ಸೋಮವಾರ, ಜೂಲೈ 6, 2020
27 °C

ರೈತರ ಸಾಲದ ಮರು ಪಾವತಿ ಅವಧಿಯನ್ನು ವಿಸ್ತರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ರಾಜ್ಯ ಸರ್ಕಾರ ಸಹಕಾರಿ ಸಂಸ್ಥೆಗಳಲ್ಲಿನ ₹ 50 ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಿರುವುದು ಸ್ವಾಗತಾರ್ಹ. ಆದರೆ ರೈತರ ಸಾಲ ಮರುಪಾವತಿಯ ಅವಧಿಯನ್ನು ಡಿ.31ರ ಬದಲು ಮಾ.31ವರೆಗೆ ವಿಸ್ತರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ರವಿ ಕುಗ್ವೆ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ಕಾರಣಗಳಿಗೆ ಮಲೆನಾಡು ಭಾಗದ ಅನೇಕ ರೈತರು ಡಿ.31ರೊಳಗೆ ತಮ್ಮ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಸರ್ಕಾರದ ಸುತ್ತೋಲೆ ಪ್ರಕಾರ ಈ ದಿನಾಂಕದೊಳಗೆ ಸಾಲ ಮರುಪಾವತಿ ಮಾಡಿದವರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ಲಭ್ಯವಾಗುತ್ತದೆ. ಸರ್ಕಾರ ರೈತರ ಸಮಸ್ಯೆಯನ್ನು ಪರಿಗಣಿಸಿ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಶರಾವತಿ ಹಿನ್ನೀರಿನಿಂದ ಸಾಗರಕ್ಕೆ ಕುಡಿಯುವ ನೀರು ಪೂರೈಸುವ ಮಾರ್ಗಮಧ್ಯದಲ್ಲಿನ ಹಳ್ಳಿಗಳಿಗೆ ನೀರು ಪೂರೈಸಲು ₹ 22 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಸರ್ಕಾರ ಘೋಷಿಸಿದೆ. ಆದರೆ ಈ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಪಡೆಯದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿ ಶಂಕುಸ್ಥಾಪನೆಗೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ ಹಲವು ಪ್ರವಾಸೋದ್ಯಮ ಕೇಂದ್ರಗಳು ಇದ್ದರೂ ಅವುಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಫಲರಾಗಿದ್ದಾರೆ. ಬಗರ್‌ಹುಕುಂ ಸಮಸ್ಯೆ ಬಗೆಹರಿಸಲು ತೋರಿಸಿದಷ್ಟು ಆಸಕ್ತಿಯನ್ನು ಅವರು ಪ್ರವಾಸೋದ್ಯಮ ಅಭಿವೃದ್ಧಿ ವಿಷಯಕ್ಕೆ ತೋರಿಸುತ್ತಿಲ್ಲ ಎಂದು ಟೀಕಿಸಿದರು.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿರುವ ಯಾವುದೇ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು. ಜ.9ರಂದು ಮಂಗಳೂರಿನಲ್ಲಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಸೌಹಾರ್ದ ನಡಿಗೆ ಏರ್ಪಡಿಸಿದ್ದು ಎಲ್ಲಾ ಜಾತ್ಯತೀತ, ಪ್ರಗತಿಪರ ಮನಸ್ಸುಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದರು. ಜೆಡಿಎಸ್‌ ಮುಖಂಡರಾದ ಕನ್ನಪ್ಪ ಬೆಳಲಮಕ್ಕಿ, ಸೈಯದ್ ಜಾಕೀರ್‌, ಅಣ್ಣಪ್ಪ ಎಚ್‌.ಕೆ, ವಸಂತ ಶೇಟ್‌, ದುಷ್ಯಂತ ಜಿಗಳೆಮನೆ, ತಾಸ್ವಿನ್‌ ಆಲಿ, ರೊಡ್ಡಿ ದೇವಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.