ಬುಧವಾರ, ಜೂಲೈ 8, 2020
23 °C

ಜರ್ಮನಿಯ ಯಂತ್ರಕ್ಕೆ ₹2 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜರ್ಮನಿಯ ಯಂತ್ರಕ್ಕೆ ₹2 ಕೋಟಿ

ಬೆಂಗಳೂರು: ಗಂಟೆಗೆ 100 ಅಡಿ ಕೊರೆಯುವ ಕೊಳವೆಬಾವಿ ಯಂತ್ರ, ಅತ್ಯಾಧುನಿಕ ತಂತ್ರಜ್ಞಾನದ ದೇಸಿ ಯಂತ್ರಗಳು, ನೀರು ಗುರುತಿಸುವ ತಂತ್ರಜ್ಞಾನ... ಹೀಗೆ ಕೊಳವೆಬಾವಿ ಕುರಿತ ಭರಪೂರ ಮಾಹಿತಿಗಳ ಲೋಕ ಇಲ್ಲಿ ಅನಾವರಣಗೊಂಡಿತ್ತು. –ಇದು ಕಂಡುಬಂದದ್ದು, ರಿಗ್‌ ಮಾಲೀಕರ ಸಂಘ, ಬೋರ್‌ವೆಲ್‌ ಡ್ರಿಲ್ಲಿಂಗ್‌ ಗುತ್ತಿಗೆದಾರರ ಸಂಘ, ಡ್ರಿಲ್ಲಿಂಗ್‌ ಟುಡೇ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬೋರ್‌ವೆಲ್ ಡ್ರಿಲ್‌ಟೆಕ್ ಎಕ್ಸ್‌ಪೋ–2018’ ರ ಕಾರ್ಯಕ್ರಮದಲ್ಲಿ.

ಕೊಳವೆಬಾವಿ ಕೊರೆಯುವ ನವೀನ ಉದ್ಯಮ ಮತ್ತು ತಂತ್ರಜ್ಞಾನದ ಕುರಿತು ಮಾಹಿತಿ ನೀಡುವ ಮೇಳ ಇದಾಗಿತ್ತು. ಕೊಳವೆಬಾವಿ ಕೊರೆಯಲು ಬೇಕಾಗುತ್ತಿದ್ದ ಸಮಯ, ಸಿಬ್ಬಂದಿ, ಡೀಸೆಲ್ ಎಲ್ಲವನ್ನೂ ಆಧುನಿಕ ಯಂತ್ರಗಳು ಹೇಗೆ ಕಡಿಮೆ ಮಾಡಲಿವೆ ಎಂಬ ಬಗ್ಗೆ ಮೇಳದಲ್ಲಿ ತಿಳಿಸಿಕೊಡಲಾಗುತ್ತಿತ್ತು.

ಕೇವಲ ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಮಾಡುವ, ಕಡಿಮೆ ದೂಳು ಆಗುವ, ಅತ್ಯಂತ ವೇಗವಾಗಿ ಕೊರೆಯುವ ಜರ್ಮನಿಯ ಯಂತ್ರ ಮೇಳದಲ್ಲಿ ಗಮನಸೆಳೆಯಿತು. ಇದರ ಬೆಲೆ ಸುಮಾರು ₹2 ಕೋಟಿ.

ಕಡಿಮೆ ಬೆಲೆಯ ದೇಸಿ ಯಂತ್ರಗಳು ಈ ಮೇಳದಲ್ಲಿ ಗಮನಸೆಳೆದವು. ಆಂಧ್ರ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರದ 100ಕ್ಕೂ ಹೆಚ್ಚು ಯಂತ್ರಗಳು ಇಲ್ಲಿ ಕಂಡುಬಂದವು. ಟ್ರಕ್, ಏರ್ ಕಂಪ್ರೈಸರ್, ಡ್ರಿಲ್ಲಿಂಗ್ ಮಿಷನ್, ಮಳೆ ನೀರು ಸಂಗ್ರಹ ವ್ಯವಸ್ಥೆಯಲ್ಲಿನ ಆಧುನಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಳಿಗೆಗಳು ಇಲ್ಲಿದ್ದವು.

ಕಿರುಕುಳ ನಿಯಂತ್ರಣಕ್ಕೆ ಕ್ರಮ: ‘ಪೊಲೀಸರಿಂದ ಬೋರ್‌ವೆಲ್‌ ಹಾಗೂ ರಿಗ್‌ ಮಾಲೀಕರಿಗೆ ಕಿರುಕುಳ ಉಂಟಾಗುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ವಸತಿ ಸಚಿವ ಎಂ.ಕೃಷ್ಣಪ್ಪ ಭರವಸೆ ನೀಡಿದರು.

ಎಕ್ಸ್‌ಪೊಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾವೇರಿ ನೀರು ಮಾತ್ರ ನಗರಕ್ಕೆ ಸಾಕಾಗುವುದಿಲ್ಲ. ಬೋರ್‌ವೆಲ್‌ ಇರುವ ಕಾರಣಕ್ಕೆ ಬೆಂಗಳೂರಿನ ಜನ ನೆಮ್ಮದಿಯಿಂದ ನೀರು ಪಡೆಯುತ್ತಿದ್ದಾರೆ. ಕೊಳವೆಬಾವಿ ಕೊರೆಯುವವರ ಶ್ರಮವನ್ನು ಶ್ಲಾಘಿಸಬೇಕು’ ಎಂದರು.

‘ಇದನ್ನು ಕೊರೆಯುವ ಕೆಲಸಗಾರರಿಗೆ ನಿವೇಶನ ನೀಡುವಂತೆ ಮನವಿ ಬಂದಿದೆ. ಶೀಘ್ರ ನಿವೇಶನ ಹಂಚಿಕೆ ಮಾಡುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಿ ಇದರ ಉಪಯೋಗ ಪಡೆಯಬೇಕು’ ಎಂದು ಹೇಳಿದರು.

ಸ್ಥಳ: ತುಮಕೂರು ರಸ್ತೆಯಲ್ಲಿನ ನೀಲಕಂಠ ಕನ್ವೆನ್ಷನ್ ಸೆಂಟರ್‌ನಲ್ಲಿ ಮೇಳ ನಡೆಯುತ್ತಿದ್ದು, ಶನಿವಾರವೂ ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.