ಸೋಮವಾರ, ಜೂಲೈ 6, 2020
22 °C

‘ತಿಂಗಳಾಂತ್ಯಕ್ಕೆ ಹರಪನಹಳ್ಳಿ ಪರಿವರ್ತನಾ ಯಾತ್ರೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತಿಂಗಳಾಂತ್ಯಕ್ಕೆ ಹರಪನಹಳ್ಳಿ ಪರಿವರ್ತನಾ ಯಾತ್ರೆ’

ಹರಪನಹಳ್ಳಿ: ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಸಮಾರಂಭ ಮುಂದಕ್ಕೆ ಹೋಗಿರುವುದು ಹರಪನಹಳ್ಳಿಯಲ್ಲಿ ಮಾತ್ರ. ಇಲ್ಲಿರುವ ಎರಡು ಬಣಗಳ ಗೊಂದಲ ನಿವಾರಿಸಿ ಇದೇ ತಿಂಗಳ ಅಂತ್ಯಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

‘ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖಂಡರಾದ ಕುರುಣಾಕರ ರೆಡ್ಡಿ ಹಾಗೂ ಎನ್.ಕೊಟ್ರೇಶ್ ಬಣದವರು ನಿಗದಿ ಮಾಡಿದ ಮೈದಾನಗಳನ್ನು ಬಿಟ್ಟು ಮೂರನೇ ಸ್ಥಳದಲ್ಲಿ ಅಂದರೆ ಪಟ್ಟಣದ ಎಚ್.ಪಿ.ಎಸ್ ಕಾಲೇಜು ಆವರಣದಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಪಕ್ಷದಲ್ಲಿ ಪೈಪೋಟಿ ಸಹಜ. ಇಲ್ಲಿನ ಎರಡೂ ಬಣಗಳನ್ನು ಬೆಂಗಳೂರಿಗೆ ಕರೆಸಿ ಚರ್ಚಿಸಿ ಇದೇ ತಿಂಗಳ ಅಂತ್ಯಕ್ಕೆ ಒಂದು ದಿನಾಂಕ ಕೊಡುತ್ತೇನೆ. ಆಗ ಎರಡೂ ಬಣದವರು ಸೇರಿಕೊಂಡು ಸಂಘಟನೆ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಾರೆ’ ಎಂದರು.

‘ಸರ್ವೆ ಮಾಡಿಸಿ ಯಾರಿಗೆ ಜನಾಭಿಪ್ರಾಯ ಇರುತ್ತೋ ಮತ್ತು ಕಾರ್ಯಕರ್ತರು ಯಾರನ್ನು ಬಯಸುತ್ತಾರೋ ಅಂತಹವರಿಗೆ ಟಿಕೆಟ್ ಕೊಡುತ್ತೇವೆ. ತಿಂಗಳ ಕೊನೆಗೆ ಎರಡೂ ಬಣದವರು ಸೇರಿ ಅದ್ದೂರಿಯಾಗಿ ಪರಿವರ್ತನಾ ಯಾತ್ರೆ ಸಮಾರಂಭ ಮಾಡುತ್ತಾರೆ’ ಎಂದು ತಿಳಿಸಿದರು.

ಪ್ರತ್ಯೇಕ ಸನ್ಮಾನ: ಹೂವಿನಹಡಗಲಿ ಪರಿವರ್ತನಾ ಯಾತ್ರೆಗೆ ಹರಪನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಯಡಿಯೂರಪ್ಪ ಅವರನ್ನು ಬಿಜೆಪಿಯ  ಎರಡೂ ಬಣಗಳು ಪ್ರತ್ಯೇಕವಾಗಿ ಸನ್ಮಾನಿಸಿದವು ದಾವಣಗೆರೆ ಕಡೆಯಿಂದ ಕಂಚಿಕೇರಿ ಮಾರ್ಗವಾಗಿ ಪಟ್ಟಣಕ್ಕೆ ಬಂದಾಗ ಮೊದಲಿಗೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಎದುರಿಗೆ ಸ್ಥಳೀಯ ಮುಖಂಡ ಎನ್.ಕೊಟ್ರೇಶ್ ಬಣದ ಮುಖಂಡರು ಬಿಎಸ್‌ವೈ ಕಾರನ್ನು ನಿಲ್ಲಿಸಿದರು.

ಆಗ ಯಡಿಯೂರಪ್ಪನವರು ಕಾರು ಬಿಟ್ಚು ಇಳಿಯದೇ ಕುಳಿತಲ್ಲೇ ಹಾರ ಹಾಕಿಸಿಕೊಂಡು ಮುಂದೆ ಸಾಗಿದರು. ಆದರೆ ಎಸ್‌ಯುಜೆಎಂ ಕಾಲೇಜು ತಲುಪಿದಾಗ ಪುನಃ ಕಾರು ಹಿಂತಿರುಗಿಸಿಕೊಂಡು ಪ್ರವಾಸಿ ಮಂದಿರಕ್ಕೆ ಬಂದರು. ಆಗ ಎನ್.ಕೊಟ್ರೇಶ್ ಬಣದ ಕಾರ್ಯಕರ್ತರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಮಾಜಿ ಸಚಿವ ರೇಣುಕಾಚಾರ್ಯ, ಮುಖಂಡರಾದ ಜಿ.ನಂಜನಗೌಡ, ಸದಸ್ಯರಾದ ವೆಂಕಟೇಶರೆಡ್ಡಿ, ಗಣೇಶ, ಮೈದೂರು ರಾಮಪ್ಪ, ಎಚ್.ಎಂ.ಜಗದೀಶ್, ನೇಮ್ಯನಾಯ್ಕ, ತೆಲಿಗಿ ಮಂಜುನಾಥ್, ಹರೀಶ ಉಪಸ್ಥಿತರಿದ್ದರು. ಕರುಣಾಕರರೆಡ್ಡಿ ಬಣದಿಂದ ಸನ್ಮಾನ

ಪಟ್ಟಣದ ಹಡಗಲಿ ವೃತ್ತದಲ್ಲಿ ಕರುಣಾಕರ ರೆಡ್ಡಿ ಬಣದ ನಾಯಕರು ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಕೆ.ಲಕ್ಷ್ಮಣ್, ಪುರಸಭಾಧ್ಯಕ್ಷ ಎಚ್.ಕೆ.ಹಾಲೇಶ್, ಉಪಾಧ್ಯಕ್ಷ ಕಣವಿಹಳ್ಳಿ ಮಂಜುನಾಥ್, ಮುಖಂಡರಾದ ಎಂ.ಪಿ.ನಾಯ್ಕ, ಸಣ್ಣಹಾಲಪ್ಪ, ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಬೆಣ್ಣೆಹಳ್ಳಿ ರೇವಣ್ಣ, ಯಡಿಹಳ್ಳಿ ಶೇಖರಪ್ಪ,  ಗಂಗಮ್ಮ, ಕರೇಗೌಡ, ಬಿ.ವೈ.ವೆಂಕಟೇಶನಾಯ್ಕ, ಎಂ.ಮಲ್ಲೇಶ್, ಎಸ್.ಪಿ.ಲಿಂಬ್ಯಾನಾಯ್ಕ, ರೇಖಾ, ಪಿ.ವೀರಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.