ಸೋಮವಾರ, ಆಗಸ್ಟ್ 10, 2020
23 °C

ಪಠ್ಯದಲ್ಲಿ ನೊಳಂಬ ರಾಜರ ಇತಿಹಾಸ ಸೇರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನೊಳಂಬ ರಾಜರ ಇತಿಹಾಸ ಗ್ರಂಥಗಳಲ್ಲಿ, ಪಠ್ಯದಲ್ಲಿ ಸೇರ್ಪಡೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಯುವ ವೇದಿಕೆ, ನೊಳಂಬ ನೌಕರರ ಕ್ಷೇಮಾಭಿವದ್ಧಿ ಸಂಘ, ನೊಳಂಬ ಮಹಿಳಾ ವೇದಿಕೆ, ನೊಳಂಬ ಸಮಾಜ, ಅಖಿಲ ಭಾರತ ನೊಳಂಬ ವೇದಿಕೆ ಸಹಯೋಗದಲ್ಲಿ ನಗರದ ಪವಿತ್ರವನದ ಕಣಿವೆ ರುದ್ರೇಶ್ವರ ದೇಗುಲ ಪಕ್ಕದ ಗುರುಸಿದ್ದರಾಮೇಶ್ವರ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ನೊಳಂಬೋತ್ಸವದಲ್ಲಿ ‘ಪ್ರಾಚೀನ ನೊಳಂಬ ಇತಿಹಾ ಪರಂಪರೆ’ ಕುರಿತು ಮಾತನಾಡಿದರು.

ಪಲ್ಲವರು, ರಾಷ್ಟ್ರಕೂಟರು, ಕದಂಬರು, ಮೊಲಲಾದ ರಾಜಮನೆತನಗಳು ಇತಿಹಾಸ ಪುಸ್ತಕಗಳಲ್ಲಿ ದಾಖಲಾಗಿವೆ. ಆದರೆ, ನೊಳಂಬ ರಾಜರ ಎಲ್ಲಿಯೂ ದಾಖಲಾಗಿಲ್ಲ. ನೊಳಂಬ ರಾಜರು ರಾಜ್ಯವನ್ನು ಪ್ರತಿನಿಧಿಸಿದ್ದನ್ನು ಐತಿಹಾಸಿಕ ಗ್ರಂಥಗಳಲ್ಲಿ ಸೇರಿಸಬೇಕು ಎಂದರು.

ನೊಳಂಬ ಸಮುದಾಯದ ನಾಯಕತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಇತರ ಸಮುದಾಯಗಳಿಗೆ ಸಿಗುವ ಸವಲತ್ತು, ಪ್ರಾತಿನಿಧ್ಯ ಈ ಸಮುದಾಯಕ್ಕೂ ಸಿಗುವಂತೆ ಗಮನಹರಿಸಬೇಕು. ಹೊಡೆದು, ಬಡಿದು, ಕಿತ್ತುಕೊಂಡು ತಿನ್ನುವ ಸಮುದಾಯ ನಮ್ಮದಾಗಬಾರದು. ನೊಳಂಬ ರಾಜಮನೆತನದವರು ತತ್ವಾಧಾರಿತವಾಗಿ ಬಾಳಿದ್ದಾರೆ. ಪ್ರಾಮಾಣಿಕ ಜೀವನ ಮಾಡಿದವರು. ಸಿದ್ದರಾಮೇಶ್ವರರನ್ನು ಗುರುವಾಗಿ ಸ್ವೀಕರಿಸಿ ಅವರ ಆದರ್ಶ ಪಾಲಿಸಿದವರು ಈ ರಾಜಮನೆತದವರು ಎಂದರು.

ಇತಿಹಾಸ ನಿರ್ಮಾಣ ಆಗಬೇಕಾದರೆ ಪ್ರಾಮಾಣಿಕ ಚಿಂತನೆ ಇರಬೇಕು. ಆದರ್ಶ, ಒಳ್ಳೆತನ ಇದ್ದರೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿದೆ. ಈ ಉತ್ಸವ ಜಾತಿ ಉತ್ಸವ ಅಲ್ಲ. ರಾಜಮನೆತನದ ಗುರುತು ಹಚ್ಚುವ, ಸಾರುವ ಸಮಾವೇಶ. ಈ ಉತ್ಸವ ಅರಿವಿನ ಮನೆ, ಅನುಭವ ಮಂಟಪ ಆಗಬೇಕು. ಇಲ್ಲಿ ವಿಚಾರಗಳ ಚಿಂತನಮಂಥನ ನಡೆಯಬೇಕು ಎಂದರು.

ಹಳೇಬೀಡಿನ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಮುದಾಯದ ಹೆಸರಿನಲ್ಲಿ ಸಮಾವೇಶಗಳನ್ನು ನಡೆಸುವುದು ಇಂದಿನ ಅಗತ್ಯ. ಗುರುತಿಸಿಕೊಳ್ಳಲು, ಬೆಳವಣಿಗೆ ಹೊಂದಲು ಅದರ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಳ್ಳಲು ಅಂಜಿದರೆ ಬೆಳವಣಿಗೆ ಸಾಧ್ಯ ಇಲ್ಲ. ಜಾತಿ ಪ್ರಾತಿನಿಧ್ಯ ಹೆಚ್ಚುತ್ತಿದೆ. ಜಾತಿ ವ್ಯವಸ್ಥೆ ಗಟ್ಟಿಗೊಳಿಸಲು ಒತ್ತು ನೀಡಲಾಗುತ್ತಿದೆ. ಇಂದಿನ ಸ್ಪರ್ಧಾ ಯುಗದಲ್ಲಿ ಮುಂದುವರಿಯುವ ಪ್ರಯತ್ನ ಮಾಡದಿದ್ದವರು ದಡ್ಡರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ನೊಳಂಬ ಸಮುದಾಯದವರು ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಇದ್ದಾರೆ. ಸುಮಾರು 20 ಲಕ್ಷ ಜನಸಂಖ್ಯೆ ಇದೆ. ಆದರೆ, ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ನಾಯಕರು ಇಲ್ಲ. ಸಂಸ್ಥೆಗಳು ಇಲ್ಲ. ನಮ್ಮವರ ಕಾಲೆಳೆಯುವ ಪ್ರವ್ರತ್ತಿ ಬಿಡಬೇಕು. ದ್ವೇಷ, ಅಸೂಯೆ ಬದಿಗೊತ್ತಿ ಒಗ್ಗೂಡಿ ಮುನ್ನಡೆಯಬೇಕು. ಹೀಗೆ ಮಾಡದಿದ್ದರೆ ಮುಂದುವರಿಯಲು ಸಾಧ್ಯ ಇಲ್ಲ ಎಂದರು.

ಜಾತಿ, ಶಿಫಾರಸು, ಅಧಿಕಾರ, ದುಡ್ಡು ದೇಶವನ್ನು ಆಳುತ್ತಿವೆ. ದೇಶದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು, ಗುರುತಿಸಿಕೊಳ್ಳಲು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಔದ್ಯಮಿಕವಾಗಿ ಉನ್ನತಿ ಸಾಧಿಸಬೇಕು ಎಂದರು.

ಉತ್ಸವದ ಅಂಗವಾಗಿ ನಗರದಲ್ಲಿ ಕಲಾ ತಂಡಗಳ ಮೆರುಗಿನಲ್ಲಿ ಮೆರವಣಿಗೆ ನಡೆಯಿತು. ಭೂ ಸುಕ್ಷೇತ್ರ ಮಠದ ಗುರುಪರದೇಶಿಕೇಂದ್ರ ಸ್ವಾಮೀಜಿ, ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ, ಶಿಡ್ಲೇಹಳ್ಳಿ ದಾರುಕ ಸಂಸ್ಥಾನ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಗೋಡೆಕೆರೆ ಸಂಸ್ಥಾನದ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೇದಿಗೆಮಠದ ಜಯಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆಯ ಮೃತ್ಯುಂಜಯ ದೇಶಿಕೇಂದ್ರ ಸಾಮೀಜಿ, ಯಳನಾಡು ಅರಸೀಕೆರೆ ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮಾರಗೊಂಡನಹಳ್ಳಿಯ ಪ್ರಭುಚನ್ನಾಬಸವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.