ಗುರುವಾರ , ಜೂಲೈ 2, 2020
27 °C

ಸಾಂತ್ವನ ಹೇಳಲು ಬಂದ ಶಾಸಕರಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಬಳಿಕ ಉಂಟಾಗಿದ್ದ ಬಿಗುವಿನ ವಾತಾವರಣ ಶುಕ್ರವಾರ ತಿಳಿಯಾಗಿದೆ. ಸುರತ್ಕಲ್‌, ಕಾಟಿಪಳ್ಳ ಸೇರಿದಂತೆ ನಗರದ ಎಲ್ಲೆಡೆ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮುಂದುವರಿದಿದೆ. 18 ಕೆಎಸ್‌ಆರ್‌ಪಿ, 10 ಸಿಎಆರ್‌, 6 ಡಿಎಆರ್‌ ತುಕುಡಿ, ತುಮಕೂರು, ಉಡುಪಿ, ಕೊಡಗು ಜಿಲ್ಲೆಗಳಿಂದ 300 ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಎಸ್‌ಪಿ ರ‍್ಯಾಂಕ್‌ನ ಐವರು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರ‍್ಯಾಂಕ್‌ನ ಒಬ್ಬ ಅಧಿಕಾರಿ ನಗರದಲ್ಲಿ ಬಿಡಾರ ಹೂಡಿದ್ದು, ಬಂದೋಬಸ್ತ್‌ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.

ದೀಪಕ್‌ ಮನೆಗೆ ಶಾಸಕ ಬಾವ ಭೇಟಿ: ದೀಪಕ್‌ ರಾವ್‌ ಅವರ ಕಾಟಿಪಳ್ಳದ ನಿವಾಸಕ್ಕೆ ಸ್ಥಳೀಯ ಶಾಸಕ ಬಿ.ಎ. ಮೊಯಿದ್ದೀನ್‌ ಬಾವ ಶುಕ್ರವಾರ ಭೇಟಿ ನೀಡಿದರು. ಸಾಂತ್ವನ ಹೇಳಲು ಬಂದಿದ್ದ ಅವರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡರು.

ಶಾಸಕರು ನೀಡಿದ ₹ 5 ಲಕ್ಷ ಪರಿಹಾರ ಹಣವನ್ನು ಸ್ವೀಕರಿಸಲು ನಿರಾಕರಿಸಿದ ದೀಪಕ್‌ ರಾವ್‌ ಕುಟುಂಬದವರು, ‘ನಿನ್ನೆಯೇ ಅಂತ್ಯಕ್ರಿಯೆಗೆ ಬರಬೇಕಿತ್ತು. ಇಂದು ಏಕೆ ಬಂದಿದ್ದೀರಿ’ ಎಂದು ಪ್ರಶ್ನಿಸಿದರು.

‘ನಿನ್ನೆ ಉದ್ವಿಗ್ನ ಸ್ಥಿತಿ ಇದ್ದುದರಿಂದ ಶಾಂತಿಗೆ ಭಂಗವಾಗಬಹುದು ಎಂಬ ಕಾರಣಕ್ಕೆ ಪೊಲೀಸರು ಅಂತ್ಯಕ್ರಿಯೆಗೆ ಬರಬೇಡಿ ಎಂದಿದ್ದರು, ಹಾಗಾಗಿ ಬರಲಿಲ್ಲ. ನಾನು ಮನೆಯಲ್ಲೇ ದುಃಖದಿಂದ ಕುಳಿತಿದ್ದೆ’ ಎಂದು ಬಾವ ಪ್ರತಿಕ್ರಿಯೆ ನೀಡಿದರು.

ದೀಪಕ್‌ ಸಹೋದರ ಸತೀಶ್‌ ಅವರಿಗೆ ಖಾಸಗಿ ಕಂಪೆನಿಯಲ್ಲಿ ನೌಕರಿ ಕೊಡಿಸುವುದಾಗಿಯೂ ಭರವಸೆ ನೀಡಿದರು. ಆದರೆ, ಕುಟುಂಬದವರು ಯಾವುದೇ ಸಹಾಯ ಬೇಡ ಎಂದು ಹೇಳಿ, ಶಾಸಕರನ್ನು ವಾಪಸ್‌ ಕಳುಹಿಸಿದರು.

ಸಮಗ್ರ ತನಿಖೆ: ದೀಪಕ್ ಹತ್ಯೆ ಪ್ರಕರಣದಲ್ಲಿ ಯಾರೂ ರಾಜಕೀಯ ಲಾಭ ಪಡೆದುಕೊಳ್ಳಬಾರದು ಎಂದು ಹೇಳಿದ ಆಹಾರ ಸಚಿವ ಯು.ಟಿ. ಖಾದರ್, ಒಂದು ವರ್ಷದಲ್ಲಿ ನಡೆದಿರುವ ಕೊಲೆ, ಕೊಲೆಯತ್ನ ಪ್ರಕರಣಗಳ ಸಮಗ್ರ ತನಿಖೆ ನಡೆಸಲಾಗುವುದು. ಈ ಕುರಿತು ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದರು.

‘ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪೊಲೀಸ್ ತನಿಖೆ ನಡೆದ ಬಳಿಕವಷ್ಟೇ ಕಾರಣ ಗೊತ್ತಾಗಲಿದೆ. ಪೊಲೀಸ್ ತನಿಖೆ ದಾರಿ ತಪ್ಪಿಸಲು, ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಹಾಗೂ ಇಲ್ಯಾಸ್ ಫೋಟೋ ಹಾಕುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ದೀಪಕ್ ಹತ್ಯೆ ಪ್ರಕರಣಕ್ಕೂ, ಇಲಿಯಾಸ್‌ಗೂ ಸಂಬಂಧವಿಲ್ಲ ಎಂದು ಈಗಾಗಲೇ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈಗ ಟಾರ್ಗೆಟ್ ಗ್ರೂಪ್ ಕಾರ್ಯನಿರ್ವಹಿಸುತ್ತಿಲ್ಲ. ಪೊಲೀಸರು ಇದನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮನೆ ಎದುರು ಧರಣಿಯ ಎಚ್ಚರಿಕೆ: ದೀಪಕ್‌ ಹತ್ಯೆಯ ಆರೋಪಿಗಳು ಬಿಜೆಪಿ ಕಾರ್ಯಕರ್ತರು ಎಂಬ ಶಾಸಕ ಬಿ.ಎ. ಮೊಯಿದ್ದೀನ್‌ ಬಾವ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್‌, ಶಾಸಕರು ಇದನ್ನು ಸಾಬೀತುಪಡಿಸಬೇಕು. ಇಲ್ಲದೇ ಇದ್ದರೆ, ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಧರಣಿ ನಡೆಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಬಾವ, ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಅಪರಾಧಿಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸುವುದು, ಅವರ ಜತೆಗೆ ಭಾವಚಿತ್ರ ತೆಗೆಸಿಕೊಳ್ಳುವುದು ಬಾವ ಅವರ ಜಾಯಮಾನ ಎಂದು ಹೇಳಿದರು.

ಬಿಜೆಪಿ ರಸ್ತೆತಡೆ: ದೀಪಕ್ ರಾವ್ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮಂಗಳೂರು ಹಾಗೂ ಉಡುಪಿಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿದವು.

ನಗರದ ಬೆಸೆಂಟ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ, ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.

ತೀವ್ರಗೊಂಡ ವಿಚಾರಣೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಶೀಘ್ರದಲ್ಲಿಯೇ ಕೊಲೆಗೆ ಕಾರಣವನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈಗಾಗಲೇ ಮೊಹಮ್ಮದ್ ನೌಷಾದ್‌ ಹಾಗೂ ಮೊಹಮ್ಮದ್‌ ಇರ್ಷಾನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಪ್ರಮುಖ ಆರೋಪಿ ಪಿಂಕಿ ನವಾಝ್‌ ಮತ್ತು ರಿಜ್ವಾನ್‌ ಅವರನ್ನು ವಿಚಾರಣೆ ಮಾಡಬೇಕಿದ್ದು, ವೈದ್ಯರ ಸಲಹೆಯ ನಂತರ ವಿಚಾರಣೆ ಆರಂಭಿಸಲಾಗುವುದು ಎಂದು ತಿಳಿಸಿವೆ.

ಬಹಿರಂಗವಾದ ವಿಡಿಯೊ

3ರಂದು ರಾತ್ರಿ ದುಷ್ಕರ್ಮಿಗಳಿಂದ ಬಶೀರ್‌ ಮೇಲೆ ನಡೆದ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಶುಕ್ರವಾರ ಬಹಿರಂಗವಾಗಿದ್ದು, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಕೆಲ ಮಾಧ್ಯಮಗಳಲ್ಲೂ ಈ ದೃಶ್ಯಗಳು ಪ್ರಸಾರವಾದವು. ಕಾನೂನು, ಸುವ್ಯವಸ್ಥೆಯ ದೃಷ್ಟಿಯಿಂದ ಸಿಸಿಟಿವಿ ದೃಶ್ಯಾವಳಿ ಪ್ರಸಾರ ಮಾಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.