ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗೆರೆಯ ಶಾರದಾ ವಿದ್ಯಾ ಮಂದಿರಕ್ಕೆ ಸುವರ್ಣ ಸಂಭ್ರಮ

Last Updated 5 ಜನವರಿ 2018, 9:35 IST
ಅಕ್ಷರ ಗಾತ್ರ

1960 ಬರದ ನಾಡು ಚಳ್ಳಕೆರೆ ತಾಲ್ಲೂಕಿನಲ್ಲಿ ಪ್ರೌಢಶಿಕ್ಷಣಕ್ಕೆ ಅನುಕೂಲವಿಲ್ಲದ ಕಾಲವದು. ಇದನ್ನು ಮನಗಂಡ ಸರ್ ಎಂ.ವಿಶ್ವೇಶ್ವರಯ್ಯ ಈ ಭಾಗದಲ್ಲೊಂದು ಶಿಕ್ಷಣ ಸಂಸ್ಥೆ ಆರಂಭಿಸಲು ಸಲಹೆ ನೀಡಿದ್ದರು. ಅವರ ಪ್ರೇರಣೆಯಿಂದ 60ರ ದಶಕದಲ್ಲಿ ಶಾರದಾಮಂದಿರ ವಿದ್ಯಾಸಂಸ್ಥೆಯಡಿ ಬೆಳೆಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ ಶುರುವಾಯಿತು. ಆ ಹಿರಿಯ ರಾಜಕಾರಣಿ ಬಿ.ಎಲ್. ಗೌಡರು ಶಾಲೆಗೆ ಸ್ಥಾಪಕ ಅಧ್ಯಕ್ಷರಾದರು. ಬೆಳೆಗೆರಯ ಯರಲಿಂಗನಾಯಕ ಸ್ಥಾಪಕ ಕಾರ್ಯದರ್ಶಿಯಾದರು. ಬೆಳೆಗೆರೆ–ನಾರಾಯಣಪುರದ ಗ್ರಾಮಸ್ಥರ ನೇತೃತ್ವದಿಂದ ಶಿಕ್ಷಣ ಸಂಸ್ಥೆ ಆರಂಭವಾಯಿತು.

ಈ ಶಾಲೆ ಸ್ಥಾಪನೆ ಕನಸು ಕಂಡವರಲ್ಲಿ ಆಶುಕವಿ ಚಂದ್ರಶೇಖರ ಶಾಸ್ತ್ರಿಗಳ ಹಿರಿಯ ಮಗ ದಿ. ಸೀತಾರಾಮಶಾಸ್ತ್ರಿ ಪ್ರಮುಖರು.  ಗಣಿತಜ್ಞರಾಗಿದ್ದ ಅವರು ಸಂಸ್ಥೆಯ ಕನಸು ನನಸಾಗಲು ಧನ ಸಹಾಯ ನೀಡಿದರು. ಅವರ ಪುತ್ರ ಬೆಳೆಗೆರೆ ಕೃಷ್ಣಶಾಸ್ತ್ರಿ ತಮ್ಮ ಶೈಕ್ಷಣಿಕ ಅನುಭವ ಧಾರೆ ಎರೆದು, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಸಂಪರ್ಕ ಬಳಸಿಕೊಂಡು, ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಿದರು. ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಗಣ್ಯರ ಮಾರ್ಗದರ್ಶನ, ಧನಸಹಾಯದೊಂದಿಗೆ ಈ ಶಾಲೆ ಮುನ್ನಡೆಯುತ್ತಿದೆ. ಇಂಥ ಶಾಲೆ ಈಗ 50 ವಸಂತಗಳನ್ನು ಪೂರೈಸಿದ್ದು, ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿದೆ.

‌ಬೆಳೆಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಬಡ ಮಕ್ಕಳ ಶಾಲೆ. ಈಗಲೂ ಹೆಚ್ಚು ಬಡ ಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಕಡೆಯಿಂದ ಮಕ್ಕಳ ಬಂದು ಓದುತ್ತಿದ್ದಾರೆ. ಅವರಿಗೆಲ್ಲ ಉಚಿತ ಶಿಕ್ಷಣದ ಜತೆಗೆ, ವಸತಿನಿಲಯದ ವ್ಯವಸ್ಥೆ ಇದೆ. ಈಗಲೂ ಕಲ್ಬುರ್ಗಿ, ವಿಜಯಪುರದ 60 ಮಕ್ಕಳಿದ್ದಾರೆ. ಪಕ್ಕದ ಆಂಧ್ರದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ.

‘50 ವರ್ಷಗಳ ಹಿಂದೆ ಶಾಲೆ ಬಿಟ್ಟಿದ್ದ ನನ್ನನ್ನು ಕರೆತಂದು ಇದೇ ಶಾಲೆಯಲ್ಲಿ ಓದಿಸಿದ್ದಾರೆ’ ಎಂದು ಶಾಲೆಯ ಪ್ರಥಮ ವಿದ್ಯಾರ್ಥಿ ಎಸ್. ಎ. ಚಿದಾನಂದಯ್ಯ ಈಗಲೂ ನೆನಪಿಸಿಕೊಳ್ಳುತ್ತಾರೆ. ‘ಇಂಥ ಶಾಲೆ ಸರ್ಕಾರದಿಂದ ವೇತನ ಹೊರತುಪಡಿಸಿ ಬೇರೆ ಯಾವ ಅನುದಾನವನ್ನೂ ಪಡೆಯುವುದಿಲ್ಲ. ಎಲ್ಲ ದೇಣಿಗೆ ಮೂಲಕವೇ ಶಾಲೆ ನಡೆಯುತ್ತದೆ’ ಎನ್ನುತ್ತಾರೆ ಶಾಲೆಯ ಹಿತೈಷಿ ಶ್ರೀಪಾದ ಪೂಜಾರ್.

ಗಾಂಧೀಜಿಯವರ ಗ್ರಾಮೋದ್ಧಾರ ಹಾಗೂ ಸ್ವಾವಲಂಬನೆಯ ಶಿಸ್ತಿನಂತೆ, ಈ ಶಾಲೆಯಲ್ಲೂ ಶಿಕ್ಷಕರು– ವಿದ್ಯಾರ್ಥಿಗಳು – ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ವಿದ್ಯಾಕೇಂದ್ರ ಮತ್ತು ಉಚಿತ– ವಿದ್ಯಾರ್ಥಿನಿಲಯಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿದ್ದಾರೆ.

ದಾಖಲೆಗಳ ಪ್ರಕಾರ ಈ 50 ವರ್ಷಗಳಲ್ಲಿ ಶಾರದಾ ವಿದ್ಯಾಸಂಸ್ಥೆಯಲ್ಲಿ 9 ಜಿಲ್ಲೆಗಳಿಂದ 463 ಹಳ್ಳಿಗಳ 5273 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. 50ನೇ ವರ್ಷಾಚರಣೆ ಸಂದರ್ಭದಲ್ಲಿ 5ಸಾವಿರಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ, ಕಾರ್ಯಕ್ರಮಕ್ಕೆ ಖುದ್ದಾಗಿ ಆಹ್ವಾನಿಸಿದ್ದೇವೆ ಎಂದು ಸಮನ್ವಯಾಧಿಕಾರಿ ಎಸ್. ಎ.ಚಿದಾನಂದಯ್ಯ ತಿಳಿಸಿದ್ದಾರೆ.

ಇಂಥ ಅಪರೂಪದ ಶಾಲೆಯ ‘ಸುವರ್ಣ ಜಯಂತ್ಯುತ್ಸವ’ಕ್ಕೆ ಹಳೆಯ ವಿದ್ಯಾರ್ಥಿಗಳ ಜತೆಗೆ, ಜಿಲ್ಲೆಯ ಸಾರ್ವಜನಿಕರೂ ಭಾಗವಹಿಸಬೇಕೆಂದು ಸಂಚಾಲನಾ ಸಮಿತಿಯ ಆಹ್ವಾನಿಸುತ್ತದೆ.

6ರಿಂದ8ರವರೆಗೆ ಸುವರ್ಣ ಜಯಂತ್ಯುತ್ಸವ
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಬೆಳೆಗೆರೆ–ನಾರಾಯಣಪುರದ ಶಾರದಾ ವಿದ್ಯಾಮಂದಿರ ವಿದ್ಯಾಸಂಸ್ಥೆಯ ಬೆಳೆಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ 50 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಇದೇ 6 ರಿಂದ 8ರವರೆಗೆ ಸುವರ್ಣ ಜಯಂತ್ಯುತ್ಸವ ಆಚರಿಸಲಾಗುತ್ತಿದೆ ಎಂದು ಉತ್ಸವದ ಸಂಚಾಲಕ ಸಮಿತಿಯ ಶ್ರೀಪಾದಪೂಜಾರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರತಿ ದಿನ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ. 7ರಂದು ಸಂಜೆ 6.30ಕ್ಕೆ ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಬರೆದಿರುವ ಪ್ರಸಿದ್ಧ ನಾಟಕ ’ಹಳ್ಳಿಚಿತ್ರ’ ಪ್ರದರ್ಶನವಿದೆ. ಹಿರಿಯೂರು ತಾಲ್ಲೂಕು ಅಂಬಲಗೆರೆಯ ಪಾಂಡುರಂಗ ಕೃಪಾಪೋಷಿತ ನಾಟಕ ಮಂಡಳಿಯವರು ಈ ನಾಟಕ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಸಮನ್ವಯಾಧಿಕಾರಿ ಹಾಗೂ ಶಾಲೆಯ ಪ್ರಥಮ ವಿದ್ಯಾರ್ಥಿ ಎಸ್‌. ಎ. ಚಿದಾನಂದಯ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಆರ್. ಸರೋಜಮ್ಮ, ಮುಖ್ಯ ಶಿಕ್ಷಕ ಕೆ.ರಾಜಣ್ಣ, ವಿದ್ಯಾರ್ಥಿ ಸಂಘದ ಶಿಕ್ಷಕ ಕಾರ್ಯದರ್ಶಿ ವಿ.ಎಚ್. ವೀರಣ್ಣ ಹಾಜರಿದ್ದರು.

ಸಮಾರಂಭದಲ್ಲಿ ಪಾಲ್ಗೊಳ್ಳುವವರು

ಶಾರದಾ ಮಂದಿರ ವಿದ್ಯಾಸಂಸ್ಥೆ ಉಪಾಧ್ಯಕ್ಷ ಆರ್. ರಮೇಶ್ ಬಾಬು, ಕಿರುತೆರೆ–ಹಿರಿತೆರೆಯ ಕಲಾವಿದ ಕೆ.ಸುಚೇಂದ್ರ ಪ್ರಸಾದ್, ಸಾಹಿತಿ ಕಣಜನಹಳ್ಳಿ ನಾಗರಾಜ್ , ಬಿಎಸ್‌ಎಸ್ ಪ್ರೌಢಶಾಲೆಯ ಪ್ರಥಮ ಮುಖ್ಯ ಶಿಕ್ಷಕ ಬಿ.ಸಿ.ರಾಮಣ್ಣ ಶಾಲೆಯ ಪ್ರಥಮ ವಿದ್ಯಾರ್ಥಿ ಎಸ್. ಎ. ಚಿದಾನಂದಯ್ಯ, ಶಾಲೆಯ ಹಳೆಯ ವಿದ್ಯಾರ್ಥಿ ಡಾ. ಟಿ.ತಿರುಮಲೇಶ್, ಬೆಳೆಗೆರೆ ಶಾಸ್ತ್ರಿಗಳ ಒಡನಾಡಿ ಡಾ. ವೆಂಕಟೇಶ ಶರ್ಮ, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ರಾಮಕೃಷ್ಣ, ಶಾಲೆಯ ಮುಖ್ಯ ಶಿಕ್ಷಕ ಕೆ.ರಾಜಣ್ಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT