ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಿಗೆ ತೆಪ್ಪದ ಹರಕೆ ತೀರಿಸಿದ ಭಕ್ತರು

Last Updated 6 ಜನವರಿ 2018, 6:39 IST
ಅಕ್ಷರ ಗಾತ್ರ

ಬಾದಾಮಿ: ಬನಶಂಕರಿದೇವಿಗೆ ಹರಕೆ ಹೊತ್ತ ಭಕ್ತರು ಅದನ್ನು ಪೂರೈಸಲು ಶುಕ್ರವಾರ ಹರಿದ್ರಾತೀರ್ಥ ಪುಷ್ಕರಣಿಯಲ್ಲಿ ತಮ್ಮ ಮಕ್ಕಳನ್ನು ತೆಪ್ಪದಲ್ಲಿ ಬಿಡುವ ಮೂಲಕ ಹರಕೆ ತೀರಿಸಿದರು.

ಮಳೆಯ ಅಭಾವದಿಂದ ಹರಿದ್ರಾ ತೀರ್ಥ ಹೊಂಡವು 3 ವರ್ಷಗಳಿಂದ ಬರಿದಾಗಿತ್ತು. ಈ ಬಾರಿ ನವಿಲುತೀರ್ಥ ಜಲಾಶಯದಿಂದ ನೀರಾವರಿ ಕಾಲುವೆ ಮೂಲಕ ಹೊಂಡಕ್ಕೆ ನೀರು ಸಂಗ್ರವಾಗಿದ್ದರಿಂದ ತೆಪ್ಪದ ಹರಕೆ ತೀರಿಸಲು ಭಕ್ತರಿಗೆ ಅನುಕೂಲವಾಗಿದೆ.

ಮಕ್ಕಳಾಗದವರು, ಮಕ್ಕಳಾಗ ಬೇಕು ಎಂದು ಬಯಸಿದವರು ಮತ್ತು ಮಗುವಿನ ಆರೋಗ್ಯದ ಬಗ್ಗೆ ದೇವಿಗೆ ಬೇಡಿಕೊಂಡವರು ಇಷ್ಟಾರ್ಥ ಸಿದ್ಧಿಯಾದರೆ ಹರಕೆ ತೀರಿಸಲು ಹೊಂಡದಲ್ಲಿ ಮಕ್ಕಳನ್ನು ತೆಪ್ಪದಲ್ಲಿ ಬಿಡುವ ಸಂಪ್ರದಾಯ ನೂರಾರು ವರ್ಷಗಳಿಂದ ಬಂದಿದೆ.

ಚೊಳಚಗುಡ್ಡ ಗ್ರಾಮದ ಅಂಬಿಗೇರ ಸಮಾಜದ ಈಜುಗಾರ ಯುವಕರು ಮಕ್ಕಳನ್ನು ತೆಪ್ಪದಲ್ಲಿ ಬಿಡುವ ಕಾಯಕವನ್ನು ಮಾಡುತ್ತಾರೆ. ಆಯತಾಕಾರವಾಗಿ ಬಾಳೆದಿಂಡನ್ನು ಕಟ್ಟಿ ಹೂಮಾಲೆ ಹಾಕಿ ತೆಪ್ಪವನ್ನು ಅಲಂಕಾರ ಮಾಡುವರು. ಹರಿದ್ರಾತೀರ್ಥದ ಪೂರ್ವ ದಿಕ್ಕಿನ ದಂಡೆಯಲ್ಲಿದ್ದ ಹತ್ತಿಮರದ ಸತ್ಯವ್ವ ದೇವಾಲಯದಿಂದ ಪೂರ್ವದಿಕ್ಕಿನ ಹರಿದ್ರಾತೀರ್ಥ ಹೊಂಡದ ದಂಡೆಯ ಬನಶಂಕರಿ ದೇವಾಲಯದ ಎದುರಿನ ವರೆಗೆ ತೆಪ್ಪದಲ್ಲಿ ಮಗುವನ್ನು ಕೂಡಿಸಿಕೊಂಡು ಸಾವಕಾಶವಾಗಿ ಹೊಂಡದಲ್ಲಿ ಈಜುತ್ತಾ ಬರುತ್ತಾರೆ.

ಹೊಂಡದ ಒಂದು ದಂಡೆಯಿಂದ ಇನ್ನೊಂದು ದಂಡೆಗೆ ಅಂಬಿಗೇರ ಯುವಕರು ತೆಪ್ಪದಲ್ಲಿ ಮಗುವನ್ನು ಕರೆದುಕೊಂಡು ಬರುವಾಗ ಪೋಷಕರಿಗೆ ಆತಂಕ, ಭಯ ಆವರಿಸಿರುತ್ತದೆ. ಮಗು ತೆಪ್ಪದಲ್ಲಿ ಅಳುತ್ತಿದ್ದರೂ ಯುವಕರು ಸಮಾಧಾನ ಮಾಡುತ್ತ ತೆಪ್ಪವನ್ನು ನೂಕುತ್ತಾ ಬರುತ್ತಾರೆ. ಪಶ್ಚಿಮದ ದಂಡೆಗೆ ತೆಪ್ಪ ಬಂದಾಗ ಪೋಷಕರು ನಿಟ್ಟುಸಿರು ಬಿಟ್ಟು ಸಂತಸವನ್ನು ವ್ಯಕ್ತಪಡಿಸುತ್ತಾರೆ.

ಮಗು ತೆಪ್ಪದಿಂದ ದಡ ಸೇರಿದ ಮೇಲೆ ಮಗುವಿನ ತಾಯಿ, ಕುಟುಂಬದ ಮಹಿಳೆಯರು ಮತ್ತು ಸದಸ್ಯರು ಮಗುವಿಗೆ ಆರತಿ ಬೆಳಗಿ ಹೊಸ ಬಟ್ಟೆಹಾಕಿ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯುವರು. ಚೊಳಚಗುಡ್ಡ ಗ್ರಾಮದ ಶಂಕ್ರಪ್ಪ ಬಾರಕೇರ ಮತ್ತು ಮಾರುತಿ ಬಾರಕೇರ ತೆಪ್ಪದ ಕಾರ್ಯದಲ್ಲಿ ತೊಡಗಿದ್ದರು.

‘ಮಕ್ಕಳ ಸಲುವಾಗಿ ದೇವರಿಗೆ ಬೇಡಿಕೊಂಡಿದ್ದೀವ್ರಿ. ನಮ್ಮ ಹರಕೆಗೆ ದೇವಿಯು ಕೃಪೆತೋರಿದ್ದಾಳೆ. ನೀರು ಬರಲಾರದಕ ನಾವು ತೆಪ್ಪದ ಹರಕಿ ಮಾಡಿದ್ದಿಲ್ಲ. ಈಗ ಹೊಂಡಕ್ಕೆ ನೀರು ಬಂದೈತ್ರಿ ಅದಕ್ಕ ದೇವಿಗೆ ಹರಕಿ ತೀರಿಸಿದೀವ್ರಿ’ ಎಂದು ಕಡಕೋಳ ಗ್ರಾಮದ ಸುರೇಶ ಹಡಪದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT