲಾ–ಕಾಲೇಜು, ಆಸ್ಪತ್ರೆಗಳನ್ನು ತೆರೆದು ಹಣ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದೆಲ್ಲದರ ನಡುವೆಯೂ ಕೆಲವರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಹೆಚ್ಚಿವೆ. ಅವುಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ಓದುವುದು ರೂಢಿಸಿಕೊಳ್ಳಬೇಕಿದೆ’ ಎಂದರು.

‘ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಪಷ್ಟವಾದ ಗುರಿ ಇರಬೇಕು. ಐಎಎಸ್‌, ಐಪಿಎಸ್‌ ಹುದ್ದೆಗಳಂತಹ ದೊಡ್ಡ ಮಟ್ಟದ ಕನಸುಗಳನ್ನು ಕಂಡು ಅವುಗಳನ್ನು ಸಾಕಾರಗೊಳಿಸಲು ಬದ್ಧತೆಯಿಂದ ಶ್ರಮ ಹಾಕಬೇಕು. ನಿತ್ಯ ಐದಾರೂ ಗಂಟೆಗಳಷ್ಟಾದರೂ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಜ್ಞಾನದ ಬುತ್ತಿಯನ್ನು ಕಟ್ಟಿಕೊಡಲು ಶಿಕ್ಷಕರು ನೆರವಾದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿಯ ಆಡಳಿತಾಧಿಕಾರಿ ಪಿ.ಸಾಯಿಪ್ರಭು ಮಾತನಾಡಿ, ‘ವಿದ್ಯಾರ್ಥಿಗಳು ಓದುವ ಜತೆಯಲ್ಲೇ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಲು ಮುಂದಾಗಬೇಕು. ಪೋಷಕರು ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡಬೇಕು. ವಿದ್ಯಾರ್ಥಿಗಳು ಪೋಷಕರ ಜವಾಬ್ದಾರಿ ಅರಿತು ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಲು ಉನ್ನತ ಸಾಧನೆ ಮಾಡಬೇಕು’ ಎಂದು ಹೇಳಿದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಕೆ.ವಿ ಮತ್ತು ಪಂಚಗಿರಿ ವಿದ್ಯಾದತ್ತಿಯ ಹಿರಿಯ ಸದಸ್ಯ ಬಿ.ಮುನಿಯಪ್ಪ, ದತ್ತಿಯ ಆಡಳಿತ ಅಧಿಕಾರಿಗಳಾದ ಎಸ್‌.ಪಿ.ಸೈಯದ್‌ ಸಾಲಾರ್‌, ಯಾಸೀನ್‌ ಖಾನ್‌, ನಿರ್ಮಲಾ ಪ್ರಭು, ದತ್ತಿಯ ಮುಖ್ಯಸ್ಥರಾದ ಕೆ.ಆರ್‌. ಲಕ್ಷ್ಮಣಸ್ವಾಮಿ, ಕಾರ್ಯಕಾರಿ ಸಮಿತಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಭಾರ ಮುಖ್ಯ ಶಿಕ್ಷಕ ಎಂ. ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಉನ್ನತ ಕನಸುಗಳನ್ನು ಇಟ್ಟಕೊಂಡು ಶ್ರದ್ಧೆ, ಬದ್ಧತೆಯಿಂದ ಓದಿನಲ್ಲಿ ತೊಡಗಿಸಿಕೊಂಡರೆ ಖಂಡಿತ ಜೀವನದಲ್ಲಿ ಯಶಸ್ಸು ಸಾಧಿಸಬಹುದು

ಕೋಡಿರಂಗಪ್ಪ

ಶಿಕ್ಷಣ ತಜ್ಞ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.